ಪುಣೆ (Pune) : ಫೆಬ್ರವರಿ ೧೩, ೨೦೧೦. ಪುಣೆಯ ಕೋರೆಗಾಂವ್ ಪಾರ್ಕ್‌ ಎಂದಿನಂತೆ ಶನಿವಾರದ ವೀಕೆಂಡ್‌ ಮೂಡ್‌ನಲ್ಲಿತ್ತು. ಸ್ಥಳೀಯ ಜನಪ್ರಿಯ ಜರ್ಮನ್ ಬೇಕರಿಯ (German Bakery) ತಾಜಾ ಬೇಯಿಸಿದ ಕುಕೀಗಳು ಮತ್ತು ಪೇಸ್ಟ್ರಿಗಳ ಪರಿಮಳ ಜನರನ್ನು ಆಕರ್ಷಿಸುತ್ತಿತ್ತು.  ಓಶೋ (Osho) ಇಂಟರ್ನ್ಯಾಷನಲ್ ಮೆಡಿಟೇಶನ್ ರೆಸಾರ್ಟ್ಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರು ಬೀದಿಗಳಲ್ಲಿ ತಿರುಗಾಡುತ್ತಿದ್ದರು. ಸ್ಥಳೀಯ ಯುವಕರು ಪ್ರೇಮಿಗಳ ದಿನದ (Valentine day) ಮುನ್ನಾದಿನದ ಸಂಜೆಯನ್ನು ಆನಂದಿಸಲು ಕಾತರರಾಗಿದ್ದರು.  ಆಟೋರಿಕ್ಷಾ ಚಾಲಕರು ಪ್ರಯಾಣಿಕರಿಗಾಗಿ ಸರತಿಯಲ್ಲಿ ನಿಂತಿದ್ದರು. ಕ್ಷಣಮಾತ್ರದಲ್ಲಿ, ಹೆಚ್ಚಿನ ತೀವ್ರತೆಯ ಸ್ಫೋಟ ಇಡೀ ಪ್ರದೇಶವನ್ನು ಅಲುಗಾಡಿಸಿತು. ಐದು ವಿದೇಶಿಯರು ಸೇರಿದಂತೆ ೧೭ ಜನರು ಸಾವನ್ನಪ್ಪಿದರು,  ೫೬ ಜನರು ಗಾಯಗೊಂಡರು. ಈ ಭಯಾನಕ ಸ್ಫೋಟ ಅಲ್ಲಿನ ನಿವಾಸಿಗಳ ಮೇಲೆ ಅಳಿಸಲಾಗದ ಗಾಯವನ್ನು ಉಂಟುಮಾಡಿತು.

ಈ ಪ್ರಕರಣದಲ್ಲಿ ಭಟ್ಕಳದ (Bhatkal) ಮೂವರು ಆರೋಪಿತರಾಗಿದ್ದಾರೆ. ಇಂಡಿಯನ್‌ ಮುಜಾಹಿದ್ದೀನ್‌ನ (Indian Mujahideen) ರಿಯಾಜ್‌ ಭಟ್ಕಳ್‌ (Riyaz Bhatkal), ಇಕ್ಬಾಲ್‌ ಭಟ್ಕಳ್‌ (Iqbal Bhatkal) ಮತ್ತು ಯಾಸಿನ್‌ ಭಟ್ಕಳ್‌ (Yasin Bhatkal). ಈ ಪೈಕಿ ರಿಯಾಜ್‌ ಮತ್ತು ಇಕ್ಬಾಲ್‌ ಭಟ್ಕಳ್‌ ಸಹೋದರರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಯಾಸಿನ್‌ ಭಟ್ಕಳ ಬಂಧನವಾಗಿದ್ದು, ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ.

ಮೊದಲ ಬಂಧನ : ದಾಳಿಯ ನಂತರ, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಸೆಪ್ಟೆಂಬರ್ ೭, ೨೦೧೦ರಂದು ಪುಲ್ಗೇಟ್ ಬಸ್ ನಿಲ್ದಾಣದಲ್ಲಿ ಮಿರ್ಜಾ ಹಿಮಾಯತ್ ಬೇಗ್ (ಆಗ ೨೯ ವರ್ಷ) ನನ್ನು ಬಂಧಿಸಿತು. ಈತನನ್ನು ಲಷ್ಕರ್-ಎ-ತೈಬಾ (Let) ಸದಸ್ಯ ಎಂದು ಎಟಿಎಸ್‌  ಆರೋಪಿಸಿತ್ತು. ಮತ್ತು ಲಾತೂರ್ ಜಿಲ್ಲೆಯ ಉದ್ಗೀರ್‌ನಲ್ಲಿರುವ ಆತನ ನಿವಾಸದಿಂದ ಸುಮಾರು ೧.೨ ಕೆಜಿ ಆರ್‌ಡಿಎಕ್ಸ್ ಅನ್ನು ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿತ್ತು.   ನಂತರ ಅದೇ ವರ್ಷದ ಡಿಸೆಂಬರ್‌ನಲ್ಲಿ, ಬೇಗ್ ಮತ್ತು ಇತರ ಆರು ಮಂದಿ ವಿರುದ್ಧ ಎಟಿಎಸ್‌ ಆರೋಪಪಟ್ಟಿ ಸಲ್ಲಿಸಿತು. ಇದರಲ್ಲಿ ಇಂಡಿಯನ್ ಮುಜಾಹಿದೀನ್ (IM) ಸಂಘಟನೆಯ  ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಯಾಸಿನ್ ಭಟ್ಕಳ್, ಪುಣೆಯ ಮೊಹ್ಸಿನ್ ಚೌಧರಿ ಹಾಗೂ ಎಲ್‌ಇಟಿ ಕಮಾಂಡರ್‌ಗಳಾದ ಫಯಾಜ್ ಕಾಗ್ಜಿ ಮತ್ತು ಜಬಿಯುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್  ಆರೋಪಿಗಳು.

ದಾಳಿಯ ಯೋಜನೆ : ಎಟಿಎಸ್ ಚಾರ್ಜ್‌ಶೀಟ್ ಪ್ರಕಾರ, ೨೦೦೬ರ ಔರಂಗಾಬಾದ್ ಆರ್‌ಡಿಎಕ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದ ಅಬು ಜುಂದಾಲ್ ಮತ್ತು ಫಯಾಜ್ ಕಾಗ್ಜಿಯಂತಹ ಕೆಲವು ಆರೋಪಿಗಳೊಂದಿಗೆ ಬೇಗ್ “ಉತ್ತಮ ಸ್ನೇಹ” ಹೊಂದಿದ್ದ. ಮಾರ್ಚ್ ೨೦೦೮ರಲ್ಲಿ ಬೇಗ್‌ ಕೊಲಂಬೊಗೆ ಹೋಗಿದ್ದ. ಅಲ್ಲಿ ಆತ ಫಯಾಜ್‌ ಕಾಗ್ಜಿ ಮತ್ತು ಜುಂದಾಲ್‌ನಿಂದ ಭಯೋತ್ಪಾದಕ ತರಬೇತಿ ಪಡೆದಿದ್ದ ಎಂದು ಎಟಿಎಸ್‌ ಆರೋಪಿಸಿದೆ. ೨೦೧೦ರ ಜನವರಿಯಲ್ಲಿ ಜರ್ಮನ್ ಬೇಕರಿಯಲ್ಲಿ (Indian Mujahideen) ಬಾಂಬ್ ಇಡುವ ಯೋಜನೆಯನ್ನು ಅಂತಿಮಗೊಳಿಸಲು ಭಟ್ಕಳ ಸಹೋದರರಾದ ರಿಯಾಜ್ ಭಟ್ಕಳ್‌ ಮತ್ತು ಇಕ್ಬಾಲ್ ಭಟ್ಕಳ್ ಅವರ ಸೂಚನೆಯ ಮೇರೆಗೆ ಯಾಸಿನ್ ಭಟ್ಕಳ್ ಮತ್ತು ಮೊಹ್ಸಿನ್ ಚೌಧರಿ ಉದಗೀರ್‌ನಲ್ಲಿ ಬೇಗ್ ನನ್ನು ಭೇಟಿಯಾಗಿದ್ದರು ಎಂದು ಎಟಿಎಸ್ ತಿಳಿಸಿದೆ.  ಫೆಬ್ರವರಿ ೭, ೨೦೧೦ರಂದು, ಬೈಗ್ ಪ್ರಾರಂಭಿಸಿದ ಉದ್ಗೀರ್‌ನಲ್ಲಿರುವ ಗ್ಲೋಬಲ್ ಇಂಟರ್ನೆಟ್ ಕೆಫೆಯಲ್ಲಿ ಬಾಂಬ್ ಅನ್ನು ಜೋಡಿಸಲಾಯಿತು.

ಆ ಕರಾಳ ದಿನ : ಎಟಿಎಸ್ ಪ್ರಕಾರ, ಫೆಬ್ರವರಿ ೮, ೨೦೧೦ ರಂದು ಬೇಗ್ ಮುಂಬೈಗೆ ಹೋಗಿದ್ದ. ಅಲ್ಲಿಂದ ಆತ ಜರ್ಮನ್ ಬೇಕರಿ ಸ್ಫೋಟದಲ್ಲಿ ಬಳಸಲಾದ ಎರಡು ಹ್ಯಾವರ್‌ಸಾಕ್ಸ್ ಮತ್ತು ಸೆಲ್ ಫೋನ್ ಖರೀದಿಸಿದ್ದ. ನಂತರ, ಫೆಬ್ರವರಿ ೧೩ರಂದು, ಬೇಗ್ ಮತ್ತು ಯಾಸಿನ್ ಖಾಸಗಿ ವಾಹನದಲ್ಲಿ ಸ್ಫೋಟಕ ಸಾಧನವನ್ನು ಉದ್ಗೀರ್‌ನಿಂದ ಲಾತೂರ್‌ಗೆ ಸಾಗಿಸಿದ್ದರು. ನಂತರ ಅವರು ಲಾತೂರ್‌ನಿಂದ ಪುಣೆಗೆ ರಾಜ್ಯ ಸಾರಿಗೆ ಬಸ್ ಬಳಸಿದ್ದರು. ಪುಣೆ ತಲುಪಿದ ನಂತರ ಪುಲ್ಗೇಟ್ ಬಸ್ ನಿಲ್ದಾಣದಿಂದ ಪುಣೆ ರೈಲು ನಿಲ್ದಾಣಕ್ಕೆ ಆಟೋರಿಕ್ಷಾವನ್ನು ಹಿಡಿದರು. ಇನ್ನೊಂದು ಆಟೋರಿಕ್ಷಾ ಹಿಡಿದು ಸೆಂಟ್ರಲ್ ಮಾಲ್ ಗೆ ಹೋದರು. ಸಂಜೆ ೫ ಗಂಟೆಯ ಸುಮಾರಿಗೆ ಬೇಕರಿಯಲ್ಲಿ ಹ್ಯಾವರ್‌ಸಾಕ್ಸ್‌ನಲ್ಲಿ ಯಾಸಿನ್‌ ಭಟ್ಕಳ್‌ ಬಾಂಬ್ ಇರಿಸಿದ್ದ. ಸಂಜೆ ೬.೫೦ಕ್ಕೆ ಮೊಬೈಲ್ ಟ್ರಿಗರಿಂಗ್ ಸಾಧನದ ಸಹಾಯದಿಂದ ಅದನ್ನು ಸ್ಫೋಟಿಸಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಬೇಗ್‌ಗೆ ಮರಣದಂಡನೆ : ಏಪ್ರಿಲ್ ೧೮, ೨೦೧೩ರಂದು ಪುಣೆಯ ವಿಚಾರಣಾ ನ್ಯಾಯಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA), ಸೆಕ್ಷನ್ ೩೦೨, ೧೨೦ (ಬಿ) (ಐಪಿಸಿ ಮತ್ತು ಸೆಕ್ಷನ್‌ಗಳ ಉಪವಿಭಾಗದ ಕ್ರಿಮಿನಲ್ ಪಿತೂರಿಗಾಗಿ) ಸೆಕ್ಷನ್ ೧೦(ಬಿ), ೧೬(೧) (ಎ) ಅಡಿಯಲ್ಲಿ ಬೇಗ್‌ಗೆ ಮರಣದಂಡನೆ (Death penalty) ವಿಧಿಸಿತು. ಇದನ್ನು ಪ್ರಶ್ನಿಸಿ ಬೇಗ್  ಬಾಂಬೆ ಹೈಕೋರ್ಟ್‌ಗೆ (Mumbai Highcourt) ಮೇಲ್ಮನವಿ ಸಲ್ಲಿಸಿದ್ದ. ಅಲ್ಲಿ ಆತನ ಮರಣದಂಡನೆಯನ್ನು ಮೇ ೨೦೧೬ರಲ್ಲಿ ಜೀವಾವಧಿ ಶಿಕ್ಷೆಗೆ (life imprisonment) ಪರಿವರ್ತಿಸಲಾಯಿತು. ನಂತರ ಮಹಾರಾಷ್ಟ್ರ (Maharashtra) ಸರ್ಕಾರವು ಆತನ ಮರಣದಂಡನೆಯನ್ನು ಬದಲಾಯಿಸುವ ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ (Supreme Court) ಮನವಿ ಸಲ್ಲಿಸಿತು. ಈ ವಿಷಯ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಯಾಸಿನ್‌ ಭಟ್ಕಳ್‌ ಬಂಧನ : ಬೇಗ್ ಪ್ರಸ್ತುತ ನಾಸಿಕ್ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಸೆಪ್ಟೆಂಬರ್ ೨೦೨೨ರಲ್ಲಿ, ಹಾಸಿಗೆ ಹಿಡಿದಿರುವ ತನ್ನ ತಾಯಿಯನ್ನು ಭೇಟಿಯಾಗಲು ೪೫ ದಿನಗಳ ಪೆರೋಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಏತನ್ಮಧ್ಯೆ,  ಆಗಸ್ಟ್,೨೮ ೨೦೧೩ರಲ್ಲಿ ಭಾರತ-ನೇಪಾಳ ಗಡಿಯಲ್ಲಿ ( India–Nepal border) ಮೋಸ್ಟ್‌ ವಾಂಟೆಡ್‌ (Most Wanted) ಪಟ್ಟಿಯಲ್ಲಿದ್ದ ಯಾಸಿನ್ ಭಟ್ಕಳ್ ಬಂಧನವಾಯಿತು.  ಮಹಾರಾಷ್ಟ್ರ ಎಟಿಎಸ್ ಆಗಸ್ಟ್ ೨೦೧೪ರಲ್ಲಿ ಪುಣೆಯ ನ್ಯಾಯಾಲಯದ ಮುಂದೆ ಯಾಸಿನ್‌ ಭಟ್ಕಳ್‌ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. ಪ್ರಕರಣ ಇನ್ನೂ ನಡೆಯುತ್ತಿದೆ. ಇದಲ್ಲದೆ, ಜೂನ್ ೨೫, ೨೦೧೨ರಂದು ಜುಂದಾಲ್ ನನ್ನು ಸೌದಿ ಅರೇಬಿಯಾದಿಂದ (Saudi Arabia) ಭಾರತಕ್ಕೆ ಗಡೀಪಾರು ಮಾಡಲಾಯಿತು. ಆದಾಗ್ಯೂ, ಆತನನ್ನು ಇನ್ನೂ ಬಂಧಿಸಲಾಗಿಲ್ಲ.