ಕುಮಟಾ: ತಾಲೂಕಿನ ಗೋರೆ ಗುಡ್ಡದ ಮೇಲಿರುವ ಪುರಾತನವಾದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ದೇವಸ್ಥಾನದ ಪ್ರಧಾನ ಬಾಗಿಲಿಗೆ ಹಾಕಿದ ಕೀಲಿಕೈಯನ್ನು ಮುರಿಯದೆ ಕಳ್ಳರು ಹಂಚಿನ ಛಾವಣಿಯ ಏರಿ ಗುಡಿಯೊಳಗೆ ಇಳಿದಿದ್ದಾರೆ. ಒಳಗಿದ್ದ ಕಪಾಟಿನ ಒಂದು ಬಾಗಿಲನ್ನು ಮುರಿದು ಬದಿಗಿಟ್ಟು ಹಣ ಹಾಗೂ ಬಂಗಾರದ ಆಭರಣಕ್ಕಾಗಿ ತಡಕಾಡಿದ್ದಾರೆ. ದೇವರ ಮೂರ್ತಿ ಇರುವ ಗರ್ಭಗುಡಿ ಪ್ರವೇಶಿಸಿಯೂ ತಡಕಾಡಿದ್ದಾರೆ. ಕಳ್ಳರು ದೇವಾಲಯದ ಕಾಣಿಕೆ ಡಬ್ಬಿ ಒಡೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಗರ್ಭಗುಡಿಯಲ್ಲಿದ್ದ ಸೆಲ್ಫಿನ ಮೇಲೆ ಮಡಿ ಬಟ್ಟೆಯಡಿಗೆ ಇಟ್ಟಿದ್ದ ದೇವರ ಆಭರಣ ಕದ್ದೊಯ್ದಿದ್ದಾರೆ. ಸುಮಾರು ಒಂದುವರೆ ಲಕ್ಷ ರೂ ಮೌಲ್ಯದ್ದಾಗಬಹುದಾದ ಒಂದು ಬಂಗಾರದ ಚೈನು ಹಾಗೂ ದೇವರ ಹಣೆಗೆ ಹಚ್ಚುವ ತಿಲಕವನ್ನು ಕದ್ದೊಯ್ದಿದ್ದಾರೆ. ಗರ್ಭಗುಡಿಯಲ್ಲಿದ್ದ ದೇವರಿಗೆ ತೊಡಿಸುವ ಬೆಳ್ಳಿ ಕೀರಿಟ ಬಿಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಅಂಬುಲೆನ್ಸ್ ಪಲ್ಟಿ

ಬೈಕ್ ಯಾರದ್ದು?
ಈ ಕೃತ್ಯ ನಡೆಸುವ ಸಂದರ್ಭದಲ್ಲಿ ಕಳ್ಳರು ದೇವಾಲಯದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನು ಕಿತ್ತಿಟಿದ್ದಾರೆ. ಈ ಕಳ್ಳತನದ ಮಧ್ಯೆ ದೇವಸ್ಥಾನದ ಆವರಣದಲ್ಲಿ ಹಿರೋ ಕಂಪನಿಯ ಬೈಕೊಂದು ನಿಂತುಕೊಂಡಿತ್ತು. ಈ ಬೈಕ್ ಸ್ಥಳೀಯರದ್ದಲ್ಲವೆಂದು ಗೊತ್ತಾಗಿದೆ. ಈ ಬೈಕ್ ಯಾರದ್ದು? ಯಾರು ಇದನ್ನು ಗೋರೆ ಗುಡ್ಡದ ಮೇಲೆ ಬಿಟ್ಟು ಹೋಗಿದ್ದಾರೆ? ಕಳ್ಳರೇನಾದರೂ ಬೈಕ್‌ನಲ್ಲಿ ಇಲ್ಲಿಗೆ ಬಂದಿದ್ದರೆ? ಎಂಬುದು ಈಗ ಪ್ರಶ್ನೆಯಾಗಿದೆ.

ದೇವಸ್ಥಾನದ ಅರ್ಚಕ ಶ್ರೀಧರ ಭಟ್ಟ ಶನಿವಾರ ಬೆಳಿಗ್ಗೆ ಪೂಜೆ ಮಾಡಲು ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕಪಾಟು ಹಾಗೂ ಕಾಣಿಕೆ ಡಬ್ಬಿ ಒಡೆಯಲು ದೇವಸ್ಥಾನದಲ್ಲಿ ಕಾಯಿ ಒಡೆಯುವ ಸಲುವಾಗಿ ಇಟ್ಟುಕೊಂಡಿದ್ದ ಎರಡು ಕತ್ತಿಯನ್ನು ಬಳಸಿರಬಹುದು. ಅದರಲ್ಲಿ ಒಂದು ಕತ್ತಿ ಈಗ ಕಾಣುತ್ತಿಲ್ಲ. ಕಳ್ಳರು ಪರಾರಿಯಾಗುವಾಗ ಈ ಕತ್ತಿಯನ್ನ ತೆಗೆದುಕೊಂಡು ಹೋಗಿರಬೇಕು ಎಂದು ಅರ್ಚಕ ಶ್ರೀಧರ ಭಟ್ಟ ಅನುಮಾನ ಪಟ್ಟಿದ್ದಾರೆ. ಈ ಕುರಿತು ಕುಮಟಾ ಪೋಲಿಸ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಲಿಸರು ಹಾಗು ಬೆರಳಚ್ಚು ತಜ್ಞರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.