ಭಾರತೀಯ ನೌಕಾಪಡೆಯಲ್ಲಿ ಸುದೀರ್ಘವಾಗಿ ಹದಿನೈದು ವರ್ಷಗಳ ಕಾಲ ನಿರಂತರವಾಗಿ ತಮ್ಮ ಅಮೂಲ್ಯವಾದ ಸೇವೆಯನ್ನು ನೀಡಿದ ಹೆಮ್ಮೆಯ ಸೈನಿಕ ಭಟ್ಕಳದ ನಾಗರಾಜ ವೆಂಕ್ಟಯ್ಯ ದೇವಡಿಗ (ex soldier) ಇದೀಗ ನಿವೃತ್ತರಾಗಿ, ತವರಿಗೆ ಆಗಮಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಾಗರಾಜ ದೇವಡಿಗರಿಗೆ ನಮ್ಮ ಭಟ್ಕಳದ ಮುಖ್ಯ ವೃತ್ತದಲ್ಲಿ ಮಾಜಿ ಸೈನಿಕರ ಸಂಘ, ವಿವಿಧ ಸಂಘ ಸಂಸ್ಥೆ ಮತ್ತು ದೇಶಭಕ್ತರಿಂದ ಅಮೋಘವಾದ ಸ್ವಾಗತ ಸಿಕ್ಕಿತ್ತು. ಇತ್ತ ಅವರ ಹುಟ್ಟಿದೂರು ಹೆಬಳೆಯ ಶ್ರೀ ಸಿದ್ಧಿವಿನಾಯಕ ದ್ವಾರ ಬಾಗಿಲಿನಲ್ಲಿ ಪಂಚಾಯತ್ ಸದಸ್ಯರು, ಗೆಳೆಯರ ಬಳಗ ಹಾಗೂ ಸಮಸ್ತ ಗ್ರಾಮಸ್ಥರಿಂದ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿತ್ತು. ಸರ್ಕಲ್ ನಿಂದ ಹೊರಟ ಬೈಕ್ ಮೆರವಣಿಗೆ ಗ್ರಾಮದ ಸುತ್ತೆಲ್ಲ ತಿರುಗಿ ಮನೆ ಸೇರುವ ಹೊತ್ತು ಕತ್ತಲಾಗಿತ್ತು. ಊರಿನ ಯುವಕರ ದೇಶಪ್ರೇಮ ಉಕ್ಕಿ ಹರಿಯುತ್ತಿತ್ತು. ಎಲ್ಲೆಲ್ಲೂ ದೇಶ ಭಕ್ತಿಯ ಜಯಘೋಷಗಳು ಮೊಳಗುತ್ತಿತ್ತು. ದೇಶದ ಭದ್ರತೆ ಮತ್ತು ರಾಷ್ಟ್ರೀಯ ಏಕತೆಯನ್ನು ಕಾಪಾಡುವ ಯೋಧರಿಗೆ ಈ ದೇಶದ ಪ್ರತಿಯೊಬ್ಬ ನಾಗರಿಕನೂ ಗೌರವ ನೀಡಲೇಬೇಕು. ಅಂತಹ ಒಂದು ಅವಿಸ್ಮರಣೀಯ ಸುದಿನ ನಮ್ಮೂರಿನವರ ಪಾಲಿಗೆ ಒದಗಿ ಬಂದಿತ್ತು.
ಇದನ್ನೂ ಓದಿ : ಶ್ರೀಕ್ಷೇತ್ರ ಮುರುಡೇಶ್ವರದಲ್ಲಿ ಬಿಜೆಪಿಯಿಂದ ಸ್ವಚ್ಛತಾ ಕಾರ್ಯ
ನಿವೃತ್ತ ಯೋಧ (ex soldier) ನಾಗರಾಜ ವೆಂಕ್ಟಯ್ಯ ದೇವಡಿಗ ಹುಟ್ಟಿದ್ದು ಭಟ್ಕಳ ತಾಲೂಕಿನ ಹೆಬಳೆ ಎಂಬ ಪುಟ್ಟ ಗ್ರಾಮದಲ್ಲಿ. ಲಕ್ಷ್ಮೀ ಮತ್ತು ವೆಂಕ್ಟಯ್ಯ ದೇವಡಿಗ ದಂಪತಿಯ ಏಕೈಕ ಪುತ್ರನಾದ ಇವರು ಐದು ಜನ ಸಹೋದರಿಯರ ನಡುವೆ ನಾಲ್ಕನೆಯವರಾಗಿ ಜನಿಸಿದರು. ತಮ್ಮ ಮನೆಯ ಸನಿಹದಲ್ಲಿಯೇ ಇರುವ ತೆಂಗಿನಗುಂಡಿಯ ಸರಕಾರಿ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದರು. ಭಟ್ಕಳದ ಹೆಸರಾಂತ ಶಿಕ್ಷಣ ಸಂಸ್ಥೆ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ತಮ್ಮ ಕಾಲೇಜು ಶಿಕ್ಷಣವನ್ನು ಮುಗಿಸಿದರು.
ವಿಡಿಯೋ ಸಹಿತ ಇದನ್ನೂ ಓದಿ : ಹರ್ ಘರ್ ತಿರಂಗ ಅಭಿಯಾನ ಜಾಥಾಕ್ಕೆ ಚಾಲನೆ
ತದನಂತರ ತಾಲೂಕನ್ನು ಬಿಟ್ಟು ಹೊರಗೆ ವೃತ್ತಿಪರ ಶಿಕ್ಷಣಕ್ಕಾಗಿ ಹೋದರು. ಕಾರವಾರದ ಸರಕಾರಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ (Government Polytechnic College) ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ಸ್ ವಿಷಯದಲ್ಲಿ ಡಿಪ್ಲೋಮಾ ಮಾಡಲು ಸೇರಿಕೊಂಡರು.ಈ ಸಂದರ್ಭದಲ್ಲಿ ಐಎನ್ ಎಸ್ ಕದಂಬ ನೌಕಾನೆಲೆಯನ್ನು ನೋಡಿ ವಿಶೇಷವಾಗಿ ಅದರಲ್ಲಿ ಆಸಕ್ತಿ ಮೂಡಿತು. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ತಾನು ಕೂಡ ಇದರಲ್ಲಿ ದೇಶಸೇವೆ ಮಾಡಬೇಕೆನ್ನುವ ಗುರಿ ಇಟ್ಟುಕೊಂಡರು. ಇಂಜಿನಿಯರಿಂಗ್ ಪದವಿ ಪಡೆದು ಪ್ರತಿಷ್ಠಿತ ಕಂಪನಿಯಲ್ಲಿ ಸೇರಿಕೊಂಡು ಲಕ್ಷಲಕ್ಷ ಸಂಪಾದಿಸಬಹುದೆನ್ನುವ ಕಲ್ಪನೆ ಇದ್ದರೂ ಕೂಡ ದಿನೇದಿನೇ ನೌಕಾಪಡೆಯ ಬಗ್ಗೆ ಆಸಕ್ತಿ ಮತ್ತು ರಾಷ್ಟ್ರಪ್ರೇಮ ಹೆಚ್ಚುತ್ತಾ ಹೋಯಿತು. ಇವರ ಡಿಪ್ಲೋಮಾ ಕಾಲೇಜಿನ ಸಹಪಾಠಿಯೊಬ್ಬರು ಇದಕ್ಕೆ ಪೂರಕವಾಗಿ ಪ್ರೋತ್ಸಾಹಿಸಿ, ಭಾರತೀಯ ಸೈನ್ಯದ ಪರೀಕ್ಷೆ ಬರೆಯುವಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ್ದನ್ನು ಇವರೇ ಸ್ಮರಿಸಿಕೊಳ್ಳುತ್ತಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಚಾಲನೆ
ಅಂತೂ ಇವರು ೨೦೦೮ ರಲ್ಲಿ ಭಾರತೀಯ ನೌಕಾಪಡೆಗೆ ಆಯ್ಕೆಯಾಗುತ್ತಾರೆ. ತಮಗೆ ಒಬ್ಬನೇ ಗಂಡು ಮಗನೆಂಬ ಅರಿವಿದ್ದರೂ ಕೂಡ ಇವರ ತಂದೆ ತಾಯಿ ಇವರನ್ನು ಭಾರತಮಾತೆಯ ಸೇವೆಗೆ ಧೈರ್ಯದಿಂದ ಕಳುಹಿಸಿ ಕೊಡುತ್ತಾರೆ. ಈ ಸಂದರ್ಭದಲ್ಲಿ ಪ್ರಥಮ ಹಂತವಾಗಿ ಓಡಿಸ್ಸಾದ ಚಿಲ್ಕಾದಲ್ಲಿ ಬೇಸಿಕ್ ತರಬೇತಿಯನ್ನು ಜುಲೈ ೨೦೦೯ ರಿಂದ ಜನವರಿ ೨೦೧೦ ರವರೆಗೆ ಆರು ತಿಂಗಳುಗಳ ಕಾಲ ಪಡೆದುಕೊಂಡು, ನಂತರ ವೃತ್ತಿಪರ ತರಬೇತಿಯನ್ನು ಕೊಚ್ಚಿಯ ಸಿಗ್ನಲ್ ಸ್ಕೂಲ್ ನಲ್ಲಿ ಪಡೆದುಕೊಂಡರು. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಕಮ್ಯುನಿಕೇಷನ್ ವಿಭಾಗದಲ್ಲಿ ತಮ್ಮ ಸೇವಾಧಿಕಾರವನ್ನು ವಹಿಸಿಕೊಳ್ಳುತ್ತಾರೆ.
ಇದನ್ನೂ ಓದಿ : ಭಟ್ಕಳದಲ್ಲಿ ಬೈಕ್ ರ‌್ಯಾಲಿ ಯಶಸ್ವಿ
ವಿಶಾಖಪಟ್ಟಣದ INS ಕಿರ್ಚ್ ಶಿಪ್ ನಲ್ಲಿ ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ರಷ್ಯಾ, ಸಿಂಗಾಪುರ್, ವಿಯೆಟ್ನಾಂ, ಫಿಲಿಪೈನ್ಸ್ ಮತ್ತು ಇಂಡೋನೇಷ್ಯಾ ಈ ಐದು ಪ್ರಮುಖ ರಾಷ್ಟ್ರಗಳಿಗೆ ಭೇಟಿ ನೀಡಿದಾಗ ಅಲ್ಲಿಯ ಯದ್ದನೌಕೆಯ ಜೊತೆ ಯುದ್ಧ ಅಭ್ಯಾಸದ ತರಬೇತಿಯನ್ನು ಪಡೆದುಕೊಂಡರು. ೨೦೧೨-೨೦೧೪ರ ಎರಡು ವರ್ಷಗಳವರೆಗೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ತಮ್ಮ ಸೇವೆಯನ್ನು ನೀಡಿದರು. ೨೦೧೪-೧೬ ಈ ಎರಡು ವರ್ಷಗಳ ಕಾಲ INS ಸುಜಾತಾದಲ್ಲಿ ಸೇವೆ ನೀಡಿ ದುಬೈ, ಮಸ್ಕತ್, ಅಲ್ ಜುಬೇಲ್, ಕುವೈತ್, ಮಾರಿಷಸ್, ಸಿಚಲ್ಸ್ ಮತ್ತು ಬಹ್ರೇನ್ ದೇಶಗಳಲ್ಲಿ ಸಮರಾಭ್ಯಾಸದ ನಿಪುಣತೆಯನ್ನು ಹೆಚ್ಚಿಸಿಕೊಂಡರು. ೨೦೧೬-೧೭ ಈ ಒಂದು ವರ್ಷದಲ್ಲಿ ಗ್ರೀಸ್, ಲಂಡನ್, ಪೋರ್ಚುಗಲ್, ಮೊರೊಕ್ಕೋ, ನಮೀಬಿಯ, ನೈಜೀರಿಯಾ, ಸೌತ್ ಆಫ್ರಿಕಾ ಮತ್ತು ಮಲೇಷಿಯಾ ದೇಶಗಳಿಗೆ ಸುತ್ತಿ ನೌಕಾಪಡೆಯ ಯುದ್ಧ ನೀತಿಯನ್ನು ಕರಗತ ಮಾಡಿಕೊಂಡರು. ೨೦೧೭-೨೦ ಮೂರು ವರ್ಷ HQ ೩೧ WEU ನಲ್ಲಿ ಸೇವೆ ಸಲ್ಲಿಸಿದರು . ೨೦೨೦-೨೧ ರಲ್ಲಿ INS ಪ್ರಬಲದಲ್ಲಿ ಒಂದು ವರ್ಷ ತಮ್ಮ ಸೇವೆ ಸಲ್ಲಿಸಿದರು. ೨೦೨೧-೨೨ರ ಒಂದು ವರ್ಷ HQ ೩೨ WEU ನಲ್ಲಿ ಸೇವೆ ಸಲ್ಲಿಸಿದರು. ೨೦೨೨ ರಿಂದ Headquarters Eastern Naval Command ರಲ್ಲಿ Petty Officer ಆಗಿ ಸೇವೆ ಸಲ್ಲಿಸಿ ೨೦೨೪ ರ ಜುಲೈ ೩೧ ಕ್ಕೆ ನಿವೃತ್ತಿ ಹೊಂದಿದರು. ನಿವೃತ್ತಿಯಾಗುವ ಎರಡು ವರ್ಷದ ಹಿಂದೆ ತಾನು ಇಷ್ಟಪಟ್ಟ ಊರಿನ ಸ್ವಾತಿ ಎನ್ನುವ ಹುಡುಗಿಯನ್ನು ಎಲ್ಲರ ಮನಸ್ಸನ್ನು ಒಪ್ಪಿಸಿ ವಿವಾಹವಾಗಿ ಇದೀಗ ನಾಲ್ಕು ತಿಂಗಳ ಮಾಹಿರ್ ಎಂಬ ಪುತ್ರನಿದ್ದಾನೆ.
ಇದನ್ನೂ ಓದಿ : ಧರ್ಮದ ತಕ್ಕಡಿ ಮೇಲೆದ್ದಾಗ ಜೀವನ ಪಾವನ: ರಾಘವೇಶ್ವರ ಶ್ರೀ
ಇದೀಗ ತಾಲೂಕಿನ ಹಲವು ಕಡೆ ನಾಗರಾಜ ದೇವಡಿಗರಿಗೆ ಗೌರವ ಸನ್ಮಾನಗಳನ್ನು ಇಟ್ಟುಕೊಂಡಿದ್ದಾರೆ., ಅಗಸ್ಟ್ ಹದಿನೈದರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹುಟ್ಟೂರಿನ ಹೆಬಳೆಯ ಗೊರಟೆಕೇರಿ ಸರಕಾರಿ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮವಿದೆ. ಈ ಸಂದರ್ಭದಲ್ಲಿ ನಿವೃತ್ತ ಯೋಧ ನಾಗರಾಜ ದೇವಡಿಗ ಯುವಕರಿಗೆ ಸಂದೇಶವೊಂದನ್ನು ನೀಡಿದ್ದಾರೆ. ” ಕೆಲವು ಶತ್ರು ರಾಷ್ಟ್ರಗಳು ನಮ್ಮ ದೇಶದ ಅಭಿವೃದ್ಧಿಯನ್ನು ಸಹಿಸಲಾಗದೆ ತಾಯಿ ಭಾರತಮಾತೆಯ ವಿರುದ್ಧ ಏನಾದರೂ ಪಿತೂರಿ ನಡೆಸುತ್ತಲೇ ಬರುತ್ತಿವೆ. ಹಾಗಾಗಿ ಇಂತಹ ನಮ್ಮ ಶತ್ರು ರಾಷ್ಟ್ರಗಳನ್ನು ಬಗ್ಗು ಬಡಿಯಲು ಇವತ್ತು ಪ್ರತೀ ಮನೆಗಳಲ್ಲೂ ಒಬ್ಬ ಸೈನಿಕ ತಯಾರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಇಂದಿನ ಯುವಕರು ದೇಶ ಸೇವೆ ಮಾಡುವ ಆಸಕ್ತಿ ಬೆಳೆಸಿಕೊಂಡು ಭಾರತೀಯ ಸೈನ್ಯಕ್ಕೆ ಹೆಚ್ಚಿನದಾಗಿ ಸೇರಬೇಕು” ಎಂಬುದು ಇವರ ಕರೆಯಾಗಿದೆ.
ಇಷ್ಟು ವರ್ಷಗಳ ಕಾಲ ತಮ್ಮ ಯೌವನದ ಅಮೂಲ್ಯವಾದ ಸಮಯವನ್ನು ತಾಯಿ ಭಾರತಾಂಬೆಯ ಸೇವೆಗಾಗಿ ನೀಡಿದ ನಿವೃತ್ತ ಯೋಧ ನಾಗರಾಜ ದೇವಡಿಗರವರ ವಿಶ್ರಾಂತ ಜೀವನ ಅತ್ಯಂತ ಸುಖಕರವಾಗಿರಲಿ ಎಂಬುದೇ ನಮ್ಮ ನಿಮ್ಮೆಲ್ಲರ ಹಾರೈಕೆಯಾಗಿರಲಿ.
✍️ ರಾಮ ಹೆಬಳೆ, ಶೇಡಬರಿ, ಭಟ್ಕಳ
ಹೆಬಳೆ ಗ್ರಾಮ ಪಂಚಾಯತ್ ಸದಸ್ಯರು.