ಭಟ್ಕಳ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಟ್ಕಳದಲ್ಲಿ ಶಾಂತ ರೀತಿಯಿಂದ ಚುನಾವಣೆ ನಡೆದಿದ್ದು ಶೇ.76ರಷ್ಟು ಮತದಾನವಾಗಿದೆ.
ಮಂಗಳವಾರ ಬೆಳಿಗ್ಗೆಯಿಂದಲೇ ಅತ್ಯಂತ ಬಿರುಸಿನಿಂದ ಆರಂಭಗೊಂಡ ಮತದಾನವು ಸಂಜೆ ಆರು ಗಂಟೆವರೆಗೂ ಬಿರುಸಿನಿಂದಲೇ ಸಾಗಿತು. ಉರಿ ಬಿಸಿಲಿನಲ್ಲಿ ಮಹಿಳೆಯರು ಅತ್ಯಂತ ಉತ್ಸಾಹದಿಂದ ಮತದಾನಕ್ಕಾಗಿ ಸರತಿಯಲ್ಲಿ ನಿಂತುಕೊಂಡಿರುವುದು ಕಂಡುಬಂತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ನಗರ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಬಳೆ ಪಂಚಾಯತ್ ನ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸುಮಾರು 100 ಮೀಟರ್ ವರೆಗೂ ಮಹಿಳೆಯರು ಹಾಗೂ ಪುರುಷರು ಸರತಿಯಲ್ಲಿ ನಿಂತಿರುವುದು ಕಂಡುಬಂತು. ಸ್ಥಳೀಯ ಯುವಕ ಸಂಘಗಳು ಆಯಾಯ ಮತಗಟ್ಟೆಯಲ್ಲಿ ಮತದಾರರಿಗೆ ತಂಪು ಪಾನೀಯ ವಿತರಿಸುತ್ತಿರುವುದು ವಿಶೇಷವಾಗಿತ್ತು.
ತಾಲೂಕಿನಲ್ಲಿ ಎಲ್ಲಿಯೂ ಯಾವುದೇ ಅನಾಹುತ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಒಂದೆರಡು ಮತಗಟ್ಟೆಯಲ್ಲಿ ಮತದಾನದ ಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನ ವಿಧಾನಗತಿಯಲ್ಲಿ ಸಾಗಿದ್ದು ಮತದಾರರ ಆಕ್ರೋಶಕ್ಕೆ ಕಾರಣವಾಯಿತು.
ಅಪರಿಚಿತರಿಂದ ಮತದಾನ :
ಸೋನಾರಕೇರಿ ಮತಗಟ್ಟೆಯಲ್ಲಿ ಮಧ್ಯಾಹ್ನ ಶ್ರೀಧರ ನಾಯ್ಕ ಎಂಬ ಯುವಕ ಮತದಾನ ಮಾಡಲು ಬಂದಾಗ ಶಾಕ್ ಕಾದಿತ್ತು. ಅವರ ಹೆಸರಿನಲ್ಲಿ ಅದಾಗಲೇ ಮತ ಚಲಾವಣೆಯಾಗಿತ್ತು. ಕೊನೆಗೆ ಚಾಲೆಂಜ್ ಮತಕ್ಕೆ ಅವಕಾಶ ನೀಡಲಾಯಿತು.
ಇದೇ ಮತಗಟ್ಟೆಯಲ್ಲಿ ಯುವತಿಯೊಬ್ಬಳು ಎರಡನೇ ಬಾರಿ ಮತ ಚಲಾಯಿಸಲು ಬಂದಿದ್ದರು. ಮತಗಟ್ಟೆಯಲ್ಲಿದ್ದ ಬಿಜೆಪಿ ಏಜೆಂಟ್ ಗಮನಿಸಿ ಆಕ್ಷೇಪ ವ್ಯಕ್ತಪಡಿಸಿದರು. ಮೊದಲಿದ್ದ ಶಾಹಿಯನ್ನು ಅಳಿಸಿ ಮತ್ತೊಮ್ಮೆ ಮತದಾನಕ್ಕೆ ಬಂದಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಆ ಮಹಿಳೆ ಅಲ್ಲಿಂದ ವಾಪಸ್ಸಾದರು.
ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ ೨೨೭೭೦೬. ಈ ಪೈಕಿ ಗಂಡು ೧೧೫೧೭೨, ಹೆಣ್ಣು ೧೧೨೫೩೪ ಇದ್ದಾರೆ. ಇವರಲ್ಲಿ
ಗಂಡು ೮೫೧೦೯ ಮತ್ತು ಹೆಣ್ಣು ೮೭೯೫೨ ಸೇರಿದಂತೆ ಒಟ್ಟು 1,73,060 ಮಂದಿ ಮತ ಚಲಾಯಿಸಿದ್ದಾರೆ. ಒಟ್ಟಿನಲ್ಲಿ ಭಟ್ಕಳದಲ್ಲಿ ಶಾಂತ ರೀತಿಯಿಂದ ಮತದಾನ ನಡೆದಿದೆ.
ಸಚಿವ ಮಂಕಾಳ ವೈದ್ಯ ಮತದಾನ :
ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ ಸಚಿವ ಮಂಕಾಳ ಎಸ್ ವೈದ್ಯ ಕುಟುಂಬ ಸಮೇತರಾಗಿ ತಮ್ಮ ಮತ ಚಲಾಯಿಸಿದರು.
ಕಾಯ್ಕಿಣಿ ಬಿದ್ರುಮನೆ ಮತಗಟ್ಟೆಗೆ ತೆರಳಿ ಕುಟುಂಬ ಸಮೇತರಾಗಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಸಚಿವರ ಪತ್ನಿ ಪುಷ್ಪಲತ ವೈದ್ಯ ಹಾಗೂ ಪುತ್ರಿ ಬೀನಾ ವೈದ್ಯ ಸಚಿವರ ಜೊತೆಗೂಡಿ ಬಂದು ಮತಚಲಾಯಿಸಿದ್ದಾರೆ.
ಇದನ್ನೂ ಓದಿ : ಕಸಾಪ ಕನ್ನಡಿಗರ ಅಸ್ಮಿತೆಯ ಹೆಮ್ಮೆಯ ಸಂಸ್ಥೆ: ಅಮೃತ ರಾಮರಥ