ಭಟ್ಕಳ: ಮಾ.೨೫ರಿಂದ ಆರಂಭಗೊಳ್ಳುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ವರ್ಷ ಹೊಸ ಹಾಗೂ ಪುನರಾವರ್ತಿತರು ಸೇರಿದಂತೆ ೧೧೭೯ ಗಂಡು, ೧೧೫೭ ಹೆಣ್ಣು, ಒಟ್ಟು ೨೩೩೬ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆ ; ನಿಷೇದಾಜ್ಞೆ, ಬಸ್ ಪ್ರಯಾಣ ಉಚಿತ

ತಾಲೂಕಿನಲ್ಲಿ ೮ ಪರೀಕ್ಷಾ ಕೇಂದ್ರಗಳಿವೆ. ಎಲ್ಲ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮೂರು ತಾಲೂಕು ಜಾಗೃತ ದಳ ನಿಯೋಜಿಸಲಾಗಿದೆ. ೮ ಮಂದಿ ಸಿಟಿಂಗ್ ಸ್ಟ್ಯಾಡ್, ೮ ಮುಖ್ಯ ಅಧೀಕ್ಷಕರು, ೮ ಪೇಪರ್ ಕಸ್ಟೋಡಿಯನ್‌, ೮ ಮಂದಿ ಮೊಬೈಲ್ ಸ್ವಾಧೀನಾಧಿಕಾರಿಗಳು, ೧೯೦ ಮಂದಿ ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಡಿಯೋ ನೋಡಿ : ಖಾನಾಪುರದಲ್ಲಿ ಕಾಡಾನೆ ಪ್ರತ್ಯಕ್ಷ

ಈಗಾಗಲೇ ತಾಲೂಕಿನ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಸಂಬಂಧ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ. ವಿಷಯವಾರು ಮಾರ್ಗದರ್ಶಿ ತರಗತಿಗಳು, ಪಾಲಕರ ಸಭೆ, ವಿದ್ಯಾರ್ಥಿಗಳ ಕಾರ್ಯಾಗಾರ, ಶಿಕ್ಷಕರ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಈ ವರ್ಷ ಒಳ್ಳೆಯ ಫಲಿತಾಂಶ ದಾಖಲಿಸುವ ನಿರೀಕ್ಷೆ ಇದೆ ಎಂದು ವಿ.ಡಿ.ಮೊಗೇ‌ರ್ ತಿಳಿಸಿದ್ದಾರೆ.


ತಾಲೂಕಿನ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರು ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ತಾಲೂಕಿನ ಅಧಿಕಾರಿಗಳೊಂದಿಗೆ ಉತ್ತಮ ಕೋ-ಆರ್ಡಿನೇಶನ್ ಇದೆ ಹಾಗಾಗಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಖಾಸಗಿ ವಿದ್ಯಾರ್ಥಿಗಳಿಗೆ ಶುಭಸುದ್ದಿ:
ಭಟ್ಕಳ ತಾಲೂಕಿನಲ್ಲಿ ೨೭೭ ಗಂಡು, ೬೬ ಹೆಣ್ಣು ಸೇರಿದಂತೆ ಒಟ್ಟು ೩೪೩ ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಪ್ರತಿ ವರ್ಷ ಇವರು ಕಾರವಾರಕ್ಕೆ ಹೋಗಿ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಈ ಬಾರಿ ಖಾಸಗಿ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿಗಳೊಂದಿಗೆ ಭಟ್ಕಳದಲ್ಲೇ ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿದೆ ಎಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ ತಿಳಿಸಿದ್ದಾರೆ.

೧೦೦% ಫಲಿತಾಂಶ ಹೊಂದುವ ಗುರಿ:
ಭಟ್ಕಳ ತಾಲೂಕಿನಲ್ಲಿ ಇದುವರೆಗೂ ಯಾವುದೇ ವಿದ್ಯಾರ್ಥಿಯ ಫಲಿತಾಂಶ ಶೇ.೧೦೦ಕ್ಕೆ ೧೦೦ ಆಗಿದ್ದಿಲ್ಲ. ಈ ಬಾರಿ ಶಾಲಾ ಪರೀಕ್ಷೆಗಳಲ್ಲಿ ಶೇ.೯೮, ೯೯ ಅಂಕ ತೆಗೆದುಕೊಳ್ಳುವ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಆ ಎಲ್ಲ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ಹಾಗೂ ತರಬೇತಿ ನೀಡಲಾಗಿದೆ. ಹಾಗಾಗಿ ಈ ಬಾರಿ ಶೇ.೧೦೦ ಅಂಕಗಳನ್ನು ಪಡೆದು ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ವಿ.ಡಿ.ಮೊಗೇರ ತಿಳಿಸಿದ್ದಾರೆ.