ಭಟ್ಕಳ : ತಾಲೂಕಿನ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಮ್ಮನಕೆರೆಯ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ೩೬ ಅರ್ಜಿ ಸ್ವೀಕೃತಗೊಂಡಿವೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ, ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮನ್ನು ಆರಿಸಿ ಕಳುಹಿಸಿದ್ದಾರೆ. ಜನರ ಸಂಕಷ್ಟಗಳಿಗೆ ನಾವು ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದೆ. ಸರಕಾರದ ಜನಸ್ಪಂದನ ಕಾರ್ಯಕ್ರಮವು ಬಡವರಿಗೆ ಸಹಾಯವಾಗಲಿದೆ. ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವು ಕನಿಷ್ಟ ಮೂರು ತಿಂಗಳಿಗೊಮ್ಮೆಯಾದರೂ ನಡೆಸಬೇಕಾಗಿದೆ ಎಂದರು.

ಇದನ್ನೂ ಓದಿ : ನ್ಯಾಯಬೆಲೆ ಅಂಗಡಿಯಲ್ಲಿ ಯುವಕನಿಗೆ ಕಡಿದ ನಾಗರ ಹಾವು

ನಮ್ಮನ್ನು ಆಯ್ಕೆ ಮಾಡಿ ಒಂದು ವರ್ಷ ಮುಗಿದಿದೆ. ಈ ಅವಧಿಯಲ್ಲಿ ನಿಮಗೆ ಸಹಾಯ ಮಾಡುವಷ್ಟು ಮಾಡಿದ್ದೇನೆ. ತಾಲೂಕು ಮಟ್ಟದ ಅಧಿಕಾರಿಗಳು ಇಂದು ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದು ಜನತೆಗೆ ಸಹಾಯ ಸಹಕಾರ ಮಾಡಿದ್ದಾರೆ. ಯಾವುದೇ ಸಮಸ್ಯೆ ಇದ್ದರೆ ಅದನ್ನು ಚರ್ಚೆ ಮಾಡಿ ಪರಿಹರಿಸಿಕೊಳ್ಳಿ ಎಂದು ಮಂಕಾಳ ವೈದ್ಯ ಕರೆ ನೀಡಿದರು.

ಇದನ್ನೂ ಓದಿ : ಗೊರಟೆ ಪ್ರೌಢಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ

ತಾಲೂಕು ಮಟ್ಟದಲ್ಲಿ ಪರಿಹಾರವಾಗದ ಸಮಸ್ಯೆ ಇದ್ದಲ್ಲಿ ಜಿಲ್ಲಾ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ರಾಜ್ಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಪರಿಹಾರ ದೊರಕಿಸಿಕೊಡುವ ಕಾರ್ಯ ಮಾಡಲಾಗುವುದು. ಅಧಿಕಾರಿಗಳು ಕೂಡ ಎಲ್ಲರೂ ಒಟ್ಟಾಗಿ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ಕಾರ್ಯ ಮಾಡಬೇಕು ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

ನಂತರ ತಾಲೂಕಿನ ಜನತೆಗೆ ಮಂಜೂರಿಯಾದ ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸೌಲಭ್ಯಗಳ ಮಂಜೂರಿ ಪತ್ರವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಜನರಿಂದ ಅಹವಾಲು ಸ್ವೀಕರಿಸಿದ ಸಚಿವರು ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿಕೊಟ್ಟರು. ರಸ್ತೆ, ಸೇತುವೆ, ಅಂಗನವಾಡಿ, ಸರ್ವೆ ಇಲಾಖೆ, ಕಂದಾಯ, ಕೃಷಿ ಇಲಾಖೆ, ಹೆಸ್ಕಾಂ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ವಿಷಯ ಚರ್ಚೆಗೆ ಬಂತು. ಒಟ್ಟೂ ೩೬ ಅರ್ಜಿಗಳು ಸ್ವೀಕೃತಗೊಂಡಿವೆ.  ಅವುಗಳಲ್ಲಿ ಬಹುತೇಕ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಿದ್ದು ಉಳಿದವುಗಳನ್ನು ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ ಎನ್., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿ.ಡಿ. ಮೊಗೇರ, ತಹಸೀಲ್ದಾರ ನಾಗರಾಜ ನಾಯ್ಕಡ, ಬೆಳಕೆ ಗ್ರಾಮ ಪಂಚಾಯತ ಆಧ್ಯಕ್ಷ ಜಗದೀಶ ನಾಯ್ಕ, ಪಾಂಡುರಂಗ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.