ಕಾರವಾರ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಕೇಬಲ್ ಟಿವಿಗಳಲ್ಲಿ ರಾಜಕೀಯ ಪಕ್ಷಗಳು ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಜಾಹೀರಾತು ಪ್ರಕಟಿಸಿದ್ದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.
ಇದನ್ನೂ ಓದಿ: ಫೆ.19ರಂದು ಗೋಕರ್ಣದಲ್ಲಿ ಕಾಲಭೈರವ ಉತ್ಸವ
ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ವೀಡಿಯೋ ಸಂವಾದದ ಮೂಲಕ ನಡೆದ ಜಿಲ್ಲೆಯ ಸ್ಥಳೀಯ ಕೇಬಲ್ ಟಿವಿ ಆಪರೇಟರ್ ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಬಲ್ ಟಿವಿಗಳಲ್ಲಿ ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಪರವಾಗಿ ನಿರಂತರವಾಗಿ ಸುದ್ದಿ ಮತ್ತು ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು, ಸೂಕ್ತ ಅನುಮತಿ ಇಲ್ಲದೇ ಜಾಹೀರಾತು ಪ್ರಸಾರ ಮಾಡುವುದು, ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ವ್ಯಾಪ್ತಿಗೆ ಬರಲಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದ ಜಿಲ್ಲಾಧಿಕಾರಿಗಳು ಜಾಹೀರಾತುಗಳು ನೀತಿ ಸಂಹಿತೆಯ ವ್ಯಾಪ್ತಿಯಲ್ಲಿ ಇರಬೇಕು ಎಂದರು.
ಅಲ್ಲದೇ ಕೇಬಲ್ ವಾಹಿನಿಗಳಲ್ಲಿ ಯಾವುದೇ ಆಧಾರವಿಲ್ಲದೇ ವಿವಿಧ ಧರ್ಮ, ಜನಾಂಗ, ಭಾಷೆ ಅಥವಾ ಪ್ರಾದೇಶಿಕ ಗುಂಪುಗಳ ಅಥವಾ ಜಾತಿ ನಡುವೆ ವೈಷಮ್ಯದ ಅಥವಾ ವೈರತ್ವದ ಭಾವನೆಗಳಿದ್ದಲ್ಲಿ ಅವುಗಳನ್ನು ಪ್ರಸಾರ ಮಾಡಬಾರದು. ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾರ್ಯಕ್ರಮದ ಕಾಯಿದೆಗಳು ಮತ್ತು ನಿಯಮಗಳನ್ನು ಚಾಚು ತಪ್ಪದೇ ಪಾಲಿಸಬೇಕು ಎಂದರು.
ಪ್ರಿಂಟಿಂಗ್ ಪ್ರೆಸ್ಗಳಲ್ಲಿ ಚುನಾವಣೆ ಕುರಿತ ಕರಪತ್ರಗಳನ್ನು ಪ್ರಕಟಿಸುವಾಗ ಚುನಾವಣಾ ಆಯೋಗ ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು, ಕರಪತ್ರದಲ್ಲಿ ಮುದ್ರಕರು ಮತ್ತು ಪ್ರಕಾಶಕರ ಹೆಸರು, ವಿಳಾಸ ಹಾಗೂ ಮುದ್ರಿಸಿದ ಪ್ರತಿಗಳ ಸಂಖ್ಯೆಯನ್ನು ತಪ್ಪದೇ ನಮೂದಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಅತಿಥಿಗೃಹ ನಿರ್ಮಾಣ: ಬ್ರಹ್ಮಾನಂದ ಸರಸ್ವತಿ ಶ್ರೀ
ಮೊಬೈಲ್ ನೆಟ್ವರ್ಕ್ ಸೇವೆಗಳನ್ನು ಒದಗಿಸುವ ಕಂಪೆನಿಗಳು, ತಮ್ಮ ಸಂಸ್ಥೆಯ ಮೂಲಕ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಪರವಾದ ಗುಂಪು ಸಂದೇಶಗಳು, ವಾಯ್ಸ್ ಮೆಸೇಜ್ಗಳು, ಜಾಹೀರಾತುಗಳ ಕುರಿತಂತೆ ಹಾಗೂ ಸೋಷಿಯಲ್ ಮೀಡಿಯಾಗಳಾದ ವಾಟ್ಸಾಪ್, ಟ್ವಿಟರ್, ಇನ್ಸ್ಟಾಗ್ರಾಂ, ಫೇಸ್ಬುಕ್ ಗಳಲ್ಲಿ ಪ್ರಕಟವಾಗುವ ಸಂದೇಶಗಳು ಹಾಗೂ ಸಾರ್ವಜನಿಕರ ಮೇಲೆ ವ್ಯತಿರಕ್ತ ಪರಿಣಾಮ ಬೀರುವ ಸಂದೇಶಗಳ ಬಗ್ಗೆ ನಿರಂತರ ನಿಗಾವಹಿಸಿ, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಇದನ್ನೂ ಓದಿ: ಕಿತ್ರೆ ದೇವಿಮನೆಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಆಗಮನ – ಭೋಜನಾಲಯ, ಸಭಾಭವನ ಲೋಕಾರ್ಪಣೆ
ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆ ನಡೆಸಲು ಅಡ್ಡಿಯಾಗಬಹುದಾದ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಕುರಿತಂತೆ ಎಲ್ಲಾ ಇಲಾಖೆಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ಹಾಗೂ ಚುನಾವಣೆಯ ಯಶಸ್ಸಿಗೆ ಸಾರ್ವಜನಿಕರು ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಇದನ್ನೂ ಓದಿ: ಖಾಸಗಿ ಬಸ್ ಮುರುಡೇಶ್ವರಕ್ಕೆ ವಿಸ್ತರಣೆಗೆ ಆಟೋ ಚಾಲಕ-ಮಾಲಕರ ವಿರೋಧ
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಡಾ. ಆನಂದಸಾ, ಜಿಲ್ಲಾ ವಾರ್ತಾಧಿಕಾರಿ ಬಿ.ಶಿವಕುಮಾರ್, ಜಿಲ್ಲೆಯ ವಿವಿಧ ಕೇಬಲ್ ಟಿವಿ ಆಪರೇಟರ್ಗಳು ಹಾಗೂ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ಚಿತ್ರಾಪುರ ಮಠಕ್ಕೆ ಬಂದಿದ್ದ ಯಶ್-ರಾಧಿಕಾ ದಂಪತಿ