ಭಟ್ಕಳ: ಸಾಗರದಿಂದ ಬೈಂದೂರು ಮಾರ್ಗವಾಗಿ ಭಟ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್ಸನ್ನು ಮುರ್ಡೇಶ್ವರಕ್ಕೆ ವಿಸ್ತರಣೆ ಮಾಡಿ ಪರವಾನಿಗೆ ನೀಡಿರುವುದನ್ನು ಸ್ಥಗಿತಗೊಳಿಸುವಂತೆ ಮಾವಳ್ಳಿ ಮುರುಡೇಶ್ವರದ ಮ್ಯಾಕ್ಸಿಕ್ಯಾಬ್ ಮಾಲಕರು ಮತ್ತು ಚಾಲಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ ಹಾಗೂ ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಬೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

ವಿಡಿಯೋ ನೋಡಿ:  https://fb.watch/qgE0OlikeR/?mibextid=Nif5oz

ಭಟ್ಕಳ ತಾಲ್ಲೂಕಿನಲ್ಲಿ ಬರುವ ಮುರ್ಡೇಶ್ವರ ಒಂದು ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ಪ್ರವಾಸಿಗರನ್ನೇ ನಂಬಿಕೊಂಡು ಸಾವಿರಾರು ನಿರುದ್ಯೋಗ ವಿದ್ಯಾವಂತ ಮ್ಯಾಕ್ಸಿಕ್ಯಾಬ್ ಚಾಲಕರು ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಪಡೆದುಕೊಂಡು ಹೆಚ್ಚಿನ ಬಡ್ಡಿಯನ್ನು ಬರಿಸುವುದರೊಂದಿಗೆ ವೃತ್ತಿಪರ ಜೀವನವನ್ನು ವಾಹನ ಉದ್ಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಕುಟುಂಬದ ಜೀವನವನ್ನು ನಿರ್ವಹಿಸುತ್ತಿದ್ದಾರೆ. ಅದೆ ರೀತಿ 300ಕ್ಕೂ ಹೆಚ್ಚಿನ ನಿರುದ್ಯೋಗಿ ವಿದ್ಯಾವಂತರು ತಮ್ಮ ಜೀವನಾಧಾರಾಕ್ಕಾಗಿ ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರನ್ನೇ ನಂಬಿಕೊಂಡು ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡು ಆಟೋ ರಿಕ್ಷಾ ತೆಗೆದುಕೊಂಡು ಬಾಡಿಗೆ ಹೊಡೆಯುತ್ತಿದ್ದಾರೆ. ಅದರಿಂದ ಬಂದ ಆದಾಯಲ್ಲಿ ಬ್ಯಾಂಕ್ ನಲ್ಲಿ ಮಾಡಿದ ಸಾಲಕ್ಕೆ ಬಡ್ಡಿ ತುಂಬಿಕೊಳ್ಳುತ್ತಾ ಇನ್ನುಳಿದ ಅಲ್ಪಸ್ವಲ್ಪ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಕುಟುಂಬದ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಕೋವಿಡ್ ಲಾಕ್ ಡೌನ್‌ನಿಂದ ಆದ ತೊಂದರೆ ಸರಿದೂಗುವುದಷ್ಟರಲ್ಲಿ ಕಳೆದ ಏಳೆಂಟು ತಿಂಗಳಿನಿಂದ ಸರ್ಕಾರದ ಬಸ್ ಪ್ರೀ ಯೋಜನೆಯಿಂದ ರಿಕ್ಷಾ ಚಾಲಕರಿಗೆ ಆದಾಯ ಇಲ್ಲದೆ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಈಗ ಚಾಲಕರಿಗೆ ಮತ್ತೊಂದು ಗಂಡಾಂತರ ಎದುರಾಗಿದೆ. ಇಲ್ಲಿಯ ಚಾಲಕರ ಸಮಸ್ಯೆ ಬಗ್ಗೆ ಅಹವಾಲು ಸ್ವೀಕರಿಸದೆ ಏಕಪಕ್ಷೀಯವಾಗಿ ಸಾರ್ವಜನಿಕರ ಮತ್ತು ಪ್ರಯಾಣಿಕರ ಹಿತರಕ್ಷಣೆ ಕಾರಣವೊಡ್ಡಿ ಖಾಸಗಿ ಬಸ್ ಮಾಲಕರ ಒತ್ತಡಕ್ಕೆ ಮಣಿದು ಭಟ್ಕಳದವರೆಗೆ ಮಾತ್ರ ಸೀಮಿತವಾಗಿದ್ದ ಖಾಸಗಿ ಬಸ್ ಈಗ ಮುರ್ಡೇಶ್ವರದವರೆಗೆ ವಿಸ್ತರಣೆ ಮಾಡಿ ಆದೇಶ ಮಾಡಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಚಿತ್ರಾಪುರ ಮಠಕ್ಕೆ ಬಂದಿದ್ದ ಯಶ್-ರಾಧಿಕಾ ದಂಪತಿ

ಮುರ್ಡೇಶ್ವರದಲ್ಲಿ ಸ್ಥಳೀಯ ವಾಹನಗಳನ್ನೇ ನಿಲ್ಲಿಸಲು ಸ್ಥಳದ ಅಭಾವವಿದ್ದು, ಈಗ ಹೊಸದಾಗಿ ಖಾಸಗಿ ವಾಹನಗಳು ಮುರ್ಡೇಶ್ವರಕ್ಕೆ ಬರುವುದರಿಂದ ಮತ್ತಷ್ಟೂ ಟ್ರಾಪಿಕ್ ಸಮಸ್ಯೆ ಉಲ್ಬಣವಾಗುತ್ತಿದೆ. ಅಲ್ಲದೆ ಮುರ್ಡೇಶ್ವರಕ್ಕೆ ಬರುವ ಮತ್ತು ಹೋಗುವ ಯಾವುದೇ ಪ್ರಯಾಣಿಕರಿಗೆ ಪ್ರಯಾಣದ ತೊಂದರೆ ಆಗಿಲ್ಲಾ, ಆಗುವುದೂ ಇಲ್ಲ. ಕಾರಣ ಮುರ್ಡೇಶ್ವರಕ್ಕೆ 5 ನಿಮಿಷಕ್ಕೆ ಒಂದರಂತೆ KSRTC ಬಸ್ ಬಂದು ಹೋಗುತ್ತಿದೆ. ಈ ಆದೇಶ ಕೆಲವು ಖಾಸಗಿ ಬಸ್ ಮಾಲೀಕರ ಒತ್ತಡಕ್ಕೆ ಮಣಿದು ಮಾಡಿದ ಆದೇಶವಾಗಿದ್ದು, ಇದರಿಂದ ಸ್ಥಳೀಯ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಮಧ್ಯೆ ಪ್ರವೇಶಿಸಿ ಖಾಸಗಿ ಬಸ್ ಮಾಲಕರ ಉದ್ಧಾರಕ್ಕಾಗಿ ಬಡ ಚಾಲಕರ ಹಸಿದ ಹೊಟ್ಟೆಯ ಮೇಲೆ ಹೊಡೆಯುವ ಈ ಆದೇಶವನ್ನು ತಡೆ ಹಿಡಿದು ಬಡ ಚಾಲಕರನ್ನು ರಕ್ಷಣೆ ಮಾಡಬೇಕಾಗಿದೆ. ಒಂದು ವೇಳೆ ಬಡ ಚಾಲಕರ ರಕ್ಷಣೆಗೆ ಧಾವಿಸದೆ ಬಸ್ ಮಾಲೀಕರ ಒತ್ತಡಕ್ಕೆ ಮಣಿದು ಈ ಆದೇಶ ಮುಂದುವರಿಸಿದರೆ ನಮ್ಮ ಹಕ್ಕಿಗಾಗಿ ಉಗ್ರ ಹೋರಾಟ ಮಾಡುವುದು ನಮಗೆ ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ಕಳ್ಳತನ ಆರೋಪಿಗಳ‌ ಬಂಧನ