ಭಟ್ಕಳ ಡೈರಿ ವರದಿ
ಭಟ್ಕಳ: ಮನೆಯಲ್ಲಿದ್ದ ಬಂಗಾರದ ಬಳೆ ಹಾಗೂ ನಗದು ಹಣ ಕಳವು ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಜಾದನಗರದ ೭ನೇ ಕ್ರಾಸ್, ಜಾಲಿ ರೋಡ್ ನಿವಾಸಿ ಸುಮಾರು ೬೦ ವರ್ಷದ ಸಲೀಮಾ ಕೊಂ ಖೋನಮೀರ ಸಾಹೇಬ್ ಬಾಕ್ಸರಾಜ್ ಅವರು ದೂರು ನೀಡಿದವರು.
ದೂರಿನ ಪ್ರಕಾರ, ಸಲೀಮಾ ಅವರ ಮನೆಯ ಹಿಂದಿನ ಕೊಠಡಿಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಬಿಬಿ ಆಸಿಯಾ ಹಾಗೂ ಅವರ ಮಕ್ಕಳಾದ ಕೌಸರ್ ಮಹಮ್ಮದ್ ಗೌಸ್ ಮತ್ತು ಅಬ್ದುಲಾ ಮಹಮ್ಮದ್ ಗೌಸ್ ವಿರುದ್ಧ ಕಳವು ಆರೋಪ ಮಾಡಲಾಗಿದೆ. ದೂರುದಾರರ ಮನೆಯಲ್ಲಿ ಸೆಪ್ಟೆಂಬರ್ ೨೭ರಂದು ಬೆಳಗ್ಗೆ ೧೦ ಗಂಟೆಯಿಂದ ಸೆಪ್ಟೆಂಬರ್ ೨೮ರಂದು ಬೆಳಗ್ಗೆ ೧೦.೩೦ರ ನಡುವಿನ ಅವಧಿಯಲ್ಲಿ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೌಸರ್ ಮಹಮ್ಮದ್ ಗೌಸ್ ಅವರು ಮನೆ ಕೆಲಸಕ್ಕಾಗಿ ದೂರುದಾರರ ಮನೆಗೆ ಬಂದಿದ್ದ ಸಂದರ್ಭದಲ್ಲಿ, ಬೆಡ್ರೂಂನಲ್ಲಿದ್ದ ಸುಮಾರು ೧೮ ಗ್ರಾಂ ತೂಕದ, ಅಂದಾಜು ₹೧.೪೫ ಲಕ್ಷ ಮೌಲ್ಯದ ಬಂಗಾರದ ಬಳೆ ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದಲ್ಲದೆ, ದೂರುದಾರರ ಪತಿಯ ಶರ್ಟ್ನ ಕಿಸೆಯಲ್ಲಿದ್ದ ₹೧,೦೦೦ ನಗದು ಹಣವೂ ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಲೀಮಾ ಅವರು ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಇದನ್ನೂ ಓದಿ :
ಕುಂದಾಪುರ: ೧೮ ವರ್ಷದ ಯುವಕ ನಾಪತ್ತೆ; ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿಕೆ
ಭಟ್ಕಳ ಗ್ರಾಮೀಣ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; ₹೧.೦೭ ಲಕ್ಷ ಮೌಲ್ಯದ ವಸ್ತು ವಶ


