ಭಟ್ಕಳ ಡೈರಿ ವರದಿ

ಬೈಂದೂರು/ಭಟ್ಕಳ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೂಡಾಳ ತಾಲೂಕಿನ ಅಂದೋರ್ಲ ಗ್ರಾಮದ ಮಹೇಶ ವಿಠಲ ಸಾವಂತ ಅವರ ಮನೆಯಲ್ಲಿ ನಡೆಯುತ್ತಿರುವ ೨೧ ದಿನಗಳ ಗಣೇಶೋತ್ಸವದ ಅಂಗವಾಗಿ ವಿಶೇಷ ‘ಗಣಪತಿ ಬಪ್ಪ ಭಜನಾಮೃತ’ ಕಾರ್ಯಕ್ರಮ ನಡೆಯಿತು.

ಗಣೇಶೋತ್ಸವದ ೧೯ನೇ ದಿನವಾದ ಅಂಗಾರಕ ಸಂಕಷ್ಟಿಯಂದು ಹಿರಿಯ ಕಲಾವಿದ ಉಮೇಶ ಮೇಸ್ತ ಶಿರೂರು ಹಾಗೂ ತಂಡದವರು ಸುಮಾರು ಮೂರು ಗಂಟೆಗಳ ಕಾಲ ಭಕ್ತಿಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಉಮೇಶ ಮೇಸ್ತ ಶಿರೂರು ಮರಾಠಿ ಭಕ್ತಿಗೀತೆಗಳನ್ನು ಹಾಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಹಾಗೂ ಕವಿ ಭಟ್ಕಳದ ಉಮೇಶ ಮುಂಡಳ್ಳಿ ಕನ್ನಡ ಮತ್ತು ಹಿಂದಿ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಸುದರ್ಶನ ಮೇಸ್ತ ಶಿರೂರು ಅವರು ಸಹಗಾಯನದಲ್ಲಿ ಭಾಗವಹಿಸಿದರು. ಮರಾಠಿ, ಕನ್ನಡ ಹಾಗೂ ಹಿಂದಿ ಭಕ್ತಿಗೀತೆಗಳ ಸಂಗಮವಾಗಿದ್ದ ‘ಗಣಪತಿ ಬಪ್ಪ ಭಜನಾಮೃತ’ ಕಾರ್ಯಕ್ರಮಕ್ಕೆ ಸ್ಥಳೀಯ ಭಕ್ತರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಯಿತು.

ಕರ್ನಾಟಕದಿಂದ ಆಗಮಿಸಿದ್ದ ಕಲಾವಿದರು ಸ್ಥಳೀಯರೊಂದಿಗೆ ಆತ್ಮೀಯವಾಗಿ ಬೆರೆತು ಕಾರ್ಯಕ್ರಮ ನೀಡಿದ್ದು ವಿಶೇಷವಾಗಿತ್ತು. ಭಾಷೆಯ ಗಡಿಯನ್ನು ಮೀರಿ ಭಕ್ತಿಗೀತೆಗಳು ಭಕ್ತರನ್ನು ಒಂದೆಡೆ ಸೇರಿಸಿದವು.

ಸಂಗೀತ ಕ್ಷೇತ್ರದಲ್ಲಿ ಮಹೇಶ್ ಸಾವಂತ್ ಸೇವೆ: ಮಹೇಶ ಸಾವಂತ ಕಳೆದ ೨೫ ವರ್ಷಗಳಿಂದ ಪಖವಾಜ್ ವಾದನ ಹಾಗೂ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೂಡಾಳದಲ್ಲಿ ಅವರು ‘ಜಗನ್ನಾಥ ಸಂಗೀತ ವಿದ್ಯಾಲಯ’ವನ್ನು ನಡೆಸುತ್ತಿದ್ದು, ಸುಮಾರು ೬೦೦ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಉಮೇಶ ಮೇಸ್ತ ಶಿರೂರು ಹಾಗೂ ತಂಡದವರು ಜಗನ್ನಾಥ ಸಂಗೀತ ವಿದ್ಯಾಲಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.

ಕಲಾವಿದರಿಗೆ ಸಂಗೀತ ಬಳಗದ ಸಾಥ್: ಕಾರ್ಯಕ್ರಮದಲ್ಲಿ ಹರೀಶ್ ಶೇಟ್ ಕುಮಟಾ ಅವರು ತಬಲಾದಲ್ಲಿ, ನವೀನ್ ಶೇಟ್ ಹೊನ್ನಾವರ ಅವರು ಕೀಬೋರ್ಡ್‌ನಲ್ಲಿ, ಶ್ಯಾಮ್ ಮೇಸ್ತ ಶಿರೂರು ಅವರು ಪಖವಾಜ್‌ನಲ್ಲಿ ಹಾಗೂ ಕುಮಾರ್ ಮೇಸ್ತ ಶಿರೂರು ಅವರು ತಾಳದಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದ ಬಳಿಕ ಮಹೇಶ ಸಾವಂತ ಕರ್ನಾಟಕದಿಂದ ಆಗಮಿಸಿದ್ದ ಎಲ್ಲ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.

ಇದನ್ನೂ ಓದಿ: 

ಭಟ್ಕಳ ತಾಲೂಕು ಕಸಾಪದಿಂದ ಡಾ. ಐ.ಆರ್. ಭಟ್ ಅವರಿಗೆ ನುಡಿನಮನ

ಹೊನ್ನೆಮಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಖೋ-ಖೋ ಸಾಧನೆ: ವಿಭಾಗ ಮಟ್ಟಕ್ಕೆ ೬ ಮಂದಿ ಆಯ್ಕೆ