ಭಟ್ಕಳ: ರಾಹುಲ್ ಗಾಂಧಿ ಕೊಡುವ ಒಂದು ಲಕ್ಷ ರೂಪಾಯಿ ಹುಸಿ ಭರವಸೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆರೋಪಿಸಿದರು. ಅವರು ಶನಿವಾರ ನಗರದ ಬಿ.ಜೆ.ಪಿ. ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಇದನ್ನೂ ಓದಿ : ಭಟ್ಕಳದಲ್ಲಿ ಬೃಹತ್ ಬೈಕ್ ರ‌್ಯಾಲಿ ನಾಳೆ : ಗೋವಿಂದ ನಾಯ್ಕ

ಕೇವಲ ೨೩೦ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಅಸಾಧ್ಯ ಎನ್ನುವುದು ಅವರಿಗೂ ಗೊತ್ತಿದೆ. ಮತದಾರರು ಇಂತಹ ಸೂಕ್ಷ್ಮ ಅರಿಯುವಷ್ಟು ಪ್ರಬುದ್ಧರಿದ್ದಾರೆ. ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ರಾಜ್ಯ ಸರಕಾರದ ಗ್ಯಾರಂಟಿ ಜನರನ್ನು ವಂಚಿಸುವ ಯೋಜನೆಯಾಗಿದೆ. ಇನ್ನೂ ಅನೇಕರಿಗೆ ೨೦೦೦ ರೂಪಾಯಿ ತಲುಪಿಲ್ಲ. ಯಾರಿಗೂ ಸರಿಯಾಗಿ ನೀಡದೆ ಕೇವಲ ಬಡಾಯಿ ಕೊಚ್ಚಿಕೊಳ್ಳುವುದಷ್ಟಕ್ಕೇ ಸೀಮಿತವಾಗಿದೆ. ಪ್ರತಿಯೊಂದಕ್ಕೂ ಬೆಲೆ ಏರಿಸಿದ್ದಲ್ಲದೇ ರೈತರಿಗೆ ಕೊಡುವ ೪೦೦೦, ವಿದ್ಯಾರ್ಥಿಗಳಿಗೆ ಕೊಡುವ ವಿದ್ಯಾರ್ಥಿ ವೇತನ, ಸೈಕಲ್ ಸೇರಿದಂತೆ ಪ್ರತಿಯೊಬ್ಬರಿಗೂ ಸುಮಾರು ೧೪೦೦೦ ರೂ. ದೊರೆಯುವುದನ್ನು ಕಟ್ ಮಾಡಿ ೨೦೦೦ ರೂ. ಕೊಡುತ್ತಿದ್ದಾರೆ. ಇದು ಮಹಾ ಮೋಸವಾಗಿದ್ದು ಜನರು ಅರಿತಿದ್ದಾರೆ ಎಂದು ಅವರು ಹೇಳಿದರು.


ಜನತೆಗೆ ಸುಳ್ಳು ಭರವಸೆಯನ್ನು ನೀಡಿ ಆರಿಸಿ ಬಂದು ಸಚಿವರಾದ ನಂತರ ಜನತೆಗೆ ಬೆನ್ನು ಹಾಕಿದ್ದ ಮಂಕಾಳ ವೈದ್ಯರ ಕುರಿತು ಜನರಿಗೆ ಭ್ರಮ ನಿರಸನವಾಗಿದೆ. ಸುಳ್ಳಿನ ರಾಜಕೀಯ ಮಾಡುತ್ತಿರುವ ಅವರು ಆರಿಸಿ ಬಂದ ೨೪ ಗಂಟೆಯಲ್ಲಿ ಗೊಂಡ ಸಮುದಾಯವರಿಗೆ ಸಿಂಧುತ್ವ ಕೊಡಿಸುವುದಾಗಿ ಭರವಸೆ ನೀಡಿದ್ದರು. ಮೊಗೇರರು ವರ್ಷಾನುಗಟ್ಟಲೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಆರಿಸಿ ಬರುವ ಪೂರ್ವದಲ್ಲಿ ಕೊಟ್ಟ ಎಲ್ಲಾ ಆಶ್ವಾಸನೆಗಳೂ ಹುಸಿಯಾಗಿವೆ. ಜನರು ಇವರನ್ನು ನಂಬದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.


ನಾನು ಈಗಿನ ಸಚಿವರಿಗೆ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ .ಸ್ವಂತ ಖರ್ಚಿನಲ್ಲಿ ನೀವು ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಕಟ್ಟುತ್ತೀರಿ ಎಂದು ಆಶ್ವಾಸನೆ ನೀಡಿದ್ದೀರಿ .ಆದರೆ ಶಾಸಕರಾಗಿ, ಸಚಿವರಾಗಿ ೧೧ ತಿಂಗಳಾದರೂ  ಅದರ ಬಗ್ಗೆ ಒಂದೇ ಒಂದು ಚಕಾರ ಎತ್ತುತ್ತಿಲ್ಲ. ನಿನ್ನೆ ದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳು ಕುಮಟಾಕ್ಕೆ ಬಂದಿದ್ದರು. ಮಲ್ಟಿ ಸ್ಪೆಷಲಿಸ್ಟ್ ಹಾಸ್ಪಿಟಲ್ ಗುದ್ದಲಿ ಪೂಜೆ ದಿನಾಂಕವನ್ನು ಘೋಷಣೆ ಮಾಡಬಹುದಿತ್ತು ಕೇವಲ ಜನರಿಗೆ ದಿಕ್ಕು ತಪ್ಪಿಸುವಂತಹ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಸುನೀಲ ನಾಯ್ಕ ಆರೋಪಿಸಿದರು.

ಕಾಂಗ್ರೆಸ್ ನೀಡುವ ಹುಸಿ ಭರವಸೆ, ಸುಳ್ಳು ಗ್ಯಾರೆಂಟಿ ಆಸೆಗೆ ಜನರು ಬಲಿಯಾಗಬಾರದು. ದೇಶದ ಸುಭದ್ರತೆ, ಅಭಿವೃದ್ಧಿಗೆ ಮೋದಿಯರವನ್ನು ಬೆಂಬಲಿಸಿ ಬಿ.ಜೆ.ಪಿ. ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮತ ನೀಡಿ.
– ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ, ಭಟ್ಕಳ.

ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ  ಮಂಡಲ ಮಾಜಿ ಅಧ್ಯಕ್ಷ ಸುಬ್ರಾಯ ದೇವಾಡಿಗ, ತಾಲೂಕು ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಮೋಹನ ನಾಯ್ಕ, ಭಾಸ್ಕರ ದೈಮನೆ ಅಳ್ವೆಕೋಡಿ, ಮತ್ತಿತರರು ಉಪಸ್ಥಿತರಿದ್ದರು.