ರಿಪ್ಪನ್‌ಪೇಟೆ : ಹೊಸನಗರ ತಾಲೂಕಿನ ರಿಪ್ಪನಪೇಟೆಯ ವಿಎಸ್ ಎಸ್ ಎನ್ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ದಾಸ್ತಾನುವಿನಲ್ಲಿ ಲೋಪ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಚಾರಣೆಗೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ನ್ಯಾಯಬೆಲೆ ಅಂಗಡಿಯನ್ನು ಅಮಾನತ್ತುಪಡಿಸಿ ಜಿಲ್ಲಾ ಆಹಾರ ಉಪ ನಿರ್ದೇಶಕ ಆರ್ ಅವಿನ್ ಆದೇಶಿಸಿದ್ದಾರೆ.

ದಿನಾಂಕ 16-12-2023 ರಂದು ಜಿಲ್ಲಾ ಆಹಾರ ಉಪ ನಿರ್ದೇಶಕರು ನ್ಯಾಯಬೆಲೆ ಅಂಗಡಿಗೆ ಖುದ್ದು ಭೇಟಿ ನೀಡಿ, ನ್ಯಾಯಬೆಲೆ ಅಂಗಡಿಯ ದಾಸ್ತಾನಿನ ಪರಿಶೀಲನೆ ನಡೆಸಿದ್ದರು.  ಆ ವೇಳೆ, ಅಲ್ಲಿರುವ ದಾಸ್ತಾನಿಗೂ ಆನ್ ಲೈನ್ ಮಾಹಿತಿಗೂ ವ್ಯತ್ಯಾಸವಿರುವುದು ಕಂಡುಬಂದಿತ್ತು. ದರ ದಾಸ್ತಾನು ಫಲಕದಲ್ಲಿ ದಾಸ್ತಾನು ವಿವರ ನಮೂದಿಸಿರಲಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಜಾಗೃತಿ ಸಮಿತಿ ಸದಸ್ಯರ ಪಟ್ಟಿಯನ್ನೂ ಪ್ರದರ್ಶಿಸಿರಲಿಲ್ಲ. ಅಲ್ಲದೇ, ನ್ಯಾಯಬೆಲೆ ಅಂಗಡಿಯಲ್ಲಿ ತನಿಖಾ ಪುಸ್ತಕ ಇಲ್ಲದೇ ಇರುವಂತಹ ನ್ಯೂನತೆಗಳು ಕಂಡುಬಂದಿತ್ತು.

ವಿತರಣಾ ಪದ್ಧತಿ (ನಿಯಂತ್ರಣಾ) ಆದೇಶ -2016 ಕ್ಲಾಸ್ 4(3) ರಡಿ ಪಡೆದ ಪ್ರಾಧಿಕಾರ ಸಾಮಾನ್ಯ ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬಂದಿರುವುದರಿಂದ ನಿಯಮಾನುಸಾರ ಸದರಿ ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ಅಮಾನತ್ತುಪಡಿಸಿದ್ದಾರೆ.

ನ್ಯಾಯಬೆಲೆ ಲೈಸೆನ್ಸ್ ಅಮಾನತಾಗಿರುವ ಹಿನ್ನಲೆಯಲ್ಲಿ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಸಮೀಪದ ನ್ಯಾಯಬೆಲೆ ಅಂಗಡಿಗೆ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿ ವರದಿ ಸಲ್ಲಿಸಲು ಹೊಸನಗರ ತಹಶೀಲ್ದಾರ್‌ ಅವರಿಗೆ ಸೂಚಿಸಲಾಗಿದೆ.