ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಪ್ರಶ್ನೆ

ಭಟ್ಕಳ: ಕಳೆದ ವರ್ಷ ರಾಜ್ಯದಲ್ಲಿ ಬಿಜೆಪಿ ಸರಕಾರ ಹಾಗೂ ಹೆಬಳೆ ಪಂಚಾಯತಿಯಲ್ಲಿ ಬಿಜೆಪಿ ಪಕ್ಷದವರೇ ಆಡಳಿತ ನಡೆಸುತ್ತಿರುವಾಗ ವೀರ ಸಾವರ್ಕರ್ ಹೆಸರಿನ ಕಟ್ಟೆ ಕಟ್ಟಲು ಅವಕಾಶ ನೀಡದೆ ಮಸೀದಿಗೆ ಹಸಿರು ಬೋರ್ಡ ಹಾಕಲು ಹಾಕಲು ಅನುಮತಿ ನೀಡಿತ್ತು. ಬಿಜೆಪಿಗೆ ಆಗ ಸಾವರ್ಕರ ಮೇಲೆ ಇಲ್ಲದ ಪ್ರೇಮ ಈಗ ದಿಢೀರ್ ಹೇಗೆ ಬಂತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಪ್ರಶ್ನಿಸಿದ್ದಾರೆ.

ವಿಡಿಯೋ ನೋಡಿ:  https://fb.watch/pYIiokEfZx/?mibextid=Nif5oz

ಅವರು ನಗರ ಕಾಂಗ್ರೆಸ್ ಕಚೇರಿಯಲ್ಲಿ  ಕರೆದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2022ರಲ್ಲಿ ಬಿಜೆಪಿ ಯುವಕರು ತೆಂಗಿನಗುಂಡಿಯಲ್ಲಿ ವೀರ ಸಾವರ್ಕರ ಹೆಸರಿನ ಕಟ್ಟೆ ಕಟ್ಟಲು ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಅಂದು ಹೆಬಳೆ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತವಿದ್ದರೂ ಸಾವರ್ಕರ್ ಕಟ್ಟೆಗೆ ಅನುಮತಿ ನೀಡಲಿಲ್ಲ. ಅದೇ ಸಮಯದಲ್ಲಿ ಮಸೀದಿಗೆ ಹೆಸರಿನ ಬೋರ್ಡ ಹಾಕಲು ಅವಕಾಶ ನೀಡಿಲಾಗಿತ್ತು. ನಮ್ಮ ಬಳಿ ಪಂಚಾಯಿತಿ ನೀಡಿದ ಆದೇಶ ಪ್ರತಿ ಇದೆ ಎಂದ ಅವರು, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದವರು ಹಿಂದೂಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಹುಟ್ಟಿಸಲು ಈಗ ಹೆಬೆಳೆ ಪಂಚಾಯಿತಿಯ ತೆಂಗಿನಗುಂಡಿಯಲ್ಲಿ ವೀರ ಸಾವರ್ಕರ ಹೆಸರಿನ ಕಟ್ಟೆ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಈಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವಂತೆ ಜನರ ಮಧ್ಯ ದ್ವೇಷ ಹುಟ್ಟಿಸಿ ಗೊಂದಲ ಸೃಷ್ಟಿಸುತ್ತಿದೆ ಎಂದರು.

ಇದನ್ನೂ ಓದಿ: ವೀರ ಸಾವರ್ಕರ ನಾಮಫಲಕ, ಭಗವಾಧ್ವಜ ತೆರವು – ಪಿಡಿಒ ವಿರುದ್ದ ಧರಣಿ ಕುಳಿತ ಪಂಚಾಯತ ಸದಸ್ಯರು

ಮೊನ್ನೆ ಬಿಜೆಪಿಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಸುದ್ದಿಗೋಷ್ಠಿ ನಡೆಸಿ ನಮ್ಮ ಸಚಿವರ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಅವರಿಗೆ ಈ ದೇಶದ ಕಾನೂನು ಚೌಕಟ್ಟಿನ ಅರಿವಿಲ್ಲದೇ ಏನೇನೋ ಮಾತಾಡುತ್ತಿದ್ದಾರೆ. ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರವಿರುವಾಗಲೇ ಸಾವರ್ಕರ್ ಹೆಸರಿನ ಕಟ್ಟೆ ಕಟ್ಟಲು ವಿರೋಧ ವ್ಯಕ್ತಿಪಡಿಸಿದ ಪಕ್ಷ ಯಾವುದು ಎಂದು ಪ್ರಶ್ನಿಸಿದ ಅವರು, ಈಗ ನಮ್ಮ ಸಚಿವರ ಕುಮ್ಮಕ್ಕು ಇದೆ ಎಂದು ಆರೋಪಿಸುವುದು ಸರಿಯಲ್ಲ ಎಂದರು.

ಇದನ್ನೂ ಓದಿ: ಭಟ್ಕಳ ಭಗವಾಧ್ವಜ ತೆರವಿನಲ್ಲಿ ಉಸ್ತುವಾರಿ ಸಚಿವರ ಕೈವಾಡ: ಹರಿಪ್ರಕಾಶ್ ಕೋಣೆಮನೆ ಆರೋಪ

ಪ್ರತಿ ಗಲ್ಲಿಯಲ್ಲಿ ಸಾವರ್ಕರ್ ಕಟ್ಟೆ ಕಟ್ಟುತ್ತೇವೆ ಎಂದು ಹೇಳಿದ್ದಾರೆ. ಅವರ ಮನೆಯಲ್ಲಿ ಸಾವರ್ಕರ ಕಟ್ಟೆ ಕಟ್ಟಲು ಯಾರ ಅನುಮತಿಯೂ ಬೇಕಾಗಿಲ್ಲ. ನಮಗೂ ಭಗವಾಧ್ವಜದ ಮೇಲೆ, ಸಾವರ್ಕರ್ ಮೇಲೆ ಗೌರವವಿದೆ. ಆದರೆ ಆ ಧ್ವಜವನ್ನು ರಸ್ತೆಯಲ್ಲಿ ತಂದು ರಾಜಕೀಯ ಮಾಡುತ್ತಿದ್ದೀರಿ. ಬಿಜೆಪಿಗೆ ಪಕ್ಷಕ್ಕೆ ಕಿಂಚಿತ್ತಾದರೂ ಗೌರವವಿದ್ದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು