ಕುಮಟಾ: ತಾಲೂಕಿನಲ್ಲೂ ಶನಿವಾರ ಬೆಳಿಗ್ಗೆ ಗುಡುಗು, ಸಿಡಿಲು ಹಾಗೂ ಗಾಳಿಯೊಂದಿಗೆ ರಭಸದಿಂದ ಮಳೆ ಸುರಿಯಿತು. ಈ ಅಕಾಲಿಕ ಮಳೆಯಿಂದಾಗಿ ತೀವ್ರ ಬಿಸಿಲ ಹಾಗೂ ಸೆಖೆಯಿಂದ ಬಳಲಿ ಬೆಂಡಾಗಿದ್ದ ಜನರು ಸ್ವಲ್ಪಮಟ್ಟಿಗೆ ತಂಪಿನ ವಾತಾವರಣ ಅನುಭವಿಸಿದರು.

ಇದನ್ನೂ ಓದಿ : ಗಾಳಿ ಮಳೆಗೆ ಭಟ್ಕಳದಲ್ಲಿ ಲಕ್ಷಾಂತರ ರೂ. ಹಾನಿ

ಕುಮಟಾ ತಾಲೂಕಿನಲ್ಲಿ ಶನಿವಾರ ಗುಡುಗು-ಸಿಡಿಲು ಹಾಗೂ ಗಾಳಿಯೊಂದಿಗೆ ಸುರಿದ ಮಳೆಗೆ ಹೆಗಡೆ ಗ್ರಾಮದ ಶಿವಪೂರದ ಪಾರ್ವತಿ ಮಂಜುನಾಥ ಮುಕ್ರಿ ಅವರ ಮನೆಯ ಗೋಡೆ ಕುಸಿದು ಬಿತ್ತು,

 

ಉಪ್ಪಿನಪಟ್ಟಣದಲ್ಲಿ ಮರವೊಂದು ಬಿದ್ದು ಅನಂತ ಪುಂಡಲೀಕ ಶಾನಭಾಗ ಅವರ ಅಂಗಡಿ ಹಾಗೂ ಈ ಅಂಗಡಿಯ ಪಕ್ಕದ ಬಸ್ ತಂಗುತಾಣಕ್ಕೆ ಹಾನಿಯಾಯಿತು.

ಬೆಳಿಗ್ಗೆ ೬ ಗಂಟೆಗೆ ಭಾರಿ ಗುಡುಗು-ಸಿಡಿಲಿನೊಂದಿಗೆ ರಭಸದಿಂದ ಸುರಿಯಲಾರಂಭಿಸಿದ ಮಳೆ ಬೆಳಿಗ್ಗೆ ೧೦ ಗಂಟೆ ವರೆಗೆ ಸುರಿಯಿತು. ಇದರ ಜೊತೆಯಲ್ಲೇ ಆಗಾಗ ರಭಸದಿಂದ ಗಾಳಿ ಬೀಸಿದ ಪರಿಣಾಮ ತಾಲೂಕಿನ ಹೊಲನಗದ್ದೆ, ಬಾಡ, ಕಾಗಾಲ, ಪಡವಣಿ, ಉಪ್ಪಿನಪಟ್ಟಣ, ಅಳಕೋಡ ಹಾಗೂ ಇನ್ನಿತರ ಭಾಗಗಳಲ್ಲಿ ತೆಂಗಿನಮರ, ಆಲದಮರದ ಕೊಂಬೆಗಳು ಮನೆ ಹಾಗು ಕಾಡುಜಾತಿಯ ಗಿಡ, ಮರಗಳು ಅಂಗಡಿ ಹಾಗೂ ವಾಸದ ಮನೆಗಳ ಮೇಲೆ ಬಿದ್ದು ಹಾನಿಪಡಿಸಿವೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಗುಡುಗು-ಸಿಡಿಲಿಗೆ ಸುಮಾರು ೧೦-೧೨ ವಿದ್ಯುತ್ ವಾಹಕಗಳಿಗೆ ಹಾನಿಯಾಗಿವೆ. ಅನೇಕ ಕಡೆ ಗಿಡ, ಮರಗಳು ಬಿದ್ದು ವಿದ್ಯುತ್ ಪೂರೈಸುವ ತಂತಿಗಳು ತುಂಡಾಗಿ ಬಿದ್ದಿವೆ. ಇದನ್ನು ಸರಿಪಡಿಸುವ ಕಾರ್ಯ ಈಗ ಸ್ಥಳೀಯ ಹೆಸ್ಕಾಂ ಸಿಬ್ಬಂದಿ ನಡೆಸಿದ್ದಾರೆ. ಇದರಿಂದಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಕೆಲವು ಗಂಟೆ ವಿದ್ಯುತ್ ಪೂರೈಕೆಯಲ್ಲಿ ಕಣ್ಣುಮುಚ್ಚಾಲೆ ನಡೆದರೆ, ಗ್ರಾಮೀಣ ಪ್ರದೇಶದ ಅನೇಕ ಕಡೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.

ಶನಿವಾರ ಕೇವಲ ನಾಲ್ಕು ತಾಸಿನಲ್ಲಿ ೧೨.೭೬ ಮೀ.ಮೀ. ಮಳೆ ಸುರಿದಿದೆ ಎಂದು ತಹಶೀಲ್ದಾರ ಕಚೇರಿಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸಿದೆ.
ಈ ನಾಲ್ಕು ತಾಸು ಗುಡುಗು, ಸಿಡಿಲು ಹಾಗೂ ಗಾಳಿ ಮಳೆಗೆ ಹೆಗಡೆ ಗ್ರಾಮದ ಶಿವಪೂರದ ಪಾರ್ವತಿ ಮಂಜುನಾಥ ಮುಕ್ರಿ ವಾಸವಿದ್ದ ಮನೆಯ ಗೋಡೆಯು ಕುಸಿದು ಭಾಗಶಃ ಹಾನಿಯಾಗಿದೆ. ಇದರಿಂದ ೨೦ ಸಾವಿರ ರೂ ಹಾನಿಯಾಗಿದೆ ಎಂದು ಸ್ಥಳೀಯ ಕಂದಾಯ ಅಧಿಕಾರಿಗಳು ಅಂದಾಜಿಸಿದ್ದಾರೆ.
ಬಾಡ ಗ್ರಾಮದ ನೀಲಾ ಬೀರಪ್ಪ ಪಟಗಾರ ಅವರ ಮನೆಯ ಮೇಲೆ ಮಾವಿನಮರವೊಂದು ಬಿದ್ದು ಸುಮಾರು ೪೦ ಸಾವಿರ ಹಾನಿಯಾಗಿದೆ. ಅಲಕೋಡದ ಉಪ್ಪಿನಪಟ್ಟಣದ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕ ಇರುವ ಬಸ್ ತಂಗುದಾಣ ಹಾಗೂ ಅದರ ಬದಿಗೆ ಇರುವ ಅನಂತ ಪುಂಡಲೀಕ್ ಶಾನಭಾಗ ಅವರ ಅಂಡಿಯ ಮೇಲೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ಅಂಗಂಡಿ ಹಾಗು ತಂಗುದಾಣಕ್ಕೆ ಹಾನಿಯಾಗಿದೆ. ಆಗಿರುವ ಹಾನಿಯ ಎಷ್ಟು ಎಂಬುದು ಇನ್ನೂ ವರದಿಯಾಗಿಲ್ಲ.

ಹೊಲನಗದ್ದೆಯ ಲಕ್ಷ್ಮೀ ಮಂಜು ಹರಿಕಾಂತ ಅವರ ಮನೆಯ ಮೇಲೆ ಮರಬಿದ್ದಿದೆ. ಸುಮಾರು ೨೦ ಸಾವಿರ ರೂ ಹಾನಿಯಾಗಿದೆ ಎಂದು ಗೊತ್ತಾಗಿದೆ.
ದಿನವಿಡೀ ಮಳೆ ಸುರಿಯವ ರೀತಿಯಲ್ಲಿ ಮೋಡ ಕವಿದುಕೊಂಡಿದೆ. ಈ ರೀತಿ ವಾತಾವರಣದಿಂದಾಗಿ ತಾಲೂಕಿನ ಜನರಿಗೆ ಶನಿವಾರ ಸೂರ್ಯನ ದರ್ಶನವಾಗಲಿಲ್ಲ.