ಹೊನ್ನಾವರ: ತಾಲೂಕಿನ ಮಂಕಿ ಗುಳದಕೇರಿಯ ಭವಾನಿ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಕಾಮಾಕ್ಷಿ ಜ್ಯುವೆಲ್ಲರ್ಸ್ ಚಿನ್ನದ ಅಂಗಡಿ ಶಟರ್ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಏಳು ಆರೋಪಿಗಳಲ್ಲಿ ನಾಲ್ವರು ಭಟ್ಕಳ ಮತ್ತು ಇಬ್ಬರು ಕಾರವಾರ ಮೂಲದವರು ಎಂದು ತಿಳಿದುಬಂದಿದೆ. ಪಶ್ಚಿಮ ಬಂಗಾಳದ ಜರೂರ್, ಭಟ್ಕಳ ಮುಗ್ದುಮ್ ಕಾಲೋನಿ ಜಾಫರ್ ಸಾಧಿಕ್, ಶೇಖ್, ಮೊಹಮ್ಮದ್ ಖಾಜಿರ್, ಕಾರವಾರದ ಕೋಣೆವಾಡದ ಹಜರತ್ ಅಲಿ ಸಾಬ್, ಇಬ್ರಾಹಿಂ, ಭಟ್ಕಳ ಸಕೀನಾ ಕಾಂಪ್ಲೆಕ್ಸ್ ಸಮೀಪದ ಜವೂರ್ ರಫೀಕ್ ಸೇರಿ ಒಟ್ಟು ೭ ಮಂದಿಯನ್ನು ಬಂಧಿಸಿದ್ದಾರೆ
ಏ.೨೯ರ ತಡರಾತ್ರಿ ಮಂಕಿ ಮಾವಿನಕಟ್ಟಾದ ಅಣ್ಣಪ್ಪ ಪ್ರಭಾಕರ ಶೇಟ ಎಂಬುವವರಿಗೆ ಸೇರಿದ ಚಿನ್ನದ ಅಂಗಡಿ ಕಳ್ಳತನವಾಗಿತ್ತು. ಬಲವಾದ ವಸ್ತುವಿನಿಂದ ಗೇಟ್ ಮತ್ತು ಶಟರ್ ಎತ್ತಿ ಅಂಗಡಿ ಒಳನುಗ್ಗಿ ಕಳ್ಳರು ಕಳ್ಳತನ ನಡೆಸಿದ್ದರು. ೨೯೬ ಗ್ರಾಂ ತೂಕದ ಅಂದಾಜು ೧೪ ಲಕ್ಷ ೫೫ ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ೨೨.೫೦ ಕೆ.ಜಿ. ತೂಕದ ೧೧ ಲಕ್ಷ ೧೦ ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣ, ವಸ್ತುಗಳನ್ನು ಕದ್ದೊಯ್ದಿದ್ದರು. ಈ ಕುರಿತು ಅಣ್ಣಪ್ಪ ಪ್ರಭಾಕರ ಶೇಟ ಅವರು ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ : ಸಮುದ್ರದಲ್ಲಿ ಬೋಟುಗಳ ನಡುವೆ ಡಿಕ್ಕಿ; ಮುಂದೇನಾಯ್ತು?
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಈ ಪ್ರಕರಣದ ತನಿಖೆಯನ್ನು ಭಟ್ಕಳ ಗ್ರಾಮಾಂತರ ಸಿ.ಪಿ.ಐ. ಆನಂದ ಒನಕುದ್ರೆ ವಹಿಸಿಕೊಂಡಿದ್ದರು. ಪಿ.ಎಸ್.ಐ ವಿನೋದ ಕೆ.ಎಸ್ ಹಾಗೂ ಶ್ರೀಕಾಂತ್ ರಾಠೋಡ್ ರವರ ನೇತೃತ್ವದಲ್ಲಿ ಮಂಕಿ ಠಾಣೆಯ ಅಪರಾಧ ವಿಭಾಗದ ಹಾಗೂ ಇತರೆ ಸಿಬ್ಬಂದಿ ಒಳಗೊಂಡು ತಂಡ ರಚಿಸಿ ತನಿಖೆ ಮುಂದುವರೆಸಿದ್ದರು.ಆ ವೇಳೆ ಖಚಿತ ಮಾಹಿತಿ ಆಧರಿಸಿ ೭ ಜನ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಿಸಿದ್ದರು. ಈ ಆರೋಪಿತರು ಮಂಕಿಯ ಕಾಮಾಕ್ಷಿ ಜ್ಯೂವೆಲ್ಲರಿ ಅಂಗಡಿಯಲ್ಲದೆ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದರು. ಬಂಗಾರ, ಬೆಳ್ಳಿಯ ಆಭರಣಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಮಂಕಿ ಪೊಲೀಸ್ ಠಾಣೆಯ ೨ ಪ್ರಕರಣ. ಬೈಂದೂರು ಪೊಲೀಸ್ ಠಾಣೆಯ ೧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ವೇಳೆ ಪತ್ತೆಯಾಗಿದೆ. ಈ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿತರಿಂದ ೨೩೦ ಗ್ರಾಂ ತೂಕದ ಗಟ್ಟಿ ಬಂಗಾರ ಹಾಗೂ ಬಂಗಾರದ ಆಭರಣಗಳು, ೫ ಕೆ.ಜಿ. ಬೆಳ್ಳಿಯ ಆಭರಣ, ಕೃತ್ಯಕ್ಕೆ ಬಳಸಿದ ಒಂದು ಸ್ಕೂಟರ್, ಆಯುಧಗಳನ್ನು / ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ ರೂಪಾಯಿ ೧೩,೩೦,೦೫೦ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : ಚಿನ್ನದ ಅಂಗಡಿ ಶಟರ್ ಮುರಿದು ಚಿನ್ನಾಭರಣ ಕಳವು
ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ, ಭಟ್ಕಳ ಪೊಲೀಸ್ ಉಪಾಧೀಕ್ಷಕ ಮಹೇಶ ಕೆ. ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮಾಂತರ ಸಿಪಿಐ ಆನಂದ ಒನಕುದ್ರೆ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದರು. ಮಂಕಿ ಪೊಲೀಸ್ ಠಾಣೆಯ ಉಪ-ನಿರೀಕ್ಷಕರಾದ ವಿನೋದಕುಮಾರ ಎಸ್. ಕೆ ಹಾಗೂ ಶ್ರೀಕಾಂತ ರಾಠೋಡ ಮತ್ತು ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಕಿರಣಕುಮಾರ ರೆಡ್ಡಿ, ರುದ್ರಯ್ಯ ಕಾಡದೇವರ, ಸುಬ್ರಹ್ಮಣ್ಯ ನಾಯ್ಕ, ರಾಜು ಗೌಡ, ಅಣ್ಣಪ್ಪ ಕೋರಿ, ಸಚೇತ ಆಚಾರಿ, ಜಾನು ಪಟಗಾರ, ವಿವೇಕ ನಾಯ್ಕ, ಚರಣರಾಜ ನಾಯ್ಕ, ಗಣೇಶ ಲಮಾಣಿ ಹಾಗೂ ಭಟ್ಕಳ ನಗರ ಠಾಣೆಯ ಸಿಬ್ಬಂದಿ ಲೋಕೇಶ ಕತ್ತಿ, ದಿನೇಶ ನಾಯಕ, ಈರಣ್ಣ ಪೂಜಾರಿ, ನಿಂಗನಗೌಡ ಪಾಟೀಲ, ನಾಗರಾಜ ಒಂಟಿಗೋಡಿ, ಜೀಪ್ ಚಾಲಕ ಗಣಪತಿ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿತರನ್ನು ದಸ್ತಗಿರಿ ಮಾಡಿ ೩ ಪ್ರಕರಣಗಳನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.