ಭಟ್ಕಳ ಡೈರಿ ವಿಶೇಷ ವರದಿ
ಭಟ್ಕಳ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹುಲಿ ಮತ್ತು ಚಿರತೆಗಳ ಹೆಜ್ಜೆಗುರುತುಗಳು ಪದೇ ಪದೆ ಕಾಣಿಸಿಕೊಳ್ಳುತ್ತಿದ್ದು, ಜನವಸತಿ ಪ್ರದೇಶಗಳಲ್ಲಿಯೇ ಕಾಡುಪ್ರಾಣಿಗಳು ದಾಳಿ ನಡೆಸುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜಾನುವಾರುಗಳ ಮೇಲೆ ದಾಳಿ ಮಾತ್ರವಲ್ಲದೆ, ಮನುಷ್ಯರ ಮೇಲೂ ಚಿರತೆಗಳು ಎರಗಿರುವ ಘಟನೆಗಳು ವರದಿಯಾಗಿವೆ.
ಕೆಲವು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿದ್ದರೆ, ಇನ್ನೂ ಹಲವು ಘಟನೆಗಳು ಅರಣ್ಯದಂಚಿನ ಗ್ರಾಮಗಳಲ್ಲೇ ಸದ್ದಿಲ್ಲದೆ ಮುಚ್ಚಿಹೋಗುತ್ತಿವೆ ಎಂಬ ಆತಂಕವೂ ವ್ಯಕ್ತವಾಗಿದೆ.
ಕಂಡೆಕೊಡ್ಲಿನಲ್ಲಿ ಚಿರತೆ ದಾಳಿ, ಕರು ಬಲಿ: ಇಂದು (ನವೆಂಬರ್ ೧೭ರಂದು) ಭಟ್ಕಳ ತಾಲೂಕಿನ ಕಂಡೆಕೊಡ್ಲು ಪ್ರದೇಶದಲ್ಲಿ ಚಿರತೆಯೊಂದು ಕೊಟ್ಟಿಗೆಯಲ್ಲಿದ್ದ ಕರುವನ್ನು ಕೊಂದು ತಿಂದು ಹಾಕಿದೆ. ಇದೇ ವೇಳೆ ಮತ್ತೊಂದು ದನದ ಮೇಲೂ ದಾಳಿ ನಡೆಸಿದೆ. ಈ ಘಟನೆಯಿಂದ ಸ್ಥಳೀಯರು ಮತ್ತಷ್ಟು ಆತಂಕಕ್ಕೊಳಗಾಗಿದ್ದು, ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಹಿಂದೆಯೂ ನಡೆದಿದ್ದ ಹಲವು ಘಟನೆಗಳು: ಭಟ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಕಾಡುಪ್ರಾಣಿಗಳ ಸಂಚಾರ ಮತ್ತು ದಾಳಿಯ ಘಟನೆಗಳು ವರದಿಯಾಗುತ್ತಿವೆ. ಇಂದು ನಡೆದ ಘಟನೆ ಸಹಿತ ಪ್ರಸಕ್ತ ವರ್ಷವೇ ಐದು ಕಡೆ ದಾಳಿ ಪ್ರಕರಣಗಳು ನಡೆದಿವೆ. ಇತರೆ ಪ್ರಕರಣಗಳು:
• ಸೆಪ್ಟೆಂಬರ್ ೧೬: ವೆಂಕಟಾಪುರ–ಕಂಡೆಕೊಡ್ಲು ವ್ಯಾಪ್ತಿಯಲ್ಲಿ ಹುಲಿ ಕಾಣಿಸಿಕೊಂಡಿತ್ತು.
• ಜೂನ್ ೭: ಯಲ್ವಡಿಕವೂರ ಗ್ರಾಮದಲ್ಲಿ ಚಿರತೆಯೊಂದು ಬಾವಿಗೆ ಬಿದ್ದಿತ್ತು.
• ಮಾರ್ಚ್ ೨೮: ನವಾಯತ್ ಕಾಲೋನಿಯಲ್ಲಿ ಕಪ್ಪು ಚಿರತೆಯೊಂದು ವೃದ್ಧನ ಮೇಲೆ ದಾಳಿ ನಡೆಸಿತ್ತು.
• ಫೆಬ್ರವರಿ ೨೭: ಮುಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಸಲಗದ್ದೆಯಲ್ಲಿ ಚಿರತೆ ದಾಳಿಯಿಂದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು.
ಇದಲ್ಲದೆ, ಮೇ ೨೪, ೨೦೨೪ರಂದು ಮಾರುಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂತ್ಕಳದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರನ್ನು ಚಿರತೆಯೊಂದು ಹೊತ್ತೊಯ್ದಿತ್ತು.
ಅರಣ್ಯದಂಚಿನ ಗ್ರಾಮಗಳಲ್ಲಿ ಆತಂಕ: ಕಾಡುಪ್ರಾಣಿಗಳು ಆಹಾರ ಅರಸಿ ಜನವಸತಿ ಪ್ರದೇಶಗಳತ್ತ ಬರುತ್ತಿರುವ ಘಟನೆಗಳು ಭಟ್ಕಳದಲ್ಲಿ ನಿರಂತರವಾಗಿ ವರದಿಯಾಗುತ್ತಿರುವುದು ಗಂಭೀರ ವಿಚಾರವಾಗಿದೆ. ಜಾನುವಾರುಗಳನ್ನು ಕಳೆದುಕೊಳ್ಳುವ ಭೀತಿಯ ಜೊತೆಗೆ, ಜನರ ಮೇಲೆಯೂ ದಾಳಿ ನಡೆಯುತ್ತಿರುವುದು ಗ್ರಾಮೀಣ ಭಾಗದ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ.
ಕಾಡುಪ್ರಾಣಿಗಳ ಸಂಚಾರವಿರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ನಿಗಾ ಹೆಚ್ಚಿಸಬೇಕು. ದಾಳಿ ನಡೆದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜೊತೆಗೆ, ಜನರ ಮತ್ತು ಜಾನುವಾರುಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಭಟ್ಕಳದ ಗ್ರಾಮೀಣ ಪ್ರದೇಶಗಳಲ್ಲಿ ಹುಲಿ–ಚಿರತೆಗಳ ಹಾವಳಿ ಮುಂದುವರಿಯದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಒತ್ತಾಯ
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಕಂಡೆಕೊಡ್ಲಿನಲ್ಲಿ ಚಿರತೆ ಅಟ್ಟಹಾಸ: ಕರು ಬಲಿ, ಮತ್ತೊಂದು ದನದ ಮೇಲೆ ದಾಳಿ; ಗ್ರಾಮಸ್ಥರಲ್ಲಿ ಆತಂಕ




