ಮುರುಡೇಶ್ವರ : ಮಾರ್ಚ್ 8 ರಂದು ಮುರುಡೇಶ್ವರದಲ್ಲಿ ಶಿವರಾತ್ರಿ ಪ್ರಯುಕ್ತ ಇದೇ ಪ್ರಥಮ ಬಾರಿಗೆ ಭಕ್ತಿ ವೈಭವದಿಂದ ಕೂಡಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ : ವೀರ ಸಾವರ್ಕರ ನಾಮಫಲಕ, ಹನುಮಧ್ವಜ ತೆರವು

ಮಾರ್ಚ್ 8 ರಂದು ಸಂಜೆ 6 ರಿಂದ ಮಾರ್ಚ್ 9 ರ ಬೆಳಗ್ಗೆ 6 ರ ವರೆಗೆ ಅಹೋರಾತ್ರಿ ಶಿವನಾಮ ಸ್ಮರಣೆಯ ವೈವಿಧ್ಯಮಯ ಭಕ್ತಿಮಯದಿಂದ ಕೂಡಿರುವ ಕಾರ್ಯಕ್ರಮಗಳು ನಡೆಯಲಿವೆ. ಸುಮಾರು 1500 ಕ್ಕೂ ಹೆಚ್ಚು ಭಕ್ತಾದಿಗಳು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ಸ್ಥಳದಲ್ಲಿ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಿದೆ.
ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕಡಲ ತೀರದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಬೆಳಕು-ಧ್ವನಿ ವ್ಯವಸ್ಥೆ ಮಾಡಲಾಗುತ್ತಿದೆ.

ಇದನ್ನೂ ಓದಿ :  ಕಾರವಾರದಲ್ಲಿ ೧೨ರಂದು ಉದ್ಯೋಗ ಮೇಳ  https://www.facebook.com/share/p/2acFtt3k88HY5XpF/?mibextid=oFDknk

ಕಾರ್ಯಕ್ರಮದಲ್ಲಿ ಸೋಜುಗಾದ ಸೂಜು ಮಲ್ಲಿಗೆ ಹಾಡಿನ ಖ್ಯಾತಿಯ ಅನನ್ಯಾ ಭಟ್ ಅವರಿಂದ ಸಂಗೀತ ಕಾರ್ಯಕ್ರಮ, ಪ್ರಪ್ರಥಮ ಬಾರಿಗೆ ಶಿವಭಕ್ತಿ ಸಾರುವ 3ಡಿ ಮ್ಯಾಪಿಂಗ್ ಮತ್ತು ಲೇಸರ್ ಶೋ ನಡೆಯಲಿದೆ. ಸರಿಗಮ ಖ್ಯಾತಿಯ ಆಶ್ವಿನ್ ಶರ್ಮಾ ಮತ್ತು ತಂಡದಿಂದ ಗಾಯನ ಕಾರ್ಯಕ್ರಮ, ವಿದೂಷಿ ವೀಣಾ ವಾರುಣಿ ಅವರಿಂದ ಪಂಚ ವೀಣಾ ವಾದನ, ಡ್ರಾಮಾ ಜೂನಿಯರ್ ತಂಡದಿಂದ ಕಾರ್ಯಕ್ರಮ, ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷಣ್ ಅವರಿಂದ ನೃತ್ಯ ಪ್ರದರ್ಶನ, ಬಿಗ್‌ಬಾಸ್ ಖ್ಯಾತಿಯ ಕಾರ್ತಿಕ್ ಅವರಿಂದ ಪ್ರದರ್ಶನ, ಸ್ಥಳೀಯ ಪ್ರತಿಭಾನ್ವಿತ ಕಲಾವಿದರಿಂದ ಆಕರ್ಷಕ ವೈವಿಧ್ಯಮಯ ಕಾರ್ಯಕ್ರಮಗಳು ಸೇರಿದಂತೆ ಮನೋರಂಜನೆ, ಧ್ಯಾನ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜ್ಞಾನ ಇತ್ತಾಲ್ ಗೆಜ್ಜೆ ನಾದ ತಂಡ ಮತ್ತು ಸಂಧ್ಯಾ ಯೋಗ (ಆಗೋ ಯೋಗ ಡ್ಯಾನ್ಸ್ ಮತ್ತು ಧ್ಯಾನ) ಅವರಿಂದ ಕಾರ್ಯಕ್ರಮವಿದೆ. ಈ ಬಾರಿಯ ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್ ಮತ್ತು ತಂಡ, ಝೀ ಕನ್ನಡ ಸರಿಗಮಪ ಫೇಮ್ ಮಂಗಳೂರಿನ ಬಾಯ್ಸ್ ಝೋನ್ ಕ್ರೀವ್ ತಂಡದ ಪ್ರದರ್ಶನ ಇರಲಿದೆ. ಟಿವಿ ನಿರೂಪಕರಾದ ಸ್ನೇಹ ಕೆ.ಎಂ. ನಿರಂಜನ ದೇಶಪಾಂಡೆ, ಪ್ರತಿಭಾ ಗೌಡ, ಶಿರಾಲಿಯ ಶ್ರೀಧರ ಶೇಟ್ ಮತ್ತು ವನಿತಾ ಶೇಟ್ ನಿರೂಪಣೆ ಮಾಡಲಿದ್ದಾರೆ.

ಸಚಿವ ಮಂಕಾಳ ವೈದ್ಯರಿಂದ ಉದ್ಘಾಟನೆ :
ಸಂಜೆ 6 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರುವರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಲಿದ್ದಾರೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ, ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲ್ಟಂಟ್ ಅಂಡ್ ಎಜನ್ಸಿಸ್ ಅಧ್ಯಕ್ಷ, ಕಾರವಾರ ಶಾಸಕ ಸತೀಶ ಕೆ. ಸೈಲ್, ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿರುವರು. ಮಾವಳ್ಳಿ-೧ರ ಗ್ರಾಪಂ ಅಧ್ಯಕ್ಷೆ ನಯನಾ ನಾಗೇಶ ನಾಯ್ಕ, ಮಾವಳ್ಳಿ-೨ರ ಗ್ರಾಪಂ ಅಧ್ಯಕ್ಷೆ ನಾಗರತ್ನ ಕೊಗ್ಗ ಪಡಿಯಾರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೂಡ ಭಾಗವಹಿಸಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.

ಭಕ್ತರಿಗಾಗಿ ಸಾರಿಗೆ ವ್ಯವಸ್ಥೆ
ಜಾಗರಣೆ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಭಟ್ಕಳಕ್ಕೆ ಆಗಮಿಸಲು ಮತ್ತು ಬೆಳಗ್ಗೆ ಬೇಗ ತೆರಳಲು ಅನುಕೂಲವಾಗುವಂತೆ ಹೆಚ್ಚುವರಿ ಸಾರಿಗೆ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಜಿಲ್ಲೆಯ ಹಾಗೂ ರಾಜ್ಯದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶಿವರಾತ್ರಿ ಜಾಗರಣೆಯನ್ನು ಶ್ರದ್ಧಾ, ಭಕ್ತಿ ಪೂರ್ವಕವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಕೋರಿದ್ದಾರೆ.