ಭಟ್ಕಳ: ಬಿಜೆಪಿ ಅಭ್ಯರ್ಥಿ ಜಿಲ್ಲೆಗೆ ಅನ್ಯಾಯ ಮಾಡುವವರು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಸ್ಪಂದಿಸದವರು. ನಮ್ಮದು ಈ ಅನ್ಯಾಯದ ವಿರುದ್ಧದ ನ್ಯಾಯದ ಚುನಾವಣೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.

ಇದನ್ನೂ ಓದಿ : ಬಿಜೆಪಿಗರ ಸುಳ್ಳುಗಳಿಗೆ ಕಿವಿಗೊಡದಿರಿ : ಮಂಕಾಳ ವೈದ್ಯ ಕರೆ

ಶಿರಾಲಿ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸೀತಾಪಹರಣದ ವೇಳೆ ಸೀತೆಯನ್ನ ಲಂಕೆಯಿಂದ ಕರೆತರಲು ಹನುಮಾನ್ ಕಾರಣರಾಗಿದ್ದರು. ಬಿಜೆಪಿಗರು ಅದಾನಿ, ಅಂಬಾನಿಯರ ಮೂಲಕ ನಮ್ಮ ತೆರಿಗೆ ಹಣವನ್ನ ಲಂಕೆಗೆ ಕೊಂಡೊಯ್ಯುತ್ತಿದ್ದಾರೆ. ಜನರೆಲ್ಲ ಸೇರಿ ಹನುಮಂತರಾಗಿ ನಮ್ಮ ಹಣವನ್ನ ನಾವು ವಾಪಸ್ಸು ತರಬೇಕಿದೆ. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆನೀಡಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಮನ್ ಕಿ ಬಾತ್ ಬೇಡ, ಜನ್ ಕಿ ಬಾತ್ ಕೇಳಬೇಕಿದೆ. ಪ್ರತಿ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿ ಅದಾನಿ, ಅಂಬಾನಿ ಹೊಟ್ಟೆ ತುಂಬಿಸುತ್ತಿರುವ ಬಿಜೆಪಿಗರನ್ನ ಜನ ಪ್ರಶ್ನಿಸಬೇಕಿದೆ. ನಿಮಗಾಗಿ, ನಿಮ್ಮ ತೆರಿಗೆ ಹಣ ನಿಮಗೆ ವಾಪಸ್ಸು ಬರಲು ಕಾಂಗ್ರೆಸ್ ಗೆ ಮತ ನೀಡಬೇಕಿದೆ ಎಂದರು.

ಇದನ್ನೂ ಓದಿ : ಜಿಲ್ಲೆಯ ಜನರ ಧ್ವನಿಯಾಗಲು ಡಾ.ಅಂಜಲಿ ಬೆಂಬಲಿಸಿ : ಮಂಕಾಳ ವೈದ್ಯ

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಕೆಲಸ ಮಾಡದವರು ಮತ್ತೆ ಜನಪ್ರತಿನಿಧಿಗಳಾಗಬಾರದು. ಬಿಜೆಪಿಗರು ೧೦ ವರ್ಷದಲ್ಲಿ ಒಂದೊಳ್ಳೆ ಕೆಲಸ ಮಾಡಿದ್ದರೆ ಹೇಳಲಿ. ಚುನಾವಣೆ ಬರುತ್ತಿದ್ದಂತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಪಾದಯಾತ್ರೆ ಮಾಡುತ್ತಾರೆ. ವಿಧಾನಸಭೆಯ ಅಧಿವೇಶನದಲ್ಲಿ ಆಸ್ಪತ್ರೆಯ ಬಗ್ಗೆ ಚರ್ಚೆಯಾದರೂ ಈಗಿನ ಬಿಜೆಪಿ ಆಭ್ಯರ್ಥಿ, ಅಂದಿನ ಸ್ಪೀಕರ್ ಮೌನಿಯಾಗಿದ್ದರು ಎಂದು ಕಿಡಿಕಾರಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮಾ ಮೊಗೇರ ಮಾತನಾಡಿ, ತಿನ್ನುವ ಅನ್ನ, ಬೆಳೆಯುವ ಬೆಳೆಗೆ ಬಳಸುವ ರಸಗೊಬ್ಬರ ಸೇರಿದಂತೆ ಎಲ್ಲದಕ್ಕೂ ಜಿಎಸ್‌ಟಿ ವಿಧಿಸಿ ಮೋದಿಯವರು ದರೋಡೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಮಾಡಿದ ಸರ್ಕಾರಿ ಆಸ್ತಿಗಳನ್ನ ಮಾರಿದ್ದನ್ನ ಬಿಟ್ಟರೆ ಬಿಜೆಪಿ ಸರ್ಕಾರ ಬೇರೇನನ್ನೂ ಮಾಡಿಲ್ಲ ಎಂದು ವಾಗ್ದಾಳಿ ಮಾಡಿದರು.
ದೇವಾಡಿಗ ಸಮಾಜದ ಮುಖಂಡ ವೆಂಕಟಯ್ಯ ಭೈರುಮನೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕೊಟ್ಟ ಐದು ಗ್ಯಾರಂಟಿಗಳ ಬಗ್ಗೆ ಜನ ಯೋಚಿಸಬೇಕಿದೆ. ಭೂಸುಧಾರಣಾ ಕಾಯ್ದೆ ಮೂಲಕ ರೈತರಿಗೆ ಜೀವನ ಕಲ್ಪಿಸಿದ್ದು ಕಾಂಗ್ರೆಸ್ ಸರ್ಕಾರ. ನಮ್ಮ ಇನ್ನಷ್ಟು ಕೆಲಸಗಳಾಗಬೇಕೆಂದರೆ ಡಾ.ನಿಂಬಾಳ್ಕರ್ ಆರಿಸಿ ಬರಲೇಬೇಕು ಎಂದರು.

ಇದನ್ನೂ ಓದಿ : ಸೋಡಿಗದ್ದೆ ಮಹಾಸತಿ ಅಭಯ ಪಡೆದ ಡಾ.ಅಂಜಲಿ
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಐದು ವರ್ಷಗಳಲ್ಲಿ ಮಾರ್ಗರೆಟ್ ಆಳ್ವ ಮಾಡಿದಷ್ಟು ಕೆಲಸ ೩೦ ವರ್ಷಗಳಲ್ಲಿ ಬಿಜೆಪಿ ಸಂಸದರಿಂದ ಮಾಡಲಾಗಿಲ್ಲ. ಬಿಜೆಪಿ ಅಭ್ಯರ್ಥಿ ಕಾಗೇರಿ ಕೂಡ ಕೆಲ ಇಲಾಖೆಗಳನ್ನ ಶಿರಸಿಗೆ ವರ್ಗಾಯಿಸಿದ್ದು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ ಎಂದರು.

ಈ ಸಂದರ್ಭದಲ್ಲಿ ಮಹಿಳೆಯರಿಂದ ಡಾ.ಅಂಜಲಿ ಅವರಿಗೆ ಉಡಿ ತುಂಬಿ ಗೌರವಿಸಲಾಯಿತು. ಕೆಪಿಸಿಸಿ ಸಂಯೋಜಕ ವಿಶ್ವಾಸ್ ಅಮೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ನಾಮಧಾರಿ ಮುಖಂಡ ಸುಬ್ರಾಯ ನಾಯ್ಕ, ಗೊಂಡ ಸಮಾಜದ ಮುಖಂಡ ಮಾಸ್ತಿ ಗೊಂಡ, ಮುಸ್ಲಿಂ ಮುಖಂಡ ನಜೀರ್, ವಿಷ್ಣು ದೇವಾಡಿಗ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷೆ ಅಬ್ದುಲ್ ಮಜೀದ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜು ನಾಯ್ಕ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅಲ್ಬರ್ಟ್ ಡಿಕೋಸ್ತಾ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ ಮುಂತಾದವರಿದ್ದರು.