ಶಿವಮೊಗ್ಗ : ಕರಾವಳಿಗರಿಗೆ ಚಿರಪರಿಚಿತ ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ (೬೮) ಬಿಜೆಪಿ ಕಟ್ಟಾಳು. ಉಸಿರಿರುವರೆಗೂ ಬಿಜೆಪಿಗಾಗಿ ದುಡಿದ ಭಾನುಪ್ರಕಾಶ, ಇಂದು ಬಿಜೆಪಿ ಕೈಗೊಂಡಿದ್ದ ಪ್ರತಿಭಟನೆ ವೇಳೆ ಮೃತಪಟ್ಟಿದ್ದಾರೆ.
ವಿಡಿಯೋ ನೋಡಿ : ಪ್ರತಿಭಟನೆ ವೇಳೆ ಹೃದಯಾಘಾತದಿಂದ ಸಾವು
ಪ್ರತಿಭಟನೆ ಮುಗಿಸಿ ಕಾರು ಹತ್ತುವ ವೇಳೆ ಯಾಕೋ ಸುಸ್ತಾಗುತ್ತಿದೆ ಎಂದ ಭಾನುಪ್ರಕಾಶ ಕ್ಷಣಾರ್ಧದಲ್ಲಿ ಅಲ್ಲೇ ಕುಸಿದುಬಿದ್ದರು. ತಕ್ಷಣ ಅವರನ್ನು ಶಾಸಕರಾದ ಎಸ್ ಎನ್ ಚನ್ನಬಸಪ್ಪ, ಡಿ ಎಸ್ ಅರುಣ್ ಮತ್ತಿತರರು ಸನಿಹದಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಕರೆತಂದರು. ಆದರೆ ಅದಾಗಲೇ ಅವರ ಹೃದಯ ನಿಂತುಹೋಗಿದೆ ಎಂದು ವೈದ್ಯರು ಘೋಷಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ವೇಳೆ ಕುಸಿದು ಬಿದ್ದ ಮಾಜಿ ಎಮ್ಮೆಲ್ಸಿ ನಿಧನ
ಪಕ್ಷದ ಹಿರಿಯರು, ಮಾರ್ಗದರ್ಶಕರು ಆಗಿದ್ದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು. ವಿಧಾನಪರಿಷತ್ ಮಾಜಿ ಸದಸ್ಯರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾತ್ರವಲ್ಲದೆ, ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ಕೆಲಸ ಮಾಡಿದ್ದರು. ಅಲ್ಲದೆ ಕರಾವಳಿ ಕರ್ನಾಟಕದ ಲೋಕಸಭಾ ಕ್ಲಸ್ಟರ್ ಪ್ರಮುಖರಾಗಿ ಅವರು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡಿದವರು. ಹೀಗಾಗಿ ಪಕ್ಷದ ಕರಾವಳಿಗರಿಗೆ ಚಿರಪರಿಚಿತ.
ವಿಡಿಯೋ ನೋಡಿ : ಸಾವಿಗೂ ಮುನ್ನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಭಾನುಪ್ರಕಾಶ
ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ, ರಾಜ್ಯ ಪ್ರಕೋಷ್ಠಗಳ ಸಂಯೋಜಕರಾಗಿ ಪಕ್ಷವನ್ನು ಶಿಸ್ತು ಬದ್ಧವಾಗಿ ಸಂಘಟಿಸುವಲ್ಲಿ, ಕಾರ್ಯಕರ್ತರನ್ನು ತರಬೇತಿಗೊಳಿಸಿ ಬೆಳೆಸುವಲ್ಲಿ ಅವರ ಕೊಡುಗೆಯನ್ನಿತ್ತಿದ್ದಾರೆ. ರಾಜಕೀಯ ಮಾರ್ಗದರ್ಶಕರಾಗಿ ಸಲಹೆ, ಸೂಚನೆ ನೀಡುತ್ತಿದ್ದವರು.
ವಿಡಿಯೋ ನೋಡಿ : ಕಾರು ಹತ್ತುವಾಗ ಕುಸಿದು ಬಿದ್ದರು
ಬಾಲ್ಯದಿಂದಲೂ ಆರ್. ಎಸ್. ಎಸ್. ಸ್ವಯಂ ಸೇವಕರಾಗಿದ್ದ ಅವರು, ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಜಿಲ್ಲಾ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿದ್ದ ಅವರು
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಇವರಿಗೆ ಪತ್ನಿ, ಮೂವರು ಗಂಡುಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧುಬಳಗವಿದೆ. ಸ್ವಗ್ರಾಮ ಮತ್ತೂರಿನ ಸ್ವಗೃಹದಲ್ಲಿ ಶ್ರದ್ಧಾಂಜಲಿ ಸಭೆಯ ನಂತರ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
ಸಂತಾಪ : ಎಂ.ಬಿ.ಭಾನುಪ್ರಕಾಶ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಸಂಸದರಾದ ಬಿ ವೈ ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಎಸ್ ಎನ್ ಚನ್ನಬಸಪ್ಪ, ಡಿ ಎಸ್ ಅರುಣ್, ಧನಂಜಯ ಸರ್ಜಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.