ಕಾರವಾರ : ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸಿ ವ್ಯಕ್ತಿಯೊಬ್ಬ ಎಡಗೈ ಬೆರಳನ್ನು ಕತ್ತರಿಸಿ, ರಕ್ತ ಅರ್ಪಿಸಿದ ಭಯಾನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಸೋನಾರವಾಡದಲ್ಲಿ ನಡೆದಿದೆ.

ಇದನ್ನೂ ಓದಿ : ಆದಿತ್ಯ ಮಿಲ್ಕ್ ಮಾಲೀಕ ಶಿವಕಾಂತ ಸಿದ್ನಾಳ ವಿಧಿವಶ

ಕೈಬೆರಳು ಕತ್ತರಿಸಿ ಕಾಳಿ ಮಾತೆಗೆ ಅರ್ಪಿಸಿದ ವ್ಯಕ್ತಿಯನ್ನು ಅರುಣ್ ವರ್ಣೇಕರ್ ಎಂದು ಗುರುತಿಸಲಾಗಿದೆ. ಇವರು ಮೋದಿಗಾಗಿ ಗುಡಿಯೊಂದನ್ನು ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ.
ಬೆರಳು ಕತ್ತರಿಸಿಕೊಂಡು ಅರುಣ್​, ‘ಮೋದಿ ಮತ್ತೆ ಪ್ರಧಾನಿಯಾಗಬೇಕು’ ಎಂದು ಗೋಡೆ ಮೇಲೆ ರಕ್ತದಲ್ಲಿ ಬರೆದಿದ್ದಾರೆ. ಬೆರಳು ತುಂಡುಮಾಡಿಕೊಂಡು ಅದರಿಂದ ಸುರಿದ ರಕ್ತದಲ್ಲಿ, ‘‘ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ’’ ಎಂದು ಬರೆದಿದ್ದಾರೆ. ‘‘ಮೋದಿ ಬಾಬ ಪಿಎಂ, 3 ಬಾರ್ 78 ತಕ್ 378, 378+ ಮೇರಾ ಮೋದಿ ಬಾಬಾ ಸಬ್ ಸೆ ಮಹಾನ್ ’ ಎಂದು ಗೋಡೆ ಮೇಲೆ ಹಾಗೂ ಪೋಸ್ಟರ್​​ನಲ್ಲಿ ಅರುಣ್ ಬರೆದಿದ್ದಾರೆ.

ಇದೇ ಮೊದಲಲ್ಲ !
ಮೋದಿ ಮೊದಲ ಬಾರಿ ಚುನಾವಣೆಗೆ ನಿಂತಾಗ ಕೂಡ ಇದೇ ಅರುಣ್ ರಕ್ತದಲ್ಲಿ ಕಾಳಿಗೆ ಹರಕೆ ಇಟ್ಟಿದ್ದರು. ಈ ಹಿಂದೆಯೂ ಬೆರಳು ಕೊಯ್ದುಕೊಂಡು ಮೋದಿ ಗೆಲುವಿಗಾಗಿ ಕಾಳಿ ಮಾತೆಗೆ ಹರಕೆ ನೀಡಿದ್ದರು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೂಡ ಮೋದಿ ಗೆಲುವಿಗಾಗಿ ಪ್ರಾರ್ಥಿಸಿ ಅರುಣ್ ವರ್ಣೇಕರ್‌ ಬೆರಳು ಕತ್ತರಿಸಿ ಕಾಳಿ ಮಾತೆಗೆ ರಕ್ತದ ತಿಲಕವಿಟ್ಟಿದ್ದರು. 2019ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಕತ್ತಿಯಿಂದ ಬೆರಳು ಕತ್ತರಿಸಿಕೊಂಡಿದ್ದರು. ಬಳಿಕ ಕಾಳಿ ಮಾತೆಗೆ ರಕ್ತದ ತಿಲಕವಿಟ್ಟಿದ್ದರು. ಜತೆಗೆ ಸಾಯಿ ಬಾಬಾ, ಪ್ರಧಾನಿ ಮೋದಿಯ ಫೋಟೊಗೂ ರಕ್ತದ ತಿಲಕವಿಟ್ಟಿದ್ದರು. ಇದು ಮೋದಿಯವರ ಕೊನೆಯ ಚುನಾವಣೆ ಹಾಗಾಗಿ  ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಬೆರಳನ್ನೇ ತುಂಡರಿಸಿ ಕಾಳಿಗೆ ಅರ್ಪಿಸಿದ್ದಾರೆ.

ಮೋದಿ ಭೇಟಿಯಾಗಬೇಕೆಂಬ ಇಚ್ಛೆ
ಕಳೆದ ವರ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಅಂಕೋಲಾಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಲು ಪ್ರಯತ್ನಿಸುವುದಾಗಿ ತಿಳಿಸಿದ್ದರು. ಆದರೆ, ಅವರ ಬಯಕೆ ಈಡೇರಿರಲಿಲ್ಲ.
ಅರುಣ್ ವರ್ಣೇಕರ್ ಎದೆಯ ಮೇಲೆ ಮೋದಿ ಟ್ಯಾಟೂ ಹಾಕಿಸಿಕೊಂಡು ಪ್ರಧಾನಿಯನ್ನು ದೇವರಂತೆ ಆರಾಧಿಸುತ್ತಿದ್ದಾರೆ. ಮೋದಿ ಬಾಬಾ ಎಂದು ಟ್ಯಾಟೋ ಹಾಕಿಸಿ ಅಭಿಮಾನ ಮೆರೆದಿದ್ದಾರೆ.