ಭಟ್ಕಳ: ಪೊಲೀಸ್ ವಸತಿಗೃಹಕ್ಕೆ ತೆರಳುವ ರಸ್ತೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಪೊಲೀಸರು ಪೊಲೀಸ್ ವಸತಿಗೃಹ ಮೂಲಕ ಹೋಗುವ ರಸ್ತೆ ಬಂದ್ ಮಾಡಿದ್ದರಿಂದ ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಪೊಲೀಸ್ ಮೈದಾನ ಸಮೀಪ ಬುಧವಾರ ಸಂಜೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಸಹಾಯಕ ಆಯುಕ್ತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಜೂನ್‌ ೧೩ರಂದು ಜಿಲ್ಲೆಯ ವಿವಿಧೆಡೆ ಅಡಿಕೆ ಧಾರಣೆ

ಪೊಲೀಸ್ ವಸತಿಗೃಹಕ್ಕೆ ತೆರಳುವ ರಸ್ತೆಯನ್ನು ಹಲವಾರು ವರ್ಷಗಳಿಂದ ಸಾರ್ವಜನಿಕರು ತಮ್ಮ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು. ಆದರೆ, ಪೊಲೀಸ್ ಇಲಾಖೆಯು ಇದು ನಮ್ಮ ಪೊಲೀಸ್ ವಸತಿಗೃಹಕ್ಕೆ ಸಂಬಂಧಿಸಿದ ರಸ್ತೆಯಾಗಿದ್ದರಿಂದ ಇಲ್ಲಿ ವಾಹನ ತಿರುಗಾಡುವಂತಿಲ್ಲ ಎಂದು ರಸ್ತೆಗೆ ಬ್ಯಾರಿಕೇಡ್ ಅಡ್ಡಲಾಗಿ ಹಾಕಿದ್ದಾರೆ. ಇದರಿಂದ ಸಾರ್ವಜನಿಕರು ತಮಗೆ ತೊಂದರೆಯಾಗುತ್ತದೆ. ನಮ್ಮ ಮಕ್ಕಳ ಶಾಲಾ ವಾಹನಗಳು ಮಕ್ಕಳನ್ನು ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ತುರ್ತು ಪರಿಸ್ಥಿತಿಗಳಲ್ಲಿ ಆ್ಯಂಬುಲೆನ್ಸ ಮೂಲಕ ರೋಗಿಗಳನ್ನು ಸಾಗಿಸಲು ಪರದಾಡಬೇಕಾಗುತ್ತದೆ ಎಂದು ಆಕ್ರೋಶಗೊಂಡು ಬೀದಿಗಿಳಿದು ಬುಧವಾರ ಸಂಜೆ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ : ರಕ್ಷಾ ಸಮಿತಿಯ ಸಾಮಾನ್ಯ ಸಭೆಯಲ್ಲಿ ನಾನಾ ಚರ್ಚೆ

ಈ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತೆ ಡಾ.ನಯನಾ ಅವರು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರನ್ನು ಒಳಗೊಂಡಂತೆ ಗುರುವಾರ ಸಭೆ ಕರೆದಿದ್ದರು. ಈ ರಸ್ತೆ ಹಲವಾರು ವರ್ಷಗಳಿಂದ ಸಾರ್ವಜನಿಕರು ಮೂಲಭೂತ ಸೌಕರ್ಯವಾಗಿ ಉಪಯೋಗಿಸುತ್ತಿದ್ದೇವೆ. ಅಲ್ಲದೆ ಈ ರಸ್ತೆ ಅರಣ್ಯ ಇಲಾಖೆಯ ಜಾಗದಲ್ಲಿದೆ. ತಾವು ಹಿಂದಿನಿಂದಲೂ ಉಪಯೋಗಿಸಿಕೊಂಡು ಬರುತ್ತಿದ್ದೇವೆ. ಈಗ ಪೋಲಿಸರು ಏಕಾಏಕಿ ಬ್ಯಾರಿಕೇಡ್ ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದು ಸಭೆಯಲ್ಲಿ ಸಾರ್ವಜನಿಕರು ದೂರಿದರು. ಇತ್ತ ಪೊಲೀಸ್ ಇಲಾಖೆ ರಸ್ತೆ ಬಂದ್ ಮಾಡಿದ್ದನ್ನು ಸಮರ್ಥಿಸಿಕೊಂಡರು. ಈ ರಸ್ತೆ ನಮ್ಮ ಪೊಲೀಸ್ ವಸತಿಗೃಹದ ಕಾಂಪೌಂಡ್ ಒಳಭಾಗದಲ್ಲಿ ಇದೆ. ಈ ಭಾಗದಲ್ಲಿ ಸಾರ್ವಜನಿಕ ವಾಹನ ಓಡಾಟಕ್ಕೆ ಅವಕಾಶವನ್ನು ನೀಡಿದರೆ ನಮ್ಮ ಕುಟುಂಬಕ್ಕೆ ರಕ್ಷಣೆ ಇಲ್ಲದಂತಾಗುತ್ತದೆ. ನಾವು ಅನೇಕ ಕಾರ್ಯಾಚರಣೆಯಲ್ಲಿ ಅಪರಾದಿಗಳನ್ನು ಬಂಧಿಸಿರುತ್ತೇವೆ. ಈ ಕಾರಣ ಕೆಲವೊಂದು ಅಪರಾಧಿ ಮನಸ್ಥಿತಿಯಲ್ಲಿರುವ ವ್ಯಕ್ತಿಗಳು ನಮ್ಮ ಹಾಗೂ ನಮ್ಮ‌ ಕುಟುಂಬದ ಮೇಲೆ ಹಲ್ಲೆಗೆ ಮುಂದಾಗುವ ಸಾಧ್ಯತೆ ಇದೆ. ಇದಲ್ಲದೆ ವಾಹನ ಅಪಘಾತಗಳು ಸಂಭವಿಸುವ ಅಪಾಯಗಳು ಇರುತ್ತದೆ. ಆದ ಕಾರಣ ನಾವು ಇಲ್ಲಿ ಬ್ಯಾರಿಕೇಡ್ ಹಾಕಿದ್ದೇವೆ ಎಂದು ಪೊಲೀಸರು ವಾದಿಸಿದರು.

ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ವಾದವನ್ನು ಆಲಿಸಿದ ಸಹಾಯಕ ಆಯುಕ್ತರು, ನಾವು ಸದ್ಯದಲ್ಲಿ ಸಂಪೂರ್ಣವಾಗಿ ಸರ್ವೆ ನಡೆಸುತ್ತೇವೆ. ಹಾಗೆಯೇ ಪರಿಸ್ಥಿತಿಯನ್ನು ಅವಲೋಕಿಸುತ್ತೇವೆ. ಅಲ್ಲಿಯವರೆಗೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳ ಬೇಕು ಎಂದು ಸಾರ್ವಜನಿಕರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.