ಕಾರವಾರ : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ದಿನಾಂಕ ಘೋಷಣೆ ಇನ್ನಷ್ಟೇ ಆಗಬೇಕಿದೆ. ಇತ್ತ ಉತ್ತರ ಕನ್ನಡ ಜಿಲ್ಲಾಡಳಿತ ಚುನಾವಣೆಗೆ ಸಜ್ಜಾಗುತ್ತಿದೆ. ಮುಂಬರುವ ಲೋಕಸಭಾ ಚುನಾವಣಾ ಪ್ರಯುಕ್ತ ವಿವಿಧ ಕರ್ತವ್ಯಗಳ ನಿರ್ವಹಣೆಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳ ಸಭೆಯನ್ನು ಇಂದು (ಫೆ.೨೮) ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನಡೆಸಿದರು.

ಇದನ್ನೂ ಓದಿ : ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ

ಸಭೆಯಲ್ಲಿದ್ದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಕಾರ್ಯವ್ಯಾಪ್ತಿ ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು ಯಾವುದೇ ಲೋಪಗಳಿಗೆ ಆಸ್ಪದ ನೀಡದೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.

ಈ ವಿಡಿಯೋ ನೋಡಿ :  https://www.facebook.com/share/v/6gGUyzVTqNCWagi1/?mibextid=oFDknk
ಎಲ್ಲಾ ನೋಡೆಲ್ ಅಧಿಕಾರಿಗಳು ತಮಗೆ ವಹಿಸಲಾಗಿರುವ ಜವಾಬ್ದಾರಿಗಳ ಬಗ್ಗೆ ತಮ್ಮ ಅಧೀನ ಸಿಬ್ಬಂದಿಗೆ ಸೂಕ್ತ ತರಬೇತಿಗಳನ್ನು ನೀಡಿ ಅವರನ್ನು ಚುನಾವಣಾ ಕರ್ತವ್ಯಗಳಿಗೆ ಸಜ್ಜುಗೊಳಿಸಬೇಕು. ತರಬೇತಿ ಸಮಯದಲ್ಲಿ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಣೆ ಕುರಿತಂತೆ ಇರುವ ಎಲ್ಲಾ ಸಂದೇಹ ಮತ್ತು ಗೊಂದಲಗಳನ್ನು ಪರಿಹರಿಸಿ, ಅವರು ಪರಿಪೂರ್ಣವಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು.

ಚುನಾವಣಾ ದಿನಾಂಕ ಘೋಷಣೆಯಾದ ಕೂಡಲೇ ತಮ್ಮ ವ್ಯಾಪ್ತಿಗಳಲ್ಲಿ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಅದಕ್ಕೆ ಬೇಕಾದ ಎಲ್ಲಾ ಅಗತ್ಯ ಸಿದ್ದತೆಗಳನ್ನು ಸಾಕಷ್ಟು ಮುಂಚಿತವಾಗಿ ಮಾಡಿಕೊಳ್ಳುವುದರ ಮೂಲಕ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸಿದ್ದರಿರುವಂತೆ ತಿಳಿಸಿದರು.

ಚುನಾವಣಾ ಪ್ರಕ್ರಿಯೆ ನಡೆಸಲು ಅಗತ್ಯವಿರುವ ಸಿಬ್ಬಂದಿ, ವಾಹನಗಳು, ಇವಿಎಂಗಳು, ಸಂಪರ್ಕ ವ್ಯವಸ್ಥೆಗಳು, ಮಾಧ್ಯಮ ನಿರ್ವಹಣೆ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ, ತಾಂತ್ರಿಕ ಸಿಬ್ಬಂದಿ, ಚುನಾವಣಾ ಸಾಮಗ್ರಿಗಳ ಹಂಚಿಕೆ, ಅಂಚೆ ಮತಪತ್ರಗಳ ನಿರ್ವಹಣೆ, ಚುನಾವಣಾ ಲೆಕ್ಕಪತ್ರಗಳ ನಿರ್ವಹಣೆ, ಚುನಾವಣಾ ವೀಕ್ಷಕರ ಕಾರ್ಯನಿರ್ವಹಣೆಗೆ ಅಗತ್ಯವಿರುವ ಮೂಲಭೂತ ವ್ಯವಸ್ಥೆ, ವಿಕಲಚೇತನ ಮತದಾರರು ಮತ್ತು ಹಿರಿಯ ನಾಗರೀಕ ಮತದಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಇಡೀ ಚುನಾವಣಾ ಪ್ರಕ್ರಿಯೆಯನ್ನು ಸುಗಮ, ಶಾಂತಿಯುತ, ಮತ್ತು ಪಾರದರ್ಶಕವಾಗಿ ನಡೆಸಲು ಎಲ್ಲಾ ನೋಡೆಲ್ ಅಧಿಕಾರಿಗಳು ಅತ್ಯಂತ ಹೆಚ್ಚಿನ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವಂತೆ ನಿರ್ದೇಶನ ನೀಡಿದರು.

ಚುನಾವಣೆ ಘೋಷಣೆಯಾದ ನಂತರ ಚುನಾವಣಾ ಆಯೋಗ ಹೊರಡಿಸುವ ಹೊಸ ಮಾರ್ಗಸೂಚಿಗಳು ಮತ್ತು ಆದೇಶಗಳ ಬಗ್ಗೆ ಎಲ್ಲಾ ನೋಡಲ್ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಬೇಕು. ಹಾಗೂ ಆಯೋಗದ ಮಾರ್ಗಸೂಚಿಯಂತೆಯೇ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಇದ್ದರು.