ಗೋಕರ್ಣ: ಭಕ್ತಿಮಾರ್ಗವನ್ನು ಅನುಸರಿಸಿದವರಿಗೆ ಮುಕ್ತಿ ಖಚಿತ. ಶಕ್ತಿಗಿಂತ ಭಕ್ತಿ ಮುಖ್ಯ ಎಂದು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 19ನೇ ದಿನವಾದ ಗುರುವಾರ ಜೀವಯಾನ ಮಾಲಿಕೆಯಲ್ಲಿ ‘ಯಮನನ್ನು ಗೆದ್ದವರುಂಟೇ’ ಎಂಬ ವಿಷಯದ ಬಗ್ಗೆ ಪ್ರವಚನ (pravachana) ನೀಡಿದರು. ಅಮೃತತ್ವವನ್ನು ಕಳೆದುಕೊಂಡ ಪ್ರತಿ ಜೀವವೂ ಅಮರತ್ವಕ್ಕಾಗಿ ಹಪಹಪಿಸುತ್ತಿರುತ್ತದೆ. ಇದು ಪ್ರತಿ ಜೀವದ ಆಳ, ಗಾಢ ಬಯಕೆ. ಶಾಶ್ವತವಾಗಿ ಬದುಕಬೇಕು ಎಂಬ ಉದ್ದೇಶದಿಂದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಬದುಕಲು ಬಯಸುವವರು ಎಷ್ಟು ಕಾಲ ಬದುಕಿದರೂ, ಅನಿವಾರ್ಯವಾದ ಮೃತ್ಯುವನ್ನು ಮುಂದೂಡುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ : ಆಗಸ್ಟ್ ೮ರಂದು ವಿವಿಧೆಡೆ ಅಡಿಕೆ ಧಾರಣೆ
ನಮಗೆ ಕ್ಲೇಶವಾದದ್ದನ್ನು ಬೇರೆಯವರಿಗೆ ಮಾಡಬಾರದು. ಅಮರತ್ವಕ್ಕೆ ತಪಸ್ಸು ಮಾಡಿದ ರಾವಣ ಬೇರೆಯವರನ್ನು ಕ್ರೂರವಾಗಿ ಸಾಯಿಸಲು ಬಯಸುತ್ತಾನೆ. ಇದೇ ರಾಕ್ಷಸತ್ವ. ಇಂಥ ರಾವಣ, ಯಮನ ಜತೆ ಯುದ್ಧಕ್ಕೆ ಮುಂದಾದ. ವ್ಯವಸ್ಥೆ ಏರ್ಪಡಿಸುವ ಮತ್ತು ವ್ಯವಸ್ಥೆಯ ಭಂಜಕರ ನಡುವಿನ ಸಂಘರ್ಷ ಇದಾಗಿತ್ತು. ಮೃತ್ಯುಕಾರಕವಾದ ಕಾಲದಂಡದೊಂದಿಗೆ ರಥಾರೂಢನಾಗಿ ಯಮ ಯುದ್ಧಕ್ಕೆ ಸಜ್ಜಾಗುತ್ತಾನೆ. ಕಾಲಕ್ಕೆ ಬಂದ ಕ್ರೋಧದಿಂದ ದೇವರೂ ಭೀತಗೊಂಡರು. ಯಮನ ಪರಿವಾರ ನೋಡಿದ ರಾವಣನ ಅಮಾತ್ಯರು ಯುದ್ಧ ಅಸಾಧ್ಯ ಎಂದು ಹೇಳಿ ಕಾಲಿಗೆ ಬುದ್ಧಿ ಹೇಳಿದರು. ಆದರೆ ರಾವಣ ಧೈರ್ಯದಿಂದ ಕಾಲನನ್ನು ಎದುರಿಸಿದ. ರಾವಣನ ಮರ್ಮಸ್ಥಾನಗಳನ್ನು ಯಮ ಕತ್ತರಿಸಿದ. ರಾವಣ ನಿಶ್ಚೇತನಾಗಿ ಬೀಳುತ್ತಾನೆ. ಎಚ್ಚೆತ್ತುಕೊಂಡು ಯಮನ ಮೇಲೆ ಬಾಣಪ್ರಹಾರ ಮಾಡಿದ. ಘೋರ ಕದನದಲ್ಲಿ ಯಮನ ಮುಂದೆ ರಾವಣದ ಆಟ ನಡೆಯಲಿಲ್ಲ. ಆದರೆ ವರಬಲ ಇದ್ದ ರಾವಣ ಸಾಯಲಿಲ್ಲ ಎಂದು ಬಣ್ಣಿಸಿದರು.
ಇದನ್ನೂ ಓದಿ : ಮನಸೂರೆಗೊಂಡ ಯಕ್ಷಗಾನ ಪ್ರದರ್ಶನ
ಇಡೀ ಯಮಲೋಕವನ್ನು ರಾವಣ ಬಾಣಗಳಿಂದ ಮುಚ್ಚಿದಾಗ ಸಿಟ್ಟುಗೊಂಡು ಬಿಟ್ಟ ಉಸಿರಿನಿಂದ ಧೂಮಕರಾಳವಾದ ಧೂಪಾಗ್ನಿಗೆ ಮೃತ್ಯು ಹಾಗೂ ಕಾಲ ಸಂತಸಗೊಂಡರು. ಮೂರು ಲೋಕವನ್ನೂ ಮುಕ್ಕುವ ಸಾಮಥ್ರ್ಯದ ಮೃತ್ಯು ಯಮನಲ್ಲಿ ರಾವಣನನ್ನು ಕೊಲ್ಲಲು ಅವಕಾಶ ಬೇಡುತ್ತಾನೆ. ಆದರೆ ಅದಕ್ಕೊಪ್ಪದ ಯಮ ತಾನೇ ರಾವಣನನ್ನು ಸಾಯಿಸುತ್ತೇನೆ ಎಂದು ಹೇಳಿ ಅಮೋಘವಾದ ಕಾಲದಂಡಕ್ಕೆ ಕೈಹಾಕುತ್ತಾನೆ. ಕಾಲದಂಡದ ಪ್ರಯೋಗದಿಂದ ಸಾಯದವರು ಯಾರೂ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ : ಕಾರು ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲಿಯೇ ಸಾವು
ಯಮ ರಾವಣನ ಮೇಲೆ ಕಾಲದಂಡವನ್ನು ಎತ್ತಿದಾಗ ಬ್ರಹ್ಮ ಪ್ರತ್ಯಕ್ಷನಾಗಿ ರಾವಣನನ್ನು ಕೊಲ್ಲದಂತೆ ಆದೇಶ ನೀಡುತ್ತಾನೆ. ನೀನು ಕಾಲದಂಡ ಎತ್ತಿದರೆ ರಾವಣ ಸಾಯುತ್ತಾನೆ. ಇದರಿಂದ ಸೃಷ್ಟಿ ಅಥವಾ ಬ್ರಹ್ಮ ಸುಳ್ಳಾಗುತ್ತದೆ ಎಂದು ಬ್ರಹ್ಮ ಹೇಳುತ್ತಾನೆ. ಲೋಕದ ಪಿತಾಮಹನನ್ನು ಗೌರವಿಸಿ, ಯಮ ಸಂಯಮ ಸಾಧಿಸಿ, ದಂಡವನ್ನು ಹಿಂದಕ್ಕೆ ಸೆಳೆಯುತ್ತಾನೆ. ಯಮ ತನ್ನ ಪರಿವಾರದೊಂದಿಗೆ ಅದೃಶ್ಯವಾದಾಗ ರಾವಣ ಗೆದ್ದೆನೆಂದು ಬೀಗಿದ. ರಾವಣನಿಗೆ ಸಾವಿನ ಕಾಲ ಸನ್ನಿಹಿತವಾಗದ ಕಾರಣ ರಾವಣ ಸಾಯಲಿಲ್ಲ ಎಂದು ವಿವರಿಸಿದರು.
ವಿಡಿಯೋ ಸಹಿತ ಇದನ್ನೂ ಓದಿ : ಸರ್ಕಾರಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಮನವಿ
ಯಮನಿಗೆ ಬೆಚ್ಚದ, ಬೆದರದ ರಾವಣ, ರಾಮನನ್ನು ನೋಡುವ ಮೊದಲೇ ರಾಮ-ಲಕ್ಷ್ಮಣರ ಬಗ್ಗೆ ಭಯ ಹೊಂದಿದ್ದ. ಲಂಕೆಯಲ್ಲಿ ನಡೆಯುತ್ತಿದ್ದ ರಾಮ-ರಾವಣರ ಸಮರದಲ್ಲಿ ಹಲವು ಮಂದಿ ರಾಕ್ಷಸರು ಮೃತಪಟ್ಟರೂ, ಕಪಿಸೈನ್ಯದ ಯಾರೂ ಸಾಯಲಿಲ್ಲ. ಯಮನನ್ನು ಗೆದ್ದ ಅಹಂಕಾರದಲ್ಲಿದ್ದ ರಾವಣನಿಗೆ ತನ್ನ ಪರಿವಾರವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಾವಿನ ಸರಮಾಲೆ ರಾವಣನಿಗೆ ಎದುರಾಯಿತು. ಇಂದ್ರಜಿತು ಅಳಿದಾಗ ರಾವಣ ತತ್ತರಿಸಿದ. ಯಮಧರ್ಮನನ್ನು ಒಪ್ಪಿ, ಆತನೇ ಸರ್ವಶ್ರೇಷ್ಠ ಎಂದು ರಾವಣ ಕೂಡ ಒಪ್ಪಿಕೊಂಡದ್ದನ್ನು ಉದಾಹರಿಸಿದರು.
ಇದನ್ನೂ ಓದಿ : ಕೈ ಚೀಲದಲ್ಲೇ ಸುಟ್ಟು ಕರಕಲಾದ ಮಗನ ಅವಶೇಷ ಕೊಂಡೊಯ್ದು ತಂದೆ
ರಾಮ-ರಾವಣರ ಯುದ್ಧದ ಕೊನೆಯಲ್ಲಿ ರಾವಣ ಸಂಹಾರಕ್ಕೆ ರಾಮ ಯುದ್ಧ ಮಾಡಿದರೆ, ಸಾವಿನ ಪ್ರತೀಕ್ಷೆಯಿಂದ ರಾವಣ ಯುದ್ಧ ಮಾಡುತ್ತಿದ್ದ. ರಾಮನ ಬ್ರಹ್ಮಾಸ್ತ್ರ ರಾವಣದ ಎದೆಯನ್ನು ಬೇಧಿಸುತ್ತದೆ. ಆ ಬಾಣವನ್ನು ಯಮನಂತಿತ್ತು ಎಂದು ವಾಲ್ಮೀಕಿ ಉಲ್ಲೇಖಿಸಿದ್ದಾರೆ. ಸಾವನ್ನು ರಾವಣನ ದಾರಿಯಿಂದ ಗೆಲ್ಲಲಾಗದು ಎನ್ನುವುದನ್ನು ರಾಮಾಯಣ ನಿರೂಪಿಸಿದೆ. ಹೀಗೆ ರಾವಣನ ಸಾವು ಕೂಡಾ ಒಂದು ಪಾಠ ಎಂದು ಬಣ್ಣಿಸಿದರು.
ಇದನ್ನೂ ಓದಿ : ಬಿಜೆಪಿ ಮಹಿಳಾ ಮೋರ್ಚಾದಿಂದ ಕೈಮಗ್ಗ ದಿನಾಚರಣೆ
ಸೋಲು ಕೂಡಾ ಹಿನ್ನಡೆಯಲ್ಲ; ಅದು ಸೋಪಾನ, ಮಾಕಾರ್ಂಡೇಯನ ಮಾರ್ಗದಿಂದ ಯಮನನ್ನು ಗೆಲ್ಲಬಹುದು ಎನ್ನುವುದನ್ನು ನಮ್ಮ ಪುರಾಣ ತೋರಿಸಿಕೊಟ್ಟಿದೆ. ಅಂತರಂಗದಿಂದ ಶಿವನನ್ನು ತಬ್ಬಿಕೊಂಡಾಗ ಯಮನ ಭಯವಿಲ್ಲ. ಕಾಲಕಾಲನನ್ನು ಆಶ್ರಯಿಸಿದರೆ ಯಮನಿಂದ ಮುಕ್ತಿ ಪಡೆಯಬಹುದು. ಶಕ್ತಿಮಾರ್ಗದಿಂದ ಆಗದ್ದನ್ನು ಮಾರ್ಕಾಂಡೇಯ ಭಕ್ತಿಮಾರ್ಗದಿಂದ ಗೆದ್ದು ತೋರಿಸಿದ ಎಂದು ಹೇಳಿದರು.
ಇದನ್ನೂ ಓದಿ : ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ: ರಾಘವೇಶ್ವರ ಸ್ವಾಮೀಜಿ
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಕಾರ್ಯದರ್ಶಿ ಜಿ.ಎಸ್.ಹೆಗಡೆ, ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ ಪುಳು, ಯುವ ಪ್ರಧಾನ ಕೇಶವ ಪ್ರಕಾಶ್ ಮುಣ್ಚಿಕಾನ, ವಿವಿವಿ ಕೇಂದ್ರೀಯ ಸಮಿತಿ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಚಾತುರ್ಮಾಸ್ಯ ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಭಟ್ ಹರಿಹರ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ ಮುರೂರು, ಕಾರ್ಯದರ್ಶಿ ರವೀಂದ್ರ ಭಟ್ ಸೂರಿ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಮುಖ್ಯಸ್ಥ ನರಸಿಂಹ ಭಟ್, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.