ಭಟ್ಕಳ ಡೈರಿ ವರದಿ

ಭಟ್ಕಳ: ರೈಲ್ವೆ ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದನೆ, ಸರಾಬಿ ನದಿಯ ಕಲುಷಿತಕ್ಕೆ ಸಾರ್ವಜನಿಕರ ಆಕ್ರೋಶ, ಪೊಲೀಸ್ ಠಾಣೆಗಳಲ್ಲಿ ಜುಗಾರಿ, ಗಾಂಜಾ ಸೇವನೆ, ಕಳ್ಳತನ ಯತ್ನ ಹಾಗೂ ಜೀವ ಬೆದರಿಕೆ ಪ್ರಕರಣಗಳು… ಮತ್ತೊಂದೆಡೆ ಕ್ರೀಡೆ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಭಟ್ಕಳದ ಪ್ರತಿಭೆಗಳು ಸಾಧನೆಯ ಮೂಲಕ ಗಮನ ಸೆಳೆದ ವಾರವಿದು.

ಅಭಿವೃದ್ಧಿ ಮತ್ತು ಸಾರ್ವಜನಿಕ ಸಮಸ್ಯೆಗಳ ನಡುವೆಯೇ ಕ್ರೀಡಾ-ಶೈಕ್ಷಣಿಕ ಸಾಧನೆಗಳು, ಮಾನವೀಯ ಸೇವೆ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕವೂ ಭಟ್ಕಳ ಸುದ್ದಿಯಲ್ಲಿತ್ತು. ಕಳೆದ ವಾರದ ಪ್ರಮುಖ ಘಟನೆಗಳ ಅವಲೋಕನ ಇಲ್ಲಿದೆ.

ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ: ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ ೨ ಗಂಟೆಗೆ ಸ್ಥಗಿತಗೊಳ್ಳುತ್ತಿದ್ದ ರಿಸರ್ವೇಶನ್ ಟಿಕೆಟ್ ಕೌಂಟರ್ ಸೇವೆ ಇದೀಗ ರಾತ್ರಿ ೮ ಗಂಟೆಯವರೆಗೆ ವಿಸ್ತರಣೆಯಾಗಲಿದೆ. ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಧ್ಯಸ್ಥಿಕೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೂರದ ಊರುಗಳಿಗೆ ತೆರಳುವವರು ಹಾಗೂ ಉದ್ಯೋಗಸ್ಥ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಿದೆ.

ಸರಾಬಿ ನದಿ ಕಲುಷಿತ: ಒಂದು ಕಾಲದಲ್ಲಿ ಸ್ವಚ್ಛವಾಗಿ ಹರಿಯುತ್ತಿದ್ದ ಸರಾಬಿ ನದಿ ಇಂದು ಒಳಚರಂಡಿ ನೀರಿನಿಂದ ಕಲುಷಿತಗೊಳ್ಳುತ್ತಿರುವುದು ಸ್ಥಳೀಯರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿರುವ ಸ್ಥಳೀಯರು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಅಪರಾಧ ಚಟುವಟಿಕೆಗಳ ವಿರುದ್ಧ ಕ್ರಮ: ನಗರದ ಹಳೇ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ಜುಗಾರಾಟ ನಡೆಸುತ್ತಿದ್ದ ಆರೋಪದ ಮೇಲೆ ೫೦ ವರ್ಷದ ವ್ಯಕ್ತಿಯೊಬ್ಬರನ್ನು ಭಟ್ಕಳ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದೆಡೆ, ಅಮೀನಾ ಪ್ಯಾಲೇಸ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿದ್ದರೆಂಬ ಆರೋಪದ ಮೇರೆಗೆ ನಾಲ್ವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ತಾಲೂಕಿನ ಶಿರಾಲಿ ಚಿತ್ರಾಪುರದಲ್ಲಿ ಮನೆಯೊಂದರ ಮುಂಬಾಗಿಲಿನ ಇಂಟರ್‌ಲಾಕ್ ಹಾಗೂ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯಲ್ಲಿದ್ದ ವಸ್ತುಗಳನ್ನು ಕಳವು ಮಾಡಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ಮಣ್ಕುಳಿಯಲ್ಲಿ ಖರೀದಿಸಿದ ಜಾಗದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದ ವ್ಯಕ್ತಿಗೆ ಕತ್ತಿ ತೋರಿಸಿ ಜೀವ ಬೆದರಿಕೆ ಹಾಕಿ, ಕಾಮಗಾರಿಗೆ ಅಡ್ಡಿಪಡಿಸಿದ ಆರೋಪದ ಮೇಲೂ ಇಬ್ಬರ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಟಾರದಲ್ಲಿ ಶವ ಪತ್ತೆ: ಹೊನ್ನಾವರ ತಾಲೂಕಿನ ಮಂಕಿ ನಿವಾಸಿಯೊಬ್ಬರು ಭಟ್ಕಳದ ಮುಟ್ಟಳ್ಳಿ ಬೈಪಾಸ್ ರಸ್ತೆಯ ಬದಿಯ ಗಟಾರದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವಾರದ ಗಮನ ಸೆಳೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯದ ಸ್ಥಿತಿ: ರಾಷ್ಟ್ರೀಯ ಹೆದ್ದಾರಿಯ ಮುಖ್ಯರಸ್ತೆಯಲ್ಲಿರುವ ಪಿಎಲ್‌ಡಿ ಬ್ಯಾಂಕ್ ಎದುರು ಕುಡಿಯುವ ನೀರಿನ ಪೈಪ್‌ಲೈನ್ ಹಾನಿಗೊಂಡು ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಇದರಿಂದ ರಸ್ತೆ ಜಾರುವಂತಾಗಿದ್ದು, ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಜಾರಿಬಿದ್ದು ಅಪಘಾತಕ್ಕೀಡಾಗಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಗುಳ್ಮಿ ಕ್ರಾಸ್ ಬಳಿ ಸಂಭವಿಸಿದ ಅಪಘಾತದ ಹಿನ್ನೆಲೆಯಲ್ಲಿ ಪ್ರಭಾರ ಡಿವೈಎಸ್ಪಿ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ಪರಿಸ್ಥಿತಿ ಮತ್ತು ಸಂಚಾರ ವ್ಯವಸ್ಥೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪ್ರವಾಸಿಗನ ಜೀವ ಉಳಿಸಿದ ಜೀವ ರಕ್ಷಕರು: ಸಮುದ್ರದ ಅಲೆಗಳ ನಡುವೆ ಮುಳುಗುವ ಸ್ಥಿತಿಗೆ ತಲುಪಿದ್ದ ಬೆಂಗಳೂರಿನ ಪ್ರವಾಸಿಗನೊಬ್ಬನನ್ನು ಮುಡೇಶ್ವರ ಬೀಚ್‌ನಲ್ಲಿ ಕರ್ತವ್ಯದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಕಳೆದ ಭಾನುವಾರ ಮಧ್ಯಾಹ್ನ ನಡೆದ ಈ ಘಟನೆಯಲ್ಲಿ ಸಿಬ್ಬಂದಿಯ ತಕ್ಷಣದ ಕಾರ್ಯಾಚರಣೆ ಪ್ರವಾಸಿಗನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಪ್ರವಾಸಿ ತಾಣಗಳಲ್ಲಿ ಜೀವ ರಕ್ಷಕ ಸಿಬ್ಬಂದಿಯ ಸೇವೆಯ ಮಹತ್ವವನ್ನು ಈ ಘಟನೆ ಮತ್ತೊಮ್ಮೆ ಎತ್ತಿಹಿಡಿದಿದೆ.

ಗ್ರಾಮ ಪಂಚಾಯತ್ ನೌಕರರ ವೇತನ ಕಡಿತಕ್ಕೆ ವಿರೋಧ: ಗ್ರಾಮ ಪಂಚಾಯತ್‌ಗಳಲ್ಲಿ ಹಗಲಿರುಳು ದುಡಿಯುವ ನೌಕರರಿಗೆ ಸರ್ಕಾರ ಪರಿಷ್ಕರಿಸಿ ಜಾರಿಗೊಳಿಸಿದ್ದ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆಯನ್ನು ಮತ್ತೆ ಕಡಿತಗೊಳಿಸಿ ಹಳೆಯ ವೇತನ ಪಾವತಿಸಲು ಮುಂದಾಗಿರುವ ಕ್ರಮಕ್ಕೆ ಭಟ್ಕಳದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ನೌಕರರ ಆರ್ಥಿಕ ಹಿತಾಸಕ್ತಿಗೆ ಧಕ್ಕೆಯಾಗುವ ಈ ಕ್ರಮವನ್ನು ಹಿಂಪಡೆಯಬೇಕು ಎಂಬ ಆಗ್ರಹ ಕೇಳಿಬಂದಿದೆ.

ವಿಜ್ಞಾನ ನಾಟಕದಲ್ಲಿ ಪ್ರಥಮ ಸ್ಥಾನ: ಜಲ ಸಂರಕ್ಷಣೆಯ ಮಹತ್ವವನ್ನು ವಿಜ್ಞಾನ ನಾಟಕದ ಮೂಲಕ ಪರಿಣಾಮಕಾರಿಯಾಗಿ ಸಾರಿದ ಭಟ್ಕಳ ತಾಲೂಕಿನ ಕೆಪಿಎಸ್ ತೆರ್ನಮಕ್ಕಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಸಾಧನೆಯೊಂದಿಗೆ ವಿದ್ಯಾರ್ಥಿಗಳು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಶಾಲೆಗೆ ಹೆಮ್ಮೆ ತಂದಿದ್ದಾರೆ.

ಚೆಸ್‌ನಲ್ಲಿ ಗುರು ಸುಧೀಂದ್ರ ಕಾಲೇಜಿಗೆ ದ್ವಿತೀಯ ಸ್ಥಾನ: ಕರ್ನಾಟಕ ವಿಶ್ವವಿದ್ಯಾಲಯದ ಸಂಲಗ್ನ ಕಾಲೇಜುಗಳ ಅಂತರ ಮಹಾವಿದ್ಯಾಲಯ ಏಕ ವಲಯ ಮಟ್ಟದ ಪುರುಷ ಹಾಗೂ ಮಹಿಳಾ ಚೆಸ್ ಪಂದ್ಯಾವಳಿಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು ಎರಡೂ ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದೆ.

ರಾಷ್ಟ್ರಮಟ್ಟದ ಹ್ಯಾಕಥಾನ್‌ನಲ್ಲಿ ವಿದ್ಯಾರ್ಥಿಗಳ ಸಾಧನೆ: ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಎಐಟಿಎಂ) ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಹ್ಯಾಕಥಾನ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ತಮ್ಮ ತಾಂತ್ರಿಕ ಜ್ಞಾನ, ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಕಲಾಶ್ರೀ ಸ್ಪರ್ಧೆಯಲ್ಲಿ ನಿನಾದ ಮುಂಡಳ್ಳಿ ಪ್ರಥಮ: ಸೃಜನಶೀಲ ಬರವಣಿಗೆಯಲ್ಲಿ ವಿಶಿಷ್ಟ ಪ್ರತಿಭೆ ಪ್ರದರ್ಶಿಸಿದ ಶಿರಾಲಿಯ ವಿದ್ಯಾರ್ಥಿನಿ ನಿನಾದ ಉಮೇಶ ಮುಂಡಳ್ಳಿ ಜಿಲ್ಲಾ ಮಟ್ಟದ ಕಲಾಶ್ರೀ ಪ್ರಶಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಈ ಸಾಧನೆಯೊಂದಿಗೆ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಭಟ್ಕಳದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಸಂತಸ ಮೂಡಿಸಿದೆ.

ಆರ್‌ಎಸ್‌ಎಸ್ ಪಥಸಂಚಲನ: ಶಿಸ್ತಿನ ಹೆಜ್ಜೆಗಳು, ಕೇಸರಿ ಧ್ವಜಗಳ ಅಲಂಕಾರ ಮತ್ತು ಸಾರ್ವಜನಿಕರ ಪುಷ್ಪಾರ್ಚನೆಯ ನಡುವೆ ಭಟ್ಕಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪಥಸಂಚಲನ ಕಳೆದ ರವಿವಾರ ಅದ್ದೂರಿಯಾಗಿ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪಥಸಂಚಲನ ಸಾರ್ವಜನಿಕರ ಗಮನ ಸೆಳೆಯಿತು.

ಅನಾಥ ಶವಗಳ ಅಂತ್ಯಸಂಸ್ಕಾರ ಸೇವೆಗೆ ಮಂಜು ನಾಯ್ಕರಿಗೆ ಗೌರವ: ಪ್ರತಿಫಲದ ನಿರೀಕ್ಷೆಯಿಲ್ಲದೆ ಅನಾಥ ಶವಗಳಿಗೆ ಗೌರವಯುತ ಅಂತ್ಯಸಂಸ್ಕಾರ ನೆರವೇರಿಸುತ್ತಾ ಮಾನವೀಯ ಸೇವೆಯಲ್ಲಿ ವಿಶಿಷ್ಟ ಗುರುತಿಸಿಕೊಂಡಿರುವ ಭಟ್ಕಳದ ಸಮಾಜಸೇವಕ ಮಂಜು ನಾಯ್ಕ ಮುಠಳ್ಳಿ ಅವರನ್ನು ಗೌರವಿಸಲಾಯಿತು. ಆಸರಕೇರಿಯ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ರಂಗಭೂಮಿ ಸಾಧಕ ಭಾಸ್ಕರ ನಾಯ್ಕರಿಗೆ ಕನ್ನಡ ರಾಜ್ಯೋತ್ಸವ ಗೌರವ: ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಾಟಕಕಾರ, ನಿರ್ದೇಶಕ ಹಾಗೂ ರಂಗಕರ್ಮಿ ಭಾಸ್ಕರ ನಾಯ್ಕ ಹಡೀನ ಸರ್ಪನಕಟ್ಟೆ ಅವರಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಆಡಳಿತದಿಂದ ಗೌರವ ಸಲ್ಲಿಸಲಾಯಿತು.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ : 

ಭಟ್ಕಳ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ರಾತ್ರಿ ೮ರವರೆಗೆ ರಿಸರ್ವೇಶನ್ ಟಿಕೆಟ್ ಕೌಂಟರ್ ಸೇವೆ ವಿಸ್ತರಣೆ!

ಹಳೇ ಬಸ್ ನಿಲ್ದಾಣದ ಬಳಿ ಮಟ್ಕಾ ಆಟ: ಪೊಲೀಸರ ದಾಳಿಯಲ್ಲಿ ವ್ಯಕ್ತಿ ಸಿಕ್ಕಿಬಿದ್ದ