ಕಾರವಾರ : ಮಹಾರಾಷ್ಟ್ರ ಏಕೀಕರಣ ಸಮಿತಿ ಇದೀಗ ಉತ್ತರಕನ್ನಡಕ್ಕೂ ಕಾಲಿಟ್ಟಿದೆ. ಸಂಯುಕ್ತ ಮಹಾರಾಷ್ಟ್ರ ರಚನೆಯ ಗುರಿಯೊಂದಿಗೆ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಎಂಇಎಸ್ ಮುಂದಾಗಿದೆ. ಕಾರವಾರದಲ್ಲಿ ಇಂದು(ಏ.೧೫) ಎಂಇಎಸ್‌ನ ಅಭ್ಯರ್ಥಿ ನಿರಂಜನ್ ಉದಯ ಸಿಂಹ ಸರ್ದೇಸಾಯಿ ಉತ್ತರಕನ್ನಡ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ : ಸ್ವಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾಗೇರಿ ಬಿರುಸಿನ ಪ್ರಚಾರ

ನಗರದ ಮಿತ್ರಸಮಾಜ ಮೈದಾನದಿಂದ 30ಕ್ಕೂ ಅಧಿಕ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಯಿತು. ಸಂಯುಕ್ತ ಮಹಾರಾಷ್ಟ್ರ ರಚನೆಯ ಘೋಷಣೆಗಳನ್ನ ಕೂಗುತ್ತಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಬಳಿಕ ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ್‌ಗೆ ನಾಮಪತ್ರ ಸಲ್ಲಿಸಿದರು. ಮರಾಠಿ ಭಾಷಿಕರ ಮೇಲಿನ ದೌರ್ಜನ್ಯದ ವಿರುದ್ದ ಬೆಳಗಾವಿ ಹಾಗೂ ಉತ್ತರಕನ್ನಡದಲ್ಲಿ ಈ ಬಾರಿ ಎಂಇಎಸ್‌ನಿಂದ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು. ರಾಷ್ಟ್ರೀಯ ಪಕ್ಷಗಳು ಮರಾಠಿಗರನ್ನು ಕೇವಲ ಅವರ ಅಭಿವೃದ್ಧಿಗಾಗಿ ಬಳಸಿಕೊಳ್ಳುತ್ತಿವೆ. ಹೀಗಾಗಿ ಮರಾಠಿ ಭಾಷೆ, ಸಂಸ್ಕೃತಿಯ ಪರವಾಗಿ ಇರುವಂತೆ ಮರಾಠಾ ಮತದಾರರಿಗೆ ಮನವಿ ಮಾಡಿದರು. ಯಾವುದೇ ರಾಷ್ಟ್ರೀಯ ಪಕ್ಷಗಳು ಹಣ ನೀಡಿದರೂ ಅವರನ್ನ ಬೆಂಬಲಿಸಬೇಡಿ ಎಂದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಇನ್ನು ಎಂಇಎಸ್ ಛತ್ರಪತಿ ಶಿವಾಜಿ ಮಹಾರಾಜರ ವಿಚಾರಧಾರೆಗಳೊಂದಿಗೆ ಎಲ್ಲ ಜಾತಿ ಧರ್ಮಗಳನ್ನ ಒಗ್ಗೂಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಭಾಷಾಧಾರಿತ ಗಡಿ ವಿವಾದವನ್ನ ಸರ್ಕಾರಗಳು ಮಾಡಿವೆ. ಭಾಷಾಧಾರಿತ ಪ್ರಾಂತ್ಯಗಳ ರಚನೆಯಿಂದ 40 ಲಕ್ಷಕ್ಕೂ ಅಧಿಕ ಮರಾಠಿಗರು ಕರ್ನಾಟಕದಲ್ಲಿ ಸಿಲುಕಿದ್ದಾರೆ. ಇದರ ವಿರುದ್ಧ ಕಳೆದ 60ಕ್ಕೂ ಅಧಿಕ ವರ್ಷಗಳಿಂದ ನಾವು ಹೋರಾಡುತ್ತಿದ್ದೇವೆ. ಗಡಿ ಜಿಲ್ಲೆಗಳಲ್ಲಿ ಮರಾಠಿ ಹಾಗೂ ಕನ್ನಡದ ದ್ವಿಭಾಷೆಯ ಆಡಳಿತ ವ್ಯವಸ್ಥೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಕಾರವಾರ, ಜೋಯಿಡಾ, ಹಳಿಯಾಳ ಭಾಗಗಳಲ್ಲಿದ್ದ ಮರಾಠಿ ಶಾಲೆಗಳನ್ನ ಹಂತ ಹಂತವಾಗಿ ಬಂದ್ ಮಾಡಲಾಗಿದೆ. ಬೆಳಗಾವಿಯ ಖಾನಾಪುರ ಭಾಗದಲ್ಲಿ ೫೦ ಶೇಕಡಾ ಜನತೆ ಮರಾಠಿ ಮಾತನಾಡುತ್ತಾರೆ. ಆದರೂ ಅಲ್ಲಿನ ಮರಾಠಿ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನ ನೀಡದೇ ಸರ್ಕಾರಗಳು ಅನ್ಯಾಯ ಮಾಡುತ್ತಿವೆ. ನಾವು ಕನ್ನಡದ ವಿರೋಧಿಗಳಲ್ಲ. ನಮ್ಮ ಮಾತೃಭಾಷೆಯನ್ನ ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಮರಾಠಿಗರಿರುವಲ್ಲಿ ಕನ್ನಡದೊಂದಿಗೆ ಮರಾಠಿ ಭಾಷೆಯ ನಾಮಫಲಗಳನ್ನೂ ಅಳವಡಿಸಬೇಕು. ಈ ಎಲ್ಲ ಹೋರಾಟಗಳಿಗೆ ದನಿಯಾಗಲು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ ಎಂದು ಅಭ್ಯರ್ಥಿ ನಿರಂಜನ್ ತಿಳಿಸಿದರು.