ಭಟ್ಕಳ ಡೈರಿ ವರದಿ
ಭಟ್ಕಳ: ತಮಿಳುನಾಡಿನ ತಿರುಪ್ಪೂರಿನಲ್ಲಿ ನಡೆದ ಸಿಐಎಸ್ಸಿಇ ಕ್ರೀಡಾಕೂಟ–೨೦೨೬ರ ರಾಷ್ಟ್ರೀಯ ಕರಾಟೆ ಟೂರ್ನಿಯಲ್ಲಿ ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಶಾಲೆಯ ಆರನೇ ತರಗತಿಯ ಪ್ರಣವಿ ರಾಮಚಂದ್ರ ಕಿಣಿ ಬೆಳ್ಳಿ ಪದಕ ಗೆದ್ದರೆ, ಒಂಭತ್ತನೇ ತರಗತಿಯ ತುಷಾರ್ ಸಚಿನ್ ಮಹಾಲೆ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಹತ್ತನೇ ತರಗತಿಯ ವಿಜೇತ್ ಮಾದೇವ ಮೊಗೇರ ಸೆಮಿಫೈನಲ್ ಹಂತದವರೆಗೆ ತಲುಪಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಈ ಸಾಧನೆಯ ಮೂಲಕ ವಿದ್ಯಾರ್ಥಿಗಳು ಶಾಲೆಗೆ ಮಾತ್ರವಲ್ಲದೆ ಕರ್ನಾಟಕ ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತೋರಿದ ಪ್ರತಿಭೆ, ಶಿಸ್ತು ಮತ್ತು ಪರಿಶ್ರಮಕ್ಕೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ್ ಬಿ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಮಹತ್ವದ ಪಾತ್ರ ವಹಿಸಿದೆ. ಭಟ್ಕಳ ಶೋಟೋಕಾನ್ ಸಂಸ್ಥೆಯ ಸುರೇಶ ಮೊಗೇರ ಹಾಗೂ ಅವರ ತಂಡ ನೀಡಿದ ನಿರಂತರ ಕರಾಟೆ ತರಬೇತಿ ಮತ್ತು ಮಾರ್ಗದರ್ಶನವೂ ಈ ಯಶಸ್ಸಿಗೆ ನೆರವಾಗಿದೆ. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಪೋಷಕರ ಪ್ರೋತ್ಸಾಹ, ತ್ಯಾಗ ಮತ್ತು ಬೆಂಬಲವೂ ಪ್ರಮುಖವಾಗಿದ್ದು, ಶಾಲೆಯ ಆಡಳಿತ ಮಂಡಳಿಯ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದು, ಈ ಸಾಧನೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸ್ಫೂರ್ತಿಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :
karate tournament/ ವಿದ್ಯಾಂಜಲಿ ಶಾಲೆಯ ಮೂವರು ರಾಷ್ಟ್ರಮಟ್ಟಕ್ಕೆ ಆಯ್ಕೆ
Sports Meet/ ಸಿಐಎಸ್ಸಿಇ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾಂಜಲಿ ಶಾಲೆಗೆ ಪದಕಗಳ ಸುರಿಮಳೆ




