ಭಟ್ಕಳ: ಮೇ ೭ರಂದು ನಡೆಯುವ ಚುನಾವಣೆ “ಭಾರತ್ ಮಾತಾ ಕೀ ಜೈ” ಎನ್ನುವವರಿಗೂ ಮತ್ತು “ಪಾಕಿಸ್ತಾನ ಜಿಂದಾಬಾದ್” ಎನ್ನುವವರಿಗೆ ಬೆಂಬಲಿಸಲು ನಡೆಯುವ ಚುನಾವಣೆಯಾಗಿದೆ. ದೇಶ ಗೆಲ್ಲಬೇಕಾದರೆ ಭಾರತೀಯ ಜನತಾ ಪಾರ್ಟಿ ಗೆಲ್ಲಬೇಕು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಂದು ಉಡುಪಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಅವರು ಮಣ್ಕುಳಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಭಾರತ್ ಮಾತಾ ಕೀ ಜೈ” ಎನ್ನುತ್ತ ನನಗಿಂತ ನನ್ನ ಜಾತಿ, ಧರ್ಮಕ್ಕಿಂತ ನನ್ನ ದೇಶ ಮೊದಲು ಎನ್ನುವ ರಾಷ್ಟ್ರ ಭಕ್ತರು ಕೋಟ್ಯಂತರ ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲ ಸಮರ್ಪಣಾ ಮನೋಭಾವದಿಂದ “ರಾಷ್ಟ್ರ ಭಕ್ತ” ಮತ್ತು “ದೇಶ ಭಕ್ತ” ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎನ್ನುವ ಹಂಬಲದಲ್ಲಿದ್ದಾರೆ. ಮತ್ತೊಂದಿಷ್ಟು ಜನ ಕರ್ನಾಟಕದ ಜ್ಞಾನ ದೇಗುಲ ಹಾಗೂ ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವವರಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ರಾಹುಲ್ ಗಾಂಧಿ ಅವರದ್ದು ಹುಸಿ ಭರವಸೆ: ಸುನೀಲ ನಾಯ್ಕ

ರಾಜಕಾರಣದಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಮಟ್ಟಕ್ಕೆ ಕಾಂಗ್ರೆಸ್ ಪಕ್ಷ ಇಳಿದಿದೆ. ಸಂವಿಧಾನವನ್ನು ಬದಲಿಸುವ ಮೂಲಕ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಮುಂದಾಗಿದೆ. ದಲಿತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡಿತಗೊಳಿಸುವ ಸಂಚನ್ನು ಕಾಂಗ್ರೆಸ್ ಮಾಡುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಓಲೈಕೆ ಮಾಡಲು ಕಾಂಗ್ರೆಸ್ ಪಕ್ಷ ಸುಳ್ಳಿನ ಕಂತೆಗಳನ್ನು ಕಟ್ಟುತ್ತಿದೆ. ಸಂವಿಧಾನವನ್ನು ಬಿಜೆಪಿಗರು ಬದಲಾಯಿಸುತ್ತಾರೆ ಎಂದು ಅಪಪ್ರಚಾರ ಮಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಈ ದೇಶದ ಸಂವಿಧಾನಕ್ಕೆ ಬಿಜೆಪಿ ಪಕ್ಷ ಮತ್ತಷ್ಟು ಶಕ್ತಿ ನೀಡುತ್ತದೆ ಎಂದರು.

ಇದನ್ನೂ ಓದಿ : ಮತದಾರ ನಂಬಿರುವ ಗ್ಯಾರಂಟಿ ಮೋದಿ : ಈಶ್ವರ ನಾಯ್ಕ

ಬಾಬಾ ಸಾಹೇಬ್ ಅಂಬೇಡ್ಕರ್ ಚುನಾವಣೆಗೆ ನಿಂತಾಗ ಎರಡು ಬಾರಿ ಸಾಮಾನ್ಯ ವ್ಯಕ್ತಿಗಳನ್ನು ಕಾಂಗ್ರೆಸ್ ನಿಲ್ಲಿಸಿತ್ತು. ಮತ್ತೆ ಅವರನ್ನು ಸದನಕ್ಕೆ ಹೋಗದಂತೆ ಮಾಡಿರುವುದು ಕಾಂಗ್ರೆಸ್ ಪಕ್ಷ. ಅವರ ಪರವಾಗಿ ನಿಂತಿದ್ದು ನಮ್ಮ ಜನಸಂಘದ ಕಾರ್ಯಕರ್ತರು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದು ಕಾಂಗ್ರೆಸ್ ಪಕ್ಷ ಹೊರತೂ ಬಿಜೆಪಿ ಪಕ್ಷವಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಂಬೇಡ್ಕರ್ ರವರ ವಾಸಿಸಿದ ಮನೆ, ಅವರು ಮಾಡಿರುವ ಕೆಲಸ ಸಹಿತ ಐದು ಭಾಗಗಳನ್ನು ಕೇಂದ್ರ ಸರ್ಕಾರ ತನ್ನ ಸ್ವಾಧೀನಕ್ಕೆ ಪಡೆದುಕೊಂಡು ಸಾವಿರಾರು ಕೋಟಿ ವೆಚ್ಚ ಮಾಡಿ “ಪಂಚ ತೀರ್ಥ” ಎಂದು ಹೆಸರಿಟ್ಟಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ಕೊಟ್ಟಿರುವುದು ಪ್ರಧಾನಿ ನರೇಂದ್ರ ಮೋದಿ. ಆದರೆ ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ 23 ಸಾವಿರ ಕೋಟಿಗೂ ಅಧಿಕ ಹಣವನ್ನು ಗ್ಯಾರಂಟಿ ಭಾಗ್ಯಕ್ಕೆ ಉಪಯೋಗಿಸಿಕೊಂಡಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ತಕ್ಷಣ ಉತ್ತರ ನೀಡಬೇಕು ಎಂದರು.

ಇದನ್ನೂ ಓದಿ : ಡಾ.ಅಂಜಲಿ ವಿರುದ್ಧ ಸುಬ್ರಾಯ ದೇವಡಿಗ ಗರಂ

ನಮ್ಮ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಹನ್ನೊಂದುವರೆ ಸಾವಿರ ಕೋಟಿ ಶೌಚಾಲಯ ಕಟ್ಟಿಕೊಟ್ಟರೂ ಸಹ ಕಾಂಗ್ರೆಸ್ ಪಕ್ಷದವರು ಇನ್ನೂ ತನಕ ಚೊಂಬು ಹಿಡಿದುಕೊಂಡು ಹೋಗುವುದು ಬಿಟ್ಟಿಲ್ಲ.
– ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಅಭ್ಯರ್ಥಿ, ಉಡುಪಿ ಲೋಕಸಭಾ ಕ್ಷೇತ್ರ

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಮಾಜಿ ಅಧ್ಯಕ್ಷ ಸುಬ್ರಾಯ ದೇವಾಡಿಗ, ತಾಲೂಕು ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಕೆ.ಕೆ. ಮೋಹನ ಮತ್ತಿತರರು ಉಪಸ್ಥಿತರಿದ್ದರು