ಭಟ್ಕಳ: ಮಹಾರಾಷ್ಟ್ರದ ಗಂಧರ್ವ ಮಹಾವಿದ್ಯಾಲಯದ 2023-24ರ ಸ್ನಾತಕೋತ್ತರ ಪದವಿ ಪರೀಕ್ಷೆಯಾದ ಅಲಂಕಾರ ಪೂರ್ಣ ಪರೀಕ್ಷೆಯಲ್ಲಿ ವಿ. ಪಲ್ಲವಿ 84.7% ಅಂಕ ಗಳಿಸಿದ್ದಾರೆ.
ಇವರು ಬೆಳಗಾವಿ ಕೇಂದ್ರಕ್ಕೆ ಪ್ರಥಮರಾಗಿದ್ದು ಪರೀಕ್ಷಕರು ನೀಡುವ ”ವಿಶೇಷ ಯೋಗ್ಯತೆ”ಗೆ ಪಾತ್ರಳಾಗಿದ್ದಾರೆ. ಇದು ವಿದುಷಿ ಪಲ್ಲವಿ ಅವರ ಸಾಧನೆಗಳ ಕಿರೀಟಕ್ಕೆ ಇನ್ನೊಂದು ಗರಿಯಾಗಿದೆ.
ಇದನ್ನೂ ಓದಿ : ಭಟ್ಕಳದ ಸೋನಾರಕೇರಿಯಲ್ಲಿ ಭಜನಾ ಸಪ್ತಾಹ ಆರಂಭ- ಫೆ.26ರಂದು ಪ್ರತಿಷ್ಠಾ ವರ್ಧಂತಿ, ರಥೋತ್ಸವ
ಭರತನಾಟ್ಯ ಅಲಂಕಾರ ಪೂರ್ಣ ಪರೀಕ್ಷೆಯಲ್ಲಿ ಪ್ರಾಯಶಃ ಉತ್ತರ ಕನ್ನಡದಿಂದ ತೇರ್ಗಡೆ ಹೊಂದಿದ ಪ್ರಥಮ ವಿದ್ಯಾರ್ಥಿಯಾಗಿದ್ದು ಹೆಮ್ಮೆ ಎಂದು ವಿದುಷಿ ನಯನಾ ಪ್ರಸನ್ನ ತಿಳಿಸಿದ್ದಾರೆ. ಇದರ ಮುಂಚಿನ ಹಂತದ ವಿಶಾರದ ಪರೀಕ್ಷೆಯಲ್ಲಿ ಇವರು ರಾಷ್ಟ್ರಕ್ಕೇ ಪ್ರಥಮರಾಗಿದ್ದರು. ಇವರನ್ನು ಮುಂಬೈನಲ್ಲಿ “ರಂಗನಾಥ ಬೇಂದ್ರೆ”ಪುರಸ್ಕಾರ ನೀಡಿ ಗಂಧರ್ವ ಮಹಾವಿದ್ಯಾಲಯ ಸನ್ಮಾನಿಸಿತ್ತು.
ಈ ವಿಡಿಯೋ ನೋಡಿ : ವಾರದ ಸಂತೆ ಮೀರಿಸಿದ ಮಕ್ಕಳ ಸಂತೆ https://www.facebook.com/share/v/2mGWE21YrHxFfBBt/?mibextid=oFDknk
ಇವರು ಕುಮಟಾದ ನಾದಶ್ರೀ ಕಲಾ ಕೇಂದ್ರದಲ್ಲಿ ವಿದುಷಿ ನಯನ ಪ್ರಸನ್ನ ಬಳಿ 17 ವರ್ಷಗಳಿಂದ ಭರತ ನಾಟ್ಯ ಅಭ್ಯಾಸ ಮಾಡುತ್ತಿದ್ದು 2022 ರ ಸಾಲಿನಲ್ಲಿ ನಡೆದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ 90.8% ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿ ವಿದುಷಿಯಾಗಿದ್ದಾರೆ.
ಗೋಕರ್ಣ ಮೂಲದ ವಿದುಷಿ ಪಲ್ಲವಿ ಗಾಯತ್ರಿ ಕುಮಟಾ ನಿವಾಸಿಯಾಗಿದ್ದಾರೆ. ಇವರು ಪದವಿ ಮುಗಿಸಿದ ಒಂದು ವರ್ಷದ ಒಳಗೇ ಅವಳ ಆಟ-ಪಾಠಗಳೊಂದಿಗೆ ಒಂದು ವಿಶೇಷ ಸ್ನಾತಕೋತ್ತರ ಪದವಿಯನ್ನು ಮುಗಿಸಲು ವಿದುಷಿ ನಯನಾ ಪ್ರಸನ್ನ ಯೋಜನೆ ಹಾಕಿದ್ದರು. ಅದರಂತೆ ತರಬೇತಿ ನೀಡಿ, ಹಲವು ಹಂತದ ಗಂಧರ್ವ ಪರೀಕ್ಷೆಗಳಿಗೆ ಒರೆ ಹಚ್ಚಿ, ಅಭಿನಯ, ನೃತ್ಯ,ಸಂಗೀತ, ಹಾಗೂ ಭರತನಾಟ್ಯ ಶಾಸ್ತ್ರೀಯ ವಿಷಯಗಳ ಮೇಲೆ ಆಳವಾದ ಅಧ್ಯಯನ ಮಾಡಲು ಪ್ರೇರೇಪಿಸಿದ್ದರು.
ವಿ. ಪಲ್ಲವಿ ಗಾಯತ್ರಿ ಪ್ರಸ್ತುತ ಬೆಂಗಳೂರಿನ ಜೈನ್ ವಿಶ್ವ ವಿದ್ಯಾಲಯದ ಮಾಸ್ಟರ್ ಇನ್ ಪರ್ಫಾರ್ಮಿಂಗ್ ಆರ್ಟ್ಸ್ ಸ್ನಾತಕೋತ್ತರ ಕೋರ್ಸ್ ಎರಡನೇ ಸೆಮಿಸ್ಟರ್ ಕಲಿಯುತ್ತಿದ್ದಾರೆ.
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ನಡೆಸಿದ 2021-22ನೇ ಸಾಲಿನಲ್ಲಿ ಪ್ರತಿಭಾವಂತ ಯುವ ಕಲಾವಿದರಿಗೆ ಎರಡು ವರ್ಷಗಳ ಕಾಲ ನೀಡುವ ವಿದ್ಯಾರ್ಥಿ ವೇತನದ ಭರತನಾಟ್ಯ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ಒಟ್ಟು 31 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಕರ್ನಾಟಕದ ಆರು ವಿದ್ಯಾರ್ಥಿಗಳಲ್ಲಿ ಸ್ಥಾನ ಪಡೆದ ಉತ್ತರಕನ್ನಡದ ಏಕೈಕ ಯುವ ಕಲಾವಿದೆ ಇವರಾಗಿದ್ದಾರೆ.