ಭಟ್ಕಳ (Bhatkal) : ತಾಲೂಕಿನ ಮುರ್ಡೇಶ್ವರ (Murdeshwar) ಬಸ್ತಿಯಿಂದ ಉತ್ತರಕೊಪ್ಪ ಹೋಗುವ ರಸ್ತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಅಂಡರ್‌ ಪಾಸ್‌ ನಿರ್ಮಿಸುವಂತೆ ಒತ್ತಾಯಿಸಿ ಸ್ಥಳೀಯ ಸಾರ್ವಜನಿಕರು ಬುಧವಾರ ದಿಢೀರ್‌ ಪ್ರತಿಭಟನೆ (Protest) ನಡೆಸಿದ್ದಾರೆ.  ಕಳೆದ ೮ ವರ್ಷದಿಂದ ಅತ್ಯಂತ ಹೆಚ್ಚು ಜನಸಂದಣಿ ಇರುವ ಬಸ್ತಿ- ಉತ್ತರಕೊಪ್ಪ ರಸ್ತೆ ಸಂಪರ್ಕಿಸುವ ಜಾಗದಲ್ಲಿ ಅಂಡರ್‌ ಪಾಸ್‌ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸುತ್ತಲೇ ಬಂದಿದ್ದಾರೆ. ಇದರಿಂದ ಆ ಭಾಗದಲ್ಲಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ  ಬುಧವಾರದಂದು ಏಕಾಏಕಿ ಈ ಹಿಂದೆ ಬಿಟ್ಟಿರುವ ರಸ್ತೆಯ ಕಾಮಗಾರಿ ಮಾಡಲು ಯಂತ್ರಗಳನ್ನು ತಂದಿಟ್ಟಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಐ.ಆರ್.ಬಿ. ಕಂಪನಿಯೂ (IRB Infra)ರಸ್ತೆ ಕಾಮಗಾರಿಯ ಗುತ್ತಿಗೆಯನ್ನಷ್ಟೇ ಪಡೆದಿಲ್ಲ ಬದಲಿಗೆ ಇಡೀ ಜಿಲ್ಲೆಯನ್ನೇ ತಾವೇ ಗುತ್ತಿಗೆ ಪಡೆದಿರುವ ರೀತಿಯಲ್ಲಿ ಅವರ ವರ್ತನೆ ಅವರ ಅಸಮರ್ಪಕ ಕಾಮಗಾರಿಯೇ ಕಾರಣವಾಗಿದೆ.‌ ಇದಕ್ಕೆ ಸೂಕ್ತ ಉದಾಹರಣೆ ಎಂದರೆ ತಾಲ್ಲೂಕಿನ ಮುರುಡೇಶ್ವರ ಬಸ್ತಿ – ಉತ್ತರ ಕೊಪ್ಪ ಸಂಪರ್ಕ ರಸ್ತೆಯ ಕಾಮಗಾರಿಯು ಈ ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಂಡರಪಾಸ್ ಬೇಡಿಕೆಯನ್ನು ಮಾಡದೇ ಚತುಷ್ಪಥ ರಸ್ತೆಯ ಕಾಮಗಾರಿಗೆ ಮುಂದಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :  ಗುಂಪಿನಿಂದ ಹಲ್ಲೆ, ಜೀವ ಬೆದರಿಕೆ

ಬುಧವಾರದಂದು ಬೆಳಿಗ್ಗೆ ರಸ್ತೆ ಕಾಮಗಾರಿಗೆ ಬಂದ ಐ.ಆರ.ಬಿ ಕಂಪನಿಯ ಯೋಜನಾ ನಿರ್ದೇಶಕ ಶಿವಕುಮಾರ ಸ್ಥಳಕ್ಕೆ ಆಗಮಿಸಿ ಐ.ಆರ್.ಬಿ. ಕಂಪನಿ ಪರವಾಗಿ ಜನರ ಮನವೋಲಿಸುವ ಪ್ರಯತ್ನ ಮಾಡಿದರು. ಆದರೆ ಸ್ಥಳೀಯ ಮುಖಂಡರು, ಗ್ರಾಮ ಪಂಚಾಯತ ಅಧ್ಯಕ್ಷ, ಸದಸ್ಯರು ಸೇರಿದಂತೆ ನೂರಾರು ಸಾರ್ವಜನಿಕರು, ಸ್ಥಳೀಯರು ವಿರೋಧಿಸಿದರು. ಅಂಡರಪಾಸ್ ಮಾಡದೇ ಏಕಾಏಕಿ ರಸ್ತೆ ನಿರ್ಮಾಣ ಹೇಗೆ ಮಾಡುತ್ತೀರಿ ನಿಮ್ಮ‌ ಕೆಲಸಕ್ಕೆ ನಾವು ಒಪ್ಪಿಗೆ ಕೊಡುವುದಿಲ್ಲ.‌ ನಮ್ಮ ಬೇಡಿಕೆಯನ್ನು ಪೂರೈಸಲೇಬೇಕು ಎಂದು ಪಟ್ಟು ಹಿಡಿದರು.

ಇದನ್ನೂ ಓದಿ :  ಕುಮಟಾ – ಶಿರಸಿ ರಸ್ತೆಯಲ್ಲಿ ಸಂಚಾರ ನಿಷೇಧ

ಸ್ಥಳದಲ್ಲಿದ್ದ ಐ.ಆರ್ ಬಿ. ಕಂಪನಿಯ ಪ್ರಾಜೆಕ್ಟ್ ಡೈರೆಕ್ಟರ್ ಶಿವಕುಮಾರ ಮಾತನಾಡಿ, ಈಗಾಗಲೇ ನಾವು ಸರಕಾರಕ್ಕೆ ಬರೆದುಕೊಂಡಿದ್ದು ಅದು ಬಂದ ನಂತರ ಅಂಡರಪಾಸ್ ಮಾಡುತ್ತೇವೆ. ಈಗ ಸದ್ಯಕ್ಕೆ ಈ ರಸ್ತೆಯನ್ನು ತುರ್ತು ರಿಪೇರಿ ಮಾಡುತ್ತೇವೆ ಎಂದು ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಆಕ್ರೋಶಭರಿತರಾದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಅಂಡರ್ ಪಾಸ್ ಮಾಡದೆ ಈ ರಸ್ತೆ ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ. ರಾಷ್ಟ್ರೀಯ ಹೆದ್ದಾರಿ 66ರ  ಅವೈಜ್ಞಾನಿಕ ಕಾಮಗಾರಿಯಿಂದ ಅನೇಕ ಅಪಘಾತಗಳಾಗುತ್ತಿದ್ದು, ಅವುಗಳನ್ನು ತಪ್ಪಿಸುವಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಅಂಡರಪಾಸ್ ಮಾಡಬೇಕಾದ ರಸ್ತೆ ಉತ್ತರಕೊಪ್ಪಕ್ಕೆ ಸೇರುತ್ತದೆ. ಇಲ್ಲಿ ಸುಮಾರು ೩೦ ಗ್ರಾಮಗಳು ಇದ್ದು ಹೆಚ್ಚಿನವರು ಕೃಷಿಕರಾಗಿದ್ದಾರೆ. ರಸ್ತೆಯ ಮೂಲಕ ಅಕ್ಕಪಕ್ಕದ ಶಾಲಾ ಮಕ್ಕಳು ಕಾಯ್ಕಿಣಿ ಶಾಲೆಗೆ ಬರುತ್ತಿದ್ದಾರೆ.‌ ಅಂಡರ್ ಪಾಸ್ ಆಗದಿದ್ದರೆ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತದೆ. ರಸ್ತೆಯನ್ನು ದಾಟಿ ಮೇಲ್ಬಾಗದಲ್ಲಿ ಸ್ಮಶಾನಗಳಿದ್ದು ಸ್ಮಶಾನಕ್ಕೆ ಹೋಗುವಾಗ ಚತುಷ್ಪಥ ಹೆದ್ದಾರಿಯನ್ನು ದಾಟಿ ಹೋಗ ಬೇಕಾಗಿರುತ್ತದೆ. ಹಳ್ಳಿಯ ಭಾಗದವರೆಲ್ಲರೂ ಇದೇ ರಸ್ತೆ ಮೂಲಕವಾಗಿ ತಮ್ಮ ದಿನ ನಿತ್ಯದ ಕೆಲಸಕ್ಕೆ ಈ ಹೆದ್ದಾರಿಯನ್ನು ದಾಟಬೇಕಾಗಿದ್ದರಿಂದ ಅಂಡರ್ ಪಾಸ್ ಅವಶ್ಯಕತೆ ಇದೆ ಎಂದು ಪಟ್ಟು ಹಿಡಿದರು.

ಇದನ್ನೂ ಓದಿ :  ಮುರ್ಡೇಶ್ವರದಲ್ಲಿ ಕಾರುಗಳ ಡಿಕ್ಕಿ; ನಾಲ್ವರಿಗೆ ಗಾಯ

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಭಟ್ಕಳ ಸಹಾಯಕ ಆಯುಕ್ತೆ ಡಾ ನಯನಾ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಮೊದಲು ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯಲಿ, ನಂತರ ಅಂಡರ್‌ ಪಾಸ್‌ ಬೇಡಿಕೆಯನ್ನು ಈಡೇರಿಸಲಾಗುತ್ತದೆ ಎನ್ನುತ್ತಿದ್ದಂತೆಯೇ ಆಕ್ರೋಶಗೊಂಡ ಸಾರ್ವಜನಿಕರು ೮-೧೦ ವರ್ಷಗಳಿಂದ ಇದನ್ನೇ ಹೇಳುತ್ತಿದ್ದೀರಿ, ಹೆದ್ದಾರಿ ಪ್ರಾಧಿಕಾರ ಕಾಮಗಾರಿಗೆ ಅನುಮೋದನೆಯನ್ನೂ ನೀಡಿದೆ. ಆದರೆ ಇಲ್ಲಿಯವರೆಗೂ ಕಾಮಗಾರಿ ಆರಂಭಿಸಿಲ್ಲ. ಅದನ್ನು ಬಿಟ್ಟು ಕೊನೆ ಹಂತದಲ್ಲಿ ಕಾಮಗಾರಿ ಅರ್ಧಂಬರ್ಧ ಮುಗಿಸಿ ಹೋಗಲು ಬಂದಿದ್ದೀರಿ.  ಅಂಡರ್‌ಪಾಸ್‌ ಹೊರತಾಗಿ ಇಲ್ಲಿ ಯಾವುದೇ ಕೆಲಸವನ್ನು ಮಾಡುವುದು ಬೇಡ ಎಂದು ಜನರು ಪಟ್ಟು ಹಿಡಿದರು. ಕೊನೆಗೆ ಕಾಮಗಾರಿ ಸ್ಥಗಿತಗೊಳಿಸಿ ಐಆರ್‌ಬಿ ಸಿಬ್ಬಂದಿ ಅಲ್ಲಿಂದ ತೆರಳಿದರು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ  ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : ಸಮುದ್ರದಲ್ಲಿ ದೋಣಿ-ಬೋಟ್ ಡಿಕ್ಕಿ; ಮೂವರು ಅಸ್ವಸ್ಥ