ಯಲ್ಲಾಪುರ: ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಹಾಸಣಗಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಇಂದು(ಫೆ.೨೭) ಜೇನು ಕೃಷಿ ತರಬೇತಿ ಹಾಗೂ ನರೇಗಾ ಮಾಹಿತಿ ವಿನಿಮಯ ಕಾರ್ಯಗಾರ ಏರ್ಪಡಿಸಲಾಗಿತ್ತು.
ಇದನ್ನೂ ಓದಿ : ದಶಮಾನೋತ್ಸವ ಸಂಭ್ರಮದಲ್ಲಿ ಶ್ರೀಗುರು ಕಲಾ ಸಂಘ
ತಾಲೂಕು ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ(ಸಂಜೀವಿನಿ) ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಐಇಸಿ ಚಟುವಟಿಕೆಗಳಡಿ ರಾಜರಾಜೇಶ್ವರಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರಿಗಾಗಿ ಈ ಕಾರ್ಯಾಗಾರ ನಡೆಸಿ ಅರಿವು ಮಂಡಿಸಲಾಯಿತು.
ಇದನ್ನೂ ಓದಿ : ರಾಜಾಂಗಣ ನಾಗಬನ ದೇವರ ಪ್ರಥಮ ವರ್ಧಂತಿ ೨೯ರಂದು
ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ, ಮನರೇಗಾ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸರಕಾರಿ ಜಾಗೆಯಲ್ಲಿ ಮಹಿಳೆಯರು ಸೇರಿಕೊಂಡು ಸಮುದಾಯ ನರ್ಸರಿಗಳ ನಿರ್ಮಾಣ, ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಎನ್ಆರ್ಎಲ್ಎಂ ವರ್ಕ್ ಶೆಡ್ ನಿರ್ಮಿಸಿ ಕೊಡಲಾಗುತ್ತಿದೆ. ಅಲ್ಲದೇ ಎಸ್ಬಿಎಂ ಯೋಜನೆಯಡಿ ಕಾರ್ಯನಿರ್ವಹಿಸುವ ಕಸ ವಿಲೇವಾರಿ ಘಟಕಗಳಲ್ಲಿ ಕಸ ಸಂಗ್ರಹಣೆ, ವಿಂಗಡಣೆ, ವಿಲೇವಾರಿ ಕೆಲಸ ಹಾಗೂ ಕಸ ಸಂಗ್ರಹಣೆಯ ವಾಹನ ಚಾಲನಾ ತರಬೇತಿಯನ್ನು ಮಹಿಳೆಯರಿಗೆ ಕೊಡಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನವಾಗುತ್ತಿದೆ. ಈ ಎಲ್ಲ ಅವಕಾಶಗಳನ್ನು ಮಹಿಳೆಯರು ಪಡೆಯಬೇಕು ಎಂದರು.
ಇದನ್ನೂ ಓದಿ : ಶ್ರೀ ಕ್ಷೇತ್ರ ಮುರ್ಡೇಶ್ವರದಲ್ಲಿ ಮಹಾ ಶಿವರಾತ್ರಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ
ಗ್ರಾಮೀಣ ಪ್ರದೇಶದ ಜನರು ಗುಳೆ ಹೋಗುವುದನ್ನು ತಪ್ಪಿಸಿ ದುಡಿಯುವ ಕೈಗಳಿಗೆ ಕೆಲಸ ದೊರಕಿಸಿಕೊಡಲಾಗುತ್ತಿದೆ. ಪ್ರತಿಯೊಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ೧00 ದಿನ ಕೂಲಿ ಕೆಲಸದ ಜೊತೆಗೆ ಸಮಾನ ಕೆಲಸಕ್ಕೆ ಸಮಾನ ವೇತನವಾಗಿ ೩೧೬ ರೂ. ನೀಡಲಾಗುತ್ತಿದೆ. ಹಾಗೇ
೬೦ ವರ್ಷ ಮೇಲ್ಪಟ್ಟವರಿಗೆ, ಗರ್ಭಿಣಿ ಮತ್ತು ಬಾಣಂತಿಯರು, ವಿಶೇಷ ಚೇತನರು, ಲಿಂಗತ್ವ ಅಲ್ಪಸಂಖ್ಯಾತರಿಗೂ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಗ್ರಾಮ ಪಂಚಾಯತಿಗೆ ಭೇಟಿನೀಡಿ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಇದನ್ನೂ ಓದಿ : ಮಂದಾರ್ತಿ ಹಬ್ಬದಲ್ಲಿ ದೇಣಿಗೆ ಸಂಗ್ರಹ ಅಭಿಯಾನ
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಪ್ರಗತಿಪರ ಜೇನು ಕೃಷಿಕರಾದ ಹರಿಹರ ಹೆಗಡೆ ಹಾಗೂ ಪರಮೇಶ್ವರ ಗಾಂವಕರ ಅವರು, ಜೇನು ಕೃಷಿ ಹೇಗೆ ಮಾಡಬೇಕು, ಜೇನು ಹುಳುಗಳ ವಿಶೇಷತೆ, ಜೇನು ಕೃಷಿಯಿಂದಾಗುವ ಲಾಭ, ಜೇನು ಹುಳುಗಳ ಆರೈಕೆ ಕುರಿತು ತರಬೇತಿ ನೀಡಿದರು. ಬಳಿಕ ಸ್ವಸಹಾಯ ಸಂಘಗಳ ಮಹಿಳೆಯರನ್ನು ಹಿತ್ಲಳ್ಳಿ ಗ್ರಾಮದ ಪ್ರಗತಿಪರ ಜೇನು ಕೃಷಿಕ ಹರಿಹರ ಹೆಗಡೆಯವರ ಮನೆಯ ಬಳಿಯ ಜೇನು ಗೂಡು ಸಾಕಾಣಿಕೆ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಾಯೋಗಿಕವಾಗಿ ಜೇನು ಕೃಷಿ ಬಗ್ಗೆ ವಿವರಿಸಲಾಯಿತು.
ಇದನ್ನೂ ಓದಿ : ನಾಮಧಾರಿ ಪ್ರೀಮಿಯರ್ ಲೀಗ್ ನಲ್ಲಿ ಬೆಳಕೆ ಫ್ರೆಂಡ್ಸ್ ಚಾಂಪಿಯನ್
ತರಬೇತಿ ಹಾಗೂ ನರೇಗಾ ಮಾಹಿತಿ ವಿನಿಮಯ ಕಾರ್ಯಗಾರವನ್ನು ಹಾಸಣಗಿ ಗ್ರಾಮ ಪಂಚಾಯತ್ನ ಉಪಾಧ್ಯಕ್ಷ ಪುರಂದರ ನಾಯ್ಕ ಉದ್ಘಾಟಿಸಿದರು. ರಾಜರಾಜೇಶ್ವರಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಅಧ್ಯಕ್ಷೆ ಸುಜಾತಾ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು.
ಈ ವಿಡಿಯೋ ನೋಡಿ : ಸರ್ಕಾರಿ ಶಾಲೆಯಲ್ಲಿ ಇಕೋ ಪಾರ್ಕ್ https://fb.watch/qtsRZaj1k1/?mibextid=Nif5oz
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಸಂಧ್ಯಾ ಮರಾಠಿ, ತಾಲ್ಲೂಕು ಪಂಚಾಯತ್ನ ಎನ್ಆರ್ಎಲ್ಎಂ ಶಾಖೆಯ ವಲಯ ಸಂಯೋಜಕ ರವಿಶಂಕರ ಕೆ.ಎಂ., ವಲಯ ಮೇಲ್ವಿಚಾರಕ ಕರುಣಾಕರ ನಾಯ್ಕ, ಗ್ರಾಮ ಪಂಚಾಯತಿ ಅಧಿಕಾರಿಗಳು, ಸಿಬ್ಬಂದಿ, ರಾಜರಾಜೇಶ್ವರಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ವಿಡಿಯೋ ನೋಡಿ : ಶ್ರೀ ಕ್ಷೇತ್ರ ಹೇಗಲತ್ತಿ ಜಾತ್ರೆ https://fb.watch/qtsHrIgfZ6/?mibextid=Nif5oz