– ಉದಯ ನಾಯ್ಕ
ಭಟ್ಕಳ: ಆಧುನಿಕ ತಂತ್ರಜ್ಞಾನ ಬೆಳೆಯುತ್ತಿರುವಂತೆ ಆಧುನಿಕತೆ ಕಾಲದಲ್ಲಿ ಹಿಂದಿನ ಕಾಲದ ಒಂದೊಂದೇ ಸಂಸ್ಕೃತಿಗಳು ಮರೆಯಾಗುತ್ತಿವೆ. ಆ ಸಾಲಿಗೆ ಊರಿನ ಜನರಿಗೆಲ್ಲ ತಿಂಗಳುಗಟ್ಟಲೆ ಕಬ್ಬಿನಹಾಲು, ನೊರೆಹಾಲು ತಿನಿಸುತ್ತಿರುವ ಆಲೆಮನೆಯೂ ಸೇರುತ್ತಿದೆ. ಕೆಲವೇ ಕಡೆಗಳಲ್ಲಿ ಮಾತ್ರ ಆಲೆಮನೆ ಕಾಣ ಸಿಗುತ್ತಿವೆ. ಅದರಲ್ಲಿ ಭಟ್ಕಳದ ಬೆಳಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಮದ್ಲು ಕೂಡ ಒಂದು.
ಇದನ್ನೂ ಓದಿ : ವಿಜೃಂಭಣೆಯಿಂದ ನಡೆದ ಶ್ರೀನಿವಾಸ ಕಲ್ಯಾಣೋತ್ಸವ
ಕಾಲ ಬದಲಾದಂತೆ ತಂತ್ರಜ್ಞಾನ ಬೆಳೆಯಲಾರಂಭಿಸಿತು. ಕಟ್ಟುಮಸ್ತಾದ ಕೋಣಗಳನ್ನು ಸಾಕುವುದು ಸವಾಲಾಯಿತು. ಎರಡರಿಂದ ನಾಲ್ಕು ಜತೆ ಕೋಣಗಳನ್ನು ಬಳಸಿಕೊಂಡು ತಿಂಗಳುಗಟ್ಟಲೆ ನಡೆಯುತ್ತಿದ್ದ ಆಲೆಮನೆಗಳ ಜಾಗದಲ್ಲಿ ಹೊಚ್ಚ ಹೊಸ ಯಂತ್ರಗಳು ಬಂದು ಗುಟುರು ಹಾಕಿದವು. ಆಧುನಿಕತೆ ಬೆಳೆದಂತೆ ಆಲೆಮನೆಯ ಚಿತ್ರಣವೇ ಬದಲಾಗಿ ಹೋಯಿತು. ತಿಂಗಳುಗಟ್ಟಲೆ ನಡೆಯುತ್ತಿದ್ದ ಆಲೆಮನೆ ವಾರದೊಳಗೆ ಫಿನಿಶ್. ಶಾಲೆಯ ಮಕ್ಕಳು, ಊರಿನ ಜನರೆಲ್ಲ ತಿಂಗಳುಗಟ್ಟಲೆ ಕಬ್ಬಿನಹಾಲು ಕುಡಿದು, ನೊರೆಬೆಲ್ಲ ತಿಂದು, ಕಬ್ಬಿನ ಕೋಲುಗಳನ್ನು ಮನೆಗೂ ಹೊತ್ತುಕೊಂಡು ಬಂದು ಒಂದೆರಡು ತಿಂಗಳುಗಳ ಕಾಲ ತಿನ್ನುತ್ತಿದ್ದ ಕಾಲವೆಲ್ಲ ಬರೀ ನೆನಪಾಗಿ ಉಳಿದು ಬಿಟ್ಟಿದೆ. ಆಲೆಮನೆಗಳ ಕೊಪ್ಪರಿಗೆ ಒಲೆಗಳ ಕಲಾತ್ಮಕತೆಯೂ ಕಣ್ಮರೆಯಾಗುತ್ತಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯಿತಿ ಕಾನಮದ್ಲು, ನೂಜ್ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಇಂದಿಗೂ ಆಲೆಮೆನೆ ಮಾಡಿ ಬೆಲ್ಲ ತೆಗೆಯುವ ಪ್ರಕ್ರಿಯೆ ಜೀವಂತವಾಗಿದೆ. ಮಳ್ಳಾ ನಾಯ್ಕ ಎನ್ನುವವರು ಯಂತ್ರದ ಸಹಾಯದಿಂದ ಹಾಲನ್ನು ತೆಗೆಯುತ್ತಿದ್ದಾರೆ. ಈಗ ಕಬ್ಬು ಬೆಳೆಯುವುದು, ಆಲೆಮನೆ ಮಾಡಿಸಿ, ಬೆಲ್ಲ ತೆಗೆದು ಬಳಸುವುದು ದುಬಾರಿಯಾದ ಕಾರಣ ಕಬ್ಬು ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಮನೆಮನೆಗೂ ಪೇಟೆಯ ಉಂಡೆಬೆಲ್ಲ ಅಥವಾ ಅಚ್ಚುಬೆಲ್ಲ, ಸಕ್ಕರೆ ಸೇರುತ್ತಿರುವುದರಿಂದ ಜೋನಿಬೆಲ್ಲದ ಕಲ್ಪನೆಯೇ ದೂರವಾಗಿದೆ. ಆದರೆ, ಇಂದಿಗೂ ಆಲೆಮನೆ, ಜೋನಿಬೆಲ್ಲದ ಮಹತ್ವ ಗೊತ್ತಿರುವವರು ಲಾಭಕ್ಕಲ್ಲದಿದ್ದರೂ ಮನೆಗಾಗಿ, ಊರಿಗಾಗಿ ಕಬ್ಬು ಬೆಳೆದು ಆಲೆಮನೆಯನ್ನು ನಡೆಸಿಕೊಂಡು ಬಂದಿದ್ದಾರೆ.
ಗದ್ದೆಗಳಲ್ಲಿ ಕಬ್ಬು ಬೆಳೆದು ಕಬ್ಬು ಅರೆಯಲು ಯಂತ್ರಗಳನ್ನು ತರಿಸಿ ಗ್ರಾಮೀಣ ಭಾಗದ ಕಲೆ, ವಿಶೇಷತೆಯನ್ನು ಜೀವಂತವಾಗಿಡುವ ಪ್ರಯತ್ನ ನಡೆಯುತ್ತಿದೆ. ಈಗಲೂ ಹಲವರು ಇಲ್ಲಿ ಬಂದು ತಮಗಿಷ್ಟ ಬಂದಷ್ಟು ಕಬ್ಬಿನಹಾಲು ಕುಡಿದು, ನೊರೆಬೆಲ್ಲಅಥವಾ ಜೋನಿಬೆಲ್ಲವನ್ನು ಸ್ವಲ್ಪ ಸವಿದು, ತೆಗೆದುಕೊಂಡು ಹೋಗುವ ಪರಿಪಾಠ ಇದೆ.