ಕಾರವಾರ : ಹೊರ ರಾಜ್ಯದ ಪರವಾನಿಗೆ ದರ ಏರಿಕೆಯಿಂದ ಉತ್ತರ ಕನ್ನಡ ಜಿಲ್ಲೆಯ ಟ್ಯಾಕ್ಸಿ ಮಾಲಕರು ಮತ್ತು ಚಾಲಕರು ಕಂಗಾಲಾಗಿದ್ದಾರೆ. ಇನ್ನೂ ಐದು ವರ್ಷಗಳ ಕಾಲ ಟ್ಯಾಕ್ಸಿ ಪರ್ಮಿಟ್ ವಿಸ್ತರಿಸಿಕೊಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಸೇರಿದ ಶಿವರಾಮ ಹೆಬ್ಬಾರ ಪುತ್ರ ವಿವೇಕ

ಈ ಕುರಿತು ಶ್ರೀ ಸಾಯಿಬಾಬಾ ಟ್ಯಾಕ್ಸಿ ಮಾಲಕರ ಮತ್ತು ಚಾಲಕರ ಸಂಘದಿಂದ ಮನವಿ ಸಲ್ಲಿಸಲಾಗಿದೆ. ಗೋವಾ ಪ್ರವೇಶಕ್ಕೆ ಪ್ರತಿ ಬಾಡಿಗೆಗೆ ೧೫೦೦ ರೂ. ಕಟ್ಟಬೇಕಾದ ಪರಿಸ್ಥಿತಿ ಇದೆ. ೯ ವರ್ಷವಾದ ಟ್ಯಾಕ್ಸಿ ವಾಹನಗಳು ಕಡ್ಡಾಯವಾಗಿ ೧೫೦೦ ರೂ. ನೀಡಿದ ಪರವಾನಿಗೆ ಪಡೆಯಬೇಕು. ಈ ಹಿಂದೆ ತಾತ್ಕಾಲಿಕ ಪರವಾನಿಗೆ ದರ ೨೫೦ ರೂ. ಇತ್ತು. ಆದ್ದರಿಂದ ಕಾರವಾರ-ಅಂಕೋಲಾ ಕ್ಯಾಬ್ ಟ್ಯಾಕ್ಸಿಗಳಿಗೆ ನೆರೆಯ ಗೋವಾ ರಾಜ್ಯ ಪ್ರವೇಶಿಸಲು ಈ ಮೊದಲಿನಂತೆ ಪರವಾನಿಗೆ ಶುಲ್ಕ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕಾರವಾರ-ಅಂಕೋಲಾದಲ್ಲಿ ಸರಿ ಸುಮಾರು ೮೦ ರಿಂದ ೯೦ ಕ್ಯಾಬ್ ಟ್ಯಾಕ್ಸಿಗಳು ಉದ್ಯೋಗ ನಡೆಸುತ್ತಿವೆ. ಈ ಟ್ಯಾಕ್ಸಿಗಳು “ಆಲ್ ಇಂಡಿಯಾ” ರಹದಾರಿ ಪರವಾನಿಗೆ ಪಡೆದಿವೆ. ಅವುಗಳಿಗೆ ‘೯’ ವರ್ಷ ಅವಧಿ ಮುಗಿದಿರುತ್ತದೆ. ಸರಕಾರ ಈ ೯ ವರ್ಷ ರಹದಾರಿ ಅವಧಿ ಮುಗಿದ ಟ್ಯಾಕ್ಸಿಗಳಿಗೆ ನೆರೆಯ ಗೋವಾ ರಾಜ್ಯ ಪ್ರವೇಶಿಸಲು ತಾತ್ಕಾಲಿಕ ಪರವಾನಿಗೆಗೆ ೧೫೦೦ ರೂ. ಶುಲ್ಕ ವಿಧಿಸಿ ಪರವಾನಿಗೆ ಅವಧಿ ಕೇವಲ ಒಂದು ದಿನಕ್ಕೆ ಮಾತ್ರ ಕಲ್ಪಿಸುತ್ತಿದ್ದಾರೆ. ಈ ಮೊದಲು ತಾತ್ಕಾಲಿಕ ರಹದಾರಿ ಪರವಾನಿಗೆ ಶುಲ್ಕ ರೂ. ೨೫೦ ಇತ್ತು. ಪರವಾನಿಗೆ ಅವಧಿ ೯೦ ದಿನಗಳಿದ್ದವು. ಈಗ ರೂಪಾಯಿ ೧೫೦೦ ಶುಲ್ಕ ತೆತ್ತು ನೆರೆಯ ಗೋವಾ ರಾಜ್ಯಕ್ಕೆ ಪ್ರವೇಶ ಪಡೆಯಲು ನಮಗೆ ತುಂಬಾ ಆರ್ಥಿಕ ಹೊರೆಯಾಗುವುದಲ್ಲದೇ, ಬಾಡಿಗೆ ಕೂಡ ಇಲ್ಲದಂತಾಗಿದೆ ಎಂದು ಟ್ಯಾಕ್ಸಿ ಮಾಲಕ-ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಕಾರವಾರ-ಅಂಕೋಲಾ, ನೆರೆಯ ಗೋವಾ ರಾಜ್ಯದ ಗಡಿ ಪ್ರದೇಶವಾದ್ದರಿಂದ ಇಲ್ಲಿರುವ ಕೈಗಾ ಅಣುಸ್ಥಾವರ, ನೌಕಾನೆಲೆಯ ಘಟಕಗಳು ವಿಮಾನ ನಿಲ್ದಾಣ, ವೈದ್ಯಕೀಯ ಮತ್ತು ಪ್ರವಾಸೋದ್ಯಮಗಳಿಗೆ ನೆರೆಯ ಗೋವಾರಾಜ್ಯಕ್ಕೆ ಅವಲಂಬಿತರಾಗಿರುತ್ತಾರೆ. ಆದ್ದರಿಂದ ಅವರಿಗೆ ಟ್ಯಾಕ್ಸಿ-ಬಾಡಿಗೆ ಪಡೆಯಲು ಹೊಸದಾದ ತಾತ್ಕಾಲಿಕ ಪರವಾನಿಗೆ ಶುಲ್ಕ ವಿಪರೀತ ಆಗುವುದರಿಂದ ಟ್ಯಾಕ್ಸಿಗಳಿಗೆ ಬಾಡಿಗೆ ಇಲ್ಲದೇ ನಾವೆಲ್ಲ ನಿರುದ್ಯೋಗಿಗಳಾಗಿದ್ದೇವೆ. ಕರೋನಾ ಹೆಮ್ಮಾರಿಯಿಂದ ಟ್ಯಾಕ್ಸಿಗಳಿಗೆ ಎರಡು ವರ್ಷ ಬಾಡಿಗೆ ಇಲ್ಲದೇ ಸಂಕಷ್ಟಕ್ಕೆ ಓಳಗಾಗಿದ್ದೇವು. ಆ ಆರ್ಥಿಕ ಹೊರೆ ಸುಧಾರಿಸಿಕೊಳ್ಳುವಷ್ಟರಲ್ಲಿ ಸರಕಾರದ ಈ ರಹದಾರಿ ನಿಯಮದಿಂದ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿ ಕಂಗಾಲಾಗಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.