ಯಲ್ಲಾಪುರ: ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಸಲುವಾಗಿಯೇ ವಿದೇಶದಿಂದ ಬಂದು ಮತದಾನ ಮಾಡಿರುವುದು ವಿಶೇಷವಾಗಿತ್ತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಯಲ್ಲಾಪುರದ ಮಾವಿನಮನೆ ಗ್ರಾಮದ ಬಾಸಲ ಊರಿನ ಗಣೇಶ ಗಾಂವ್ಕರ್, ಪತ್ನಿ ಮಂಗಲಾ ಗಾಂವ್ಕರ್, ಸಹೋದರ ಗಿರೀಶ್ ಗಾಂವ್ಕರ್ ಹಾಗೂ ಸುಜಾತ ಮಹೇಶ್ ಗಾಂವ್ಕರ್ ವಿವಿಧ ದೇಶಗಳಿಂದ ಬಂದು ಮತದಾನ ಮಾಡಿ ಭಾರತೀಯರಿಗೆಲ್ಲ ಮಾದರಿ ಎನಿಸಿದ್ದಾರೆ. ವಿದೇಶದಿಂದ ಬಂದು ಮತಚಲಾಯಿಸಿ ತಮ್ಮ ಅನುಭವ ಹಂಚಿಕೊಂಡು, ದೇಶಕ್ಕಾಗಿ ಮತದಾನದ ಕರ್ತವ್ಯ ನಿರ್ವಹಿಸಿದ ಧನ್ಯತಾಭಾವ ವ್ಯಕ್ತಪಡಿಸಿದರು.

ಇದನ್ನೂ ಓದಿ : ಭಟ್ಕಳದಲ್ಲಿ ಶಾಂತ ರೀತಿಯಿಂದ ನಡೆದ ಮತದಾನ

ಬ್ರಿಟನ್ನಿನಲ್ಲಿ ಅಕೌಂಟ್ ಅಸಿಸ್ಟೆಂಟ್ ಆಗಿ ಉದ್ಯೋಗದಲ್ಲಿರುವ ಮಾವಿನಮನೆಯ ಬಾಸಲದ ಸುಜಾತ ಗಾಂವ್ಕರ್ ಅವರು ಮತದಾನ ಮಾಡಿ ಸಂತಸ ವ್ಯಕ್ತಪಡಿಸಿ, ಭಾರತ ದೇಶ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ವಿಶ್ವದಲ್ಲಿ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸರ್ಕಾರಗಳು ದೇಶಕ್ಕಾಗಿ ದೇಶದ ಜನರಿಗಾಗಿ ನಿರಂತರ ಶ್ರಮಿಸುತ್ತಿರುವಾಗ ಕೇವಲ ೫ ನಿಮಿಷದ ಮತದಾನ ಕಾರ್ಯದಲ್ಲಿ ಭಾಗವಹಿಸುವುದು ನಮ್ಮ ಆದ್ಯ ಕರ್ತವ್ಯ. ಭಾರತದಲ್ಲಿರುವ ಎಲ್ಲರೂ ದೇಶಕ್ಕಾಗಿ ಮತದಾನ ನಮ್ಮ ಕರ್ತವ್ಯ ಎಂಬ ಭಾವನೆಯಿಂದ ಮತದಾನದಲ್ಲಿ ಭಾಗವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಗಣೇಶ್ ಗಾಂವ್ಕರ್ ಮತ್ತು ಅವರ ಪತ್ನಿ ಮಂಗಲಾ ಗಾಂವ್ಕರ್ ಅವರು ಯು ಎಸ್.ನಲ್ಲಿ ಹಾರ್ಡವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಣೇಶ್ ಅವರ ಸಹೋದರ ಗಿರೀಶ್ ಗಾಂವ್ಕರ್ ಅವರು ನೆದರ್ಲ್ಯಾಂಡ್ಸ್ ನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದಾರೆ. ಇವರೂ ತಮ್ಮ ಊರಿಗೆ ಬಂದು ಮತ ಚಲಾಯಿಸಿದರು. ಭಾರತದಲ್ಲಿ ಸದೃಢ ಸರ್ಕಾರ ಆಡಳಿತ ನಡೆಸುತ್ತಿದೆ. ಅದು ಮರು ಆಯ್ಕೆಯಾಗ ಬೇಕಾಗಿದೆ. ಇತ್ತೀಚೆಗೆ ವಿದೇಶಗಳಲ್ಲಿ ಕೂಡ ಭಾರತೀಯರ ಗೌರವ ಹೆಚ್ಚಾಗುತ್ತಿದೆ. ಅದಕ್ಕೆ ಇಲ್ಲಿಯ ಸರ್ಕಾರದ ನೀತಿಗಳು, ಆಡಳಿತ ವೈಖರಿ ಕಾರಣವಾಗಿದೆ. ಆದ್ದರಿಂದ ನಾವು ಖುಷಿಯಿಂದ ಬಂದು ಮತದಾನ ಮಾಡಿದ್ದೇವೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ನಮ್ಮ ಪ್ರಬಲ ಅಸ್ತ್ರವಾಗಿದೆ. ಅದನ್ನು ಎಲ್ಲರೂ ಉಪಯೋಗಿಸಿ ದೇಶದಲ್ಲಿ ಉತ್ತಮ ಸರ್ಕಾರ ರಚನೆಗೆ ಕಾರಣವಾಗಬೇಕು. ದೇಶದಲ್ಲಿ ಉತ್ತಮ ಬದಲಾವಣೆಯಾಗುತ್ತದೆ ಮತ್ತು ಬದಲಾವಣೆಯಾಗಬೇಕು ಎಂದರೆ ನಾವು ಎಲ್ಲರೂ ಮತದಾನದಲ್ಲಿ ಭಾಗವಹಿಸಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಅಭಿಪ್ರಾಯ ಹಂಚಿಕೊಂಡರು.

ದೇಶದ ಒಳಿತಿಗಾಗಿ ವಿದೇಶದಲ್ಲಿ ಇದ್ದರೂ ಊರಿಗೆ ಬಂದು ಮತದಾನದಲ್ಲಿ ಭಾಗವಹಿಸಿರುವುದು ಭಾರತದಲ್ಲಿದ್ದೂ ಮತದಾನದಲ್ಲಿ ಭಾಗವಹಿಸಲು ನಿರಾಸಕ್ತಿ ವಹಿಸುವವರಿಗೆ ಮಾದರಿ ನಡೆಯಾಗಿದೆ.