ಭಟ್ಕಳ: ಇಲ್ಲಿನ ಖಾಸಗಿ ಕ್ಲಿನಿಕ್‌ವೊಂದರಲ್ಲಿ ಕಾಲು ನೋವಿಗೆ ಚಿಕಿತ್ಸೆ ಪಡೆದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮಹಿಳೆಯ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಮುರುಡೇಶ್ವರ ಗರಡಿಗದ್ದೆಯ ನಿವಾಸಿ ಸಾವಿತ್ರಿ ಗೋವಿಂದ ನಾಯ್ಕ (57) ಮೃತ ಮಹಿಳೆ. ಇವರು ಕಾಲು ನೋವಿಗೆ ಸಂಬಂಧಿಸಿದಂತೆ ಏಳೆಂಟು ತಿಂಗಳ ಹಿಂದೆ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಕಾಲಿನಲ್ಲಿ ಸಣ್ಣ ಗಾಯವೊಂದು ಕಾಣಿಸಿಕೊಂಡು ನೋವು ಉಲ್ಭಣಿಸಿದ ಹಿನ್ನೆಲೆಯಲ್ಲಿ ಮತ್ತೆ ಚಿಕಿತ್ಸೆ ಪಡೆಯಲು ಅದೇ ಕ್ಲಿನಿಕ್‌ಗೆ ಬಂದಿದ್ದರು. ಕಾಲಿನ ಗಾಯಕ್ಕೆ ಚುಚ್ಚುಮದ್ದು ನೀಡಿದ ನಂತರ ಮಹಿಳೆ ಅಸ್ವಸ್ಥಗೊಂಡಂತೆ ಕಂಡು ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸಮೀಪದ ಆರೆನ್ನೆಸ್ ಆಸ್ಪತ್ರೆ ಕರೆದೊಯ್ಯುವ ವೇಳೆ ಮಹಿಳೆ ಮೃತರಾಗಿದ್ದಾರೆ. ಕಾಲು ನೋವಿಗೆ ಚಿಕಿತ್ಸೆ ಪಡೆದ ಮಹಿಳೆ ಸಾವಿನ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಮೃತ ಮಹಿಳೆಯ ಮಗ ಶಂಕರ ನಾಯ್ಕ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ : ಕಡವಿನಕಟ್ಟೆ, ಕಂಡೆಕೋಡ್ಲು, ವೆಂಕಟಾಪುರ ಅಭಿವೃದ್ಧಿಗಾಗಿ ಗ್ರಾಮಸ್ಥರ ಮನವಿ

ಪ್ರಕರಣ ದಾಖಲಿಸಿಕೊಂಡ ಮುರುಡೇಶ್ವರ ಠಾಣಾ ಎಸ್‌ಐ ಮಂಜುನಾಥ ತನಿಖೆ ಕೈಗೊಂಡಿದ್ದಾರೆ. ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ನಂತರವಷ್ಟೇ ಏನನ್ನಾದರೂ ಹೇಳಲು ಸಾಧ್ಯ ಎಂದು ಠಾಣಾ ಎಸ್‌ಐ ಮಂಜುನಾಥ ತಿಳಿಸಿದ್ದಾರೆ.

ಮೃತರಿಗೆ ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಗಳು ಇದ್ದಾರೆ.