ಭಟ್ಕಳ : ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ) ಕನ್ನಡಿಗರ ಅಸ್ಮಿತೆಯ ಹೆಮ್ಮೆಯ ಸಂಸ್ಥೆ ಎಂದು ಶಿರಾಲಿ ಜನತಾ ವಿದ್ಯಾಲಯದ ಪ್ರಾಚಾರ್ಯ ಅಮೃತ ರಾಮರಥ ನುಡಿದರು‌. ಅವರು ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಹಮ್ಮಿಕೊಂಡ‌ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಉಪನ್ಯಾಸ ನೀಡಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಕನ್ನಡವನ್ನು ಉಳಿಸಿ ಬೆಳೆಸುವ ಆಶಯದೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು. ಅತ್ಯಂತ ಹೆಚ್ಚಿನ ಆಜೀವ ಸದಸ್ಯರನ್ನು ಹೊಂದಿರುವ ಸಾಹಿತ್ಯ ಪರಿಷತ್ತಿನಂತ ಮತ್ತೊಂದು ಸಂಸ್ಥೆ ನಮ್ಮ ದೇಶದಲ್ಲಿ ಮತ್ತೊಂದಿಲ್ಲ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪರಿಷತ್ತಿನ ಮುಖ್ಯ ಧ್ಯೇಯ. ಎರಡು ಸಾವಿರ ವರ್ಷಗಳ ಶ್ರೀಮಂತ ಇತಿಹಾಸ ಹೊಂದಿರುವ ಕನ್ನಡ ಭಾಷೆ ಇಂದು ಆಂಗ್ಲ ಭಾಷೆಯ ಶಿಕ್ಷಣದ ಮೋಹ, ಕನ್ನಡ ಕಲಿತವರಿಗೆ ಉದ್ಯೋಗ ಅವಕಾಶಗಳ ಕೊರತೆಯ ನಡುವೆ ನಲುಗುತ್ತಿದೆ. ಕನ್ನಡ ಅನ್ನ ಕೊಡುವ ಭಾಷೆಯಾಗಿ ರೂಪುಗೊಂಡಾಗ ಕನ್ನಡ ಭಾಷೆ ಜನಮನದಲ್ಲಿ ಮತ್ತಷ್ಟು ಬಲಗೊಳ್ಳಬಲ್ಲದು ಎಂದರು. ಭಟ್ಕಳ ತಾಲೂಕು ಕಸಾಪ ನಿರಂತರವಾಗಿ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಹಿತ್ಯ ಪರಿಷತ್ತನ್ನು ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.

ಇದನ್ನೂ ಓದಿ : ಕುಮಟಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಾಹಿತಿ ಮಾನಾಸುತ, ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಮಹನಿಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಕನ್ನಡವೇ ಇಂದು ನಮ್ಮನ್ನು ಗುರುತಿಸಿಕೊಳ್ಳಲು ಕಾರಣವಾಗಿದೆ ಎಂದರು. ಸಂಸ್ಥಾಪನಾ‌ ದಿನದ ಕುರಿತು ಸ್ವರಚಿತ ಹನಿಗವಿತೆಯನ್ನು ಅವರು ವಾಚಿಸಿದರು.

ಇದನ್ನೂ ಓದಿ : ವಿದ್ಯಾಂಜಲಿ ಪಬ್ಲಿಕ್ ಶಾಲೆ ಐಸಿಎಸ್‌ಇ ಪರೀಕ್ಷೆಯಲ್ಲಿ ಶೇ.೧೦೦ ಸಾಧನೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಪ್ರತೀಕ. ಕನ್ನಡ ಇಂದು ಮತ್ತು ನಾಳೆ ಹೇಗಿರಬೇಕು, ಬೆಳೆಯಬೇಕೆಂಬ ದೂರದೃಷ್ಠಿಯ ಆಶಯದೊಂದಿಗೆ ಸ್ಥಾಪಿತವಾದ ಸಂಸ್ಥೆ. ನಾವೆಲ್ಲರೂ ನಮ್ಮ ನಮ್ಮ ನೆಲೆಯಲ್ಲಿ ಕನ್ನಡದ ಸೇವೆಯನ್ನು ಮಾಡುವ ಮೂಲಕ ಈ ನೆಲ, ಭಾಷೆ, ಸಂಸ್ಕೃತಿಯ ಪ್ರಗತಿಗೆ ಕೊಡುಗೆ ನೀಡಬೇಕಿದೆ ಎಂದರು. ಸಾಹಿತ್ಯ ಪರಿಷತ್ತಿನ ಮೂಲಕ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರ ನೀಡಿದ ಎಲ್ಲ ಸಂಘ ಸಂಸ್ಥೆಗಳು, ಕನ್ನಡದ ಮನಸುಗಳ ಸಹಕಾರವನ್ನು ಅವರು ನೆನೆದರು‌.


ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ ಮಾತನಾಡಿದರು. ಯುವ ಕವಿ ಕೃಷ್ಣ ಮೊಗೇರ ಅಳ್ವೆಕೋಡಿ ಉಪಸ್ಥಿತರಿದ್ದರು. ಕಸಾಪ ಗೌರವ ಕೋಶಾಧ್ಯಕ್ಷ, ಸಾಹಿತಿ ಶ್ರೀಧರ ಶೇಟ್ ಸಾಹಿತ್ಯ ಪರಿಷತ್ತಿನ ವಿಶೇಷತೆಗಳನ್ನು ಉಲ್ಲೇಖಿಸುತ್ತ ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ ವಂದಿಸಿದರು.