ಭಟ್ಕಳ : ತಾಲೂಕಿನ ಹಡಿನ್ ಗ್ರಾಮದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಯಲ್ವಡಿಕವೂರ್ ಗ್ರಾ. ಪಂ. ಅಧ್ಯಕ್ಷೆ ಪಾರ್ವತಿ ಗೊಂಡ ಮಾತನಾಡಿ, ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಯಾವ ಖಾಸಗಿ ಕಾಲೇಜಿಗೂ ಕಡಿಮೆಯಿಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬಹುಮಾನ ವಿತರಕರಾಗಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಡಿ. ಮೊಗೇರ್ ಮಾತನಾಡಿ, ಸರಕಾರಿ ಕಾಲೇಜಿನಲ್ಲಿ ಉನ್ನತ ಮಟ್ಟದ ಶಿಕ್ಷಣ ದೊರಕುತ್ತದೆ. ವಿದ್ಯಾರ್ಥಿಗಳು ಯಾವುದೇ ಅಂಜಿಕೆ ಇಲ್ಲದೆ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಬಹುದು. ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪರಿಸರ ಉತ್ತಮವಾದ ಶಿಕ್ಷಣ ಪಡೆಯಲು ಹೇಳಿ ಮಾಡಿಸಿದಂತಿದೆ. ಇಲ್ಲಿನ ವಾತಾವರಣ, ಉಪನ್ಯಾಸಕ ವೃಂದ, ಶಿಕ್ಷಣಕ್ಕೆ ಅವರು ನೀಡುವ ಕಾಳಜಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ರೂಪಿಸಲು ಸಹಕಾರಿಯಾಗಿದೆ. ಕ್ರೀಡೆಯಲ್ಲೂ ಕಾಲೇಜು ಸಾಧನೆ ಮಾಡುತ್ತಿದ್ದು, ಇಷ್ಟೊಂದು ವಿದ್ಯಾರ್ಥಿಗಳು ಪದಕ, ಬಹುಮಾನ ಗೆದ್ದಿದ್ದು ನೋಡಿ ತುಂಬಾ ಖುಷಿಯಾಗಿದೆ ಎಂದರು.
ಇದನ್ನೂ ಓದಿ : ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ಧೃತಿ
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಭಾಸ್ಕರ ನಾಯ್ಕ ಮಾತನಾಡಿ, ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿಯ ಹಂತದಲ್ಲಿದ್ದು, ಕಟ್ಟಡ ಸೇರಿದಂತೆ ಇಲ್ಲಿರುವ ಕೊರತೆಗಳನ್ನು ನೀಗಿಸುವಂತೆ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಂಕಾಳ ವೈದ್ಯ ಅವರ ಬಳಿ ಕೇಳಿಕೊಂಡಾಗ ಶೀಘ್ರದಲ್ಲಿ ಪರಿಹರಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಕಳೆದ ಹಲವಾರು ವರ್ಷಗಳಿಂದ ಕಾಲೇಜಿಗೆ ಸುಣ್ಣ ಬಣ್ಣ ಬಳಿಯದೆ ಇದ್ದುದರ ಬಗ್ಗೆ ತಿಳಿಸಿದಾಗ ಕೂಡಲೇ ಅದಕ್ಕೆ ಸ್ಪಂದಿಸಿ, ಅತೀ ಶೀಘ್ರದಲ್ಲಿ ಸುಣ್ಣ ಬಣ್ಣ ಬಳಿಸಿ ತಮ್ಮ ಶಿಕ್ಷಣ ಪ್ರೇಮ ಮೆರೆದಿದ್ದಾರೆ ಎಂದರು.
ಇದನ್ನೂ ಓದಿ: ಉಮೇಶ ಮುಂಡಳ್ಳಿಯವರ ‘ತಿಂಗಳ ಬೆಳಕು’ ಬಿಡುಗಡೆ
ಕಾಲೇಜು ಸಮಿತಿಯ ಸದಸ್ಯರು ಹಾಗೂ ನಿವೃತ್ತ ಶಿಕ್ಷಕ ಈರಪ್ಪ ಜೆ. ನಾಯ್ಕ ಮಾತನಾಡಿ, ಹಿಂದೆ ಸಚಿವರಾಗಿದ್ದ ಶಿವಾನಂದ ನಾಯ್ಕ ಅವರ ಪ್ರಯತ್ನದಿಂದ ಇಲ್ಲಿ ಕಾಲೇಜು ಮಂಜೂರಿಯಾಯ್ತು. ಈಗಿನ ಸಚಿವರಾದ ಮಾಂಕಾಳ ವೈದ್ಯ ಅವರ ಪ್ರಯತ್ನದಿಂದ ಕಟ್ಟಡ ನಿರ್ಮಾಣವಾಗಿತ್ತು. ಈಗ ಇವರಿಂದಲೇ ಕಾಲೇಜು ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಶುಪಾಲ ಗಜಾನನ ನಾಯ್ಕ ಮಾತನಾಡಿ, ಸರಕಾರಿ ಪದವಿ ಪೂರ್ವ ಕಾಲೇಜನ್ನು ಇಡೀ ಜಿಲ್ಲೆಯಲ್ಲಿಯೇ ಮಾದರಿ ಕಾಲೇಜನ್ನಾಗಿ ಮಾಡಬೇಕು ಎನ್ನುವ ಗುರಿಯೊಂದಿಗೆ ನಾವು ಸಾಗುತ್ತಿದ್ದೇವೆ. ಸರಕಾರಿ ಕಾಲೇಜಿನಲ್ಲಿ ಕಷ್ಟ ಸಾಧ್ಯವೇ ಆದಂತಹ ಸಿ. ಇ. ಟಿ, ತರಬೇತಿಯನ್ನು ಸಚಿವ ಮಂಕಾಳ ವೈದ್ಯ ಅವರ ಸಹಕಾರದಿಂದ ಉಚಿತವಾಗಿ ನಡೆಸುತ್ತಿದ್ದು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಇನ್ನೂ ಅನೇಕ ಯೋಜನೆಗಳಿದ್ದು, ಕೊಠಡಿಗಳ ಕೊರತೆಯಿಂದ ಸಾಧ್ಯವಾಗುತ್ತಿಲ್ಲ. ಆದರೆ ಈ ಬಾರಿ ಕಟ್ಟಡದ ಭರವಸೆ ಸಿಕ್ಕಿದ್ದು, ಅದು ಸಾಕಾರವಾದರೆ ಕಾಲೇಜು ಮಾದರಿ ಕಾಲೇಜು ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ಹಿರಿಯ ಉಪನ್ಯಾಸಕ ಮಂಜುನಾಥ ನಾಯ್ಕ ಸ್ವಾಗತಿಸಿದರೆ, ಎಮ್. ಕೆ. ನಾಯ್ಕ ವರದಿವಾಚಿಸಿದರು. ಉಪನ್ಯಾಸಕರಾದ ರಾಜೇಶ ನಾಯ್ಕ, ಯೋಗೇಶ್ ಪಟಗಾರ, ರಂಗ ಪಟಗಾರ ಸೇರಿದಂತೆ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ಕಾಲೇಜು ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.