ಭಟ್ಕಳ:  ಬಿಜೆಪಿಗೆ ದೇಶದಲ್ಲಿ ಒಳ್ಳೆಯ ವಾತಾವರಣ ಇದೆ. ಮೋದಿ ಅವರು ದೇಶಕ್ಕೆ ಮಾತ್ರ ನಾಯಕರಾಗದೇ ವಿಶ್ವ ನಾಯಕರಾಗಿರುವುದು ನಮ್ಮ ಸುದೈವ. ದೇಶದಲ್ಲಿ ಒಳ್ಳೆಯ ಪ್ರಧಾನಿ ಎಂಬ ಹೆಗ್ಗಳಿಕೆ ಇದೆ. ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡರೆ ಗೆಲುವು ಸಾಧ್ಯ ಎಂದು ಮಾಜಿ ಸಚಿವ ಶಿವಾನಂದ ನಾಯ್ಕ ಹೇಳಿದರು.

ಇದನ್ನೂ ಓದಿ : ಮತಗಟ್ಟೆ ಸಿಬ್ಬಂದಿಗೆ ವಿಶೇಷ ಕಿಟ್ !

ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆ ಮುರುಡೇಶ್ವರದ ಆರ್.ಎನ್.ಎಸ್. ಸಭಾಭವನದಲ್ಲಿ ಹಮ್ಮಿಕೊಂಡ ಉತ್ತರ ಕನ್ನಡ ಜಿಲ್ಲಾ ಕಾರ್ಯಕರ್ತರ ಸಮಾವೇಶ  ಉದ್ಘಾಟಿಸಿ ಮಾತನಾಡಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ನಾವು ಹೊಸ ಹೊಸ ರೀತಿಯಲ್ಲಿ ಚುನಾವಣಾ ಎದುರಿಸಬೇಕಾಗುತ್ತದೆ. ಹಿಂದೆಲ್ಲ ಬೂತ್ ಮಟ್ಟದ ಕಾರ್ಯಕರ್ತರು ಸಿಗುತ್ತಿರಲಿಲ್ಲ. ನಾವೇ ಮನೆ ಮನೆ ತೆರಳಿ ಪಕ್ಷದ ಪ್ರಚಾರ ಮಾಡಿದ್ದೇವೆ. ಈಗ ಪಕ್ಷದ ಸಂಘಟನೆಗೆ ಬಲ ಸಿಕ್ಕಿದೆ. ಭಟ್ಕಳದಲ್ಲಿನ ಸಂಘಟನೆಯು ಇಡೀ ಜಿಲ್ಲೆಯಲ್ಲಿ ಬೇರೆಲ್ಲೂ ಇಲ್ಲ.
ಪಕ್ಷದ ಗೆಲುವಿಗೆ ಉತ್ಸುಕರಾಗಿರಬೇಕು. ಉತ್ಸಾಹದಿಂದ ಬಿಜೆಪಿ ಅಭ್ಯರ್ಥಿ ಗೆಲುವಿಗೆ ದುಡಿಯಬೇಕು ಎಂದರು
ಹೊನ್ನಾವರ ಜೆಡಿಎಸ್ ಮುಖಂಡ ಟಿ.ಡಿ.ನಾಯ್ಕ ಮಾತನಾಡಿ, ರಾಮ ಸೇತು ಕಟ್ಟುವಾಗಿ ಅಳಿಲು ಮಾಡಿದ ಸೇವೆ ಹೇಗೆ ಇತಿಹಾಸದಲ್ಲಿ ಶಾಶ್ವತವೋ ಅದೇ ರೀತಿ ಮೋದಿ ಮತ್ತೆ ಪ್ರಧಾನಿ ಆಗಲು ಕರ್ನಾಟಕದಲ್ಲಿ ಜೆ.ಡಿ.ಎಸ್. ಕೆಲಸ ಮಾಡಲಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ವಿಶ್ವ ಗುರು ಆಗಿ ಭಾರತ ಮೆರೆಯಬೇಕು ಎಂದರು.

ಇದನ್ನೂ ಓದಿ : ಯುಗಾದಿ, ರಮಜಾನ್ ಪ್ರಯುಕ್ತ ಹೆಚ್ಚುವರಿ ಬಸ್ ಸಂಚಾರ

ಕುಮಟಾದ ಬಿಜೆಪಿ ಮುಖಂಡ  ಡಾ.ಜಿ.ಜಿ.ಹೆಗಡೆ ಮಾತನಾಡಿ, ಕಾರ್ಯಕರ್ತರು ಪ್ರತಿ ದಿನ 5 ಮನೆಗಳಿಗೆ ಭೇಟಿ ನೀಡಿ ಪ್ರಧಾನಿ ಮೋದಿ ಅವರ ಕಾರ್ಯದ ಬಗ್ಗೆ ಯೋಜನೆಯ ಬಗ್ಗೆ ಮನವರಿಕೆ ಮಾಡಬೇಕು. ಪ್ರಧಾನಿ ಮೋದಿ ಅವರ ಸರಕಾರದ ಕಾರ್ಯದ ಬಗ್ಗೆ ಮಾಹಿತಿ‌ ಪಡೆದುಕೊಂಡು ಕೆಲಸ ಮಾಡಬೇಕು ಎಂದರು.
ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಪಕ್ಷದ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಅವರನ್ನು ಗಡಿಪಾರು ಮಾಡುವ ಉದ್ದೇಶ ಕಾಂಗ್ರೆಸ್ ಸರಕಾರದ್ದಾಗಿದೆ. ಕಾರ್ಯಕರ್ತರು ಹೋರಾಟಕ್ಕೆ ಬರಲಿದ್ದಾರೆ. ಈಗ ಅವರ ಜೊತೆಗೆ ನಾಯಕರಾದ ನಾವು ಸಾಥ್ ನೀಡಬೇಕಿದೆ ಎಂದರು.

ಇದನ್ನೂ ಓದಿ : ನಾಮಪತ್ರ ಸಲ್ಲಿಕೆ ೧೨ರಿಂದ : ೨೨ರವರೆಗೆ ನಿಷೇಧಾಜ್ಞೆ

ಬಿಜೆಪಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಚಾಲಕ  ಗೋವಿಂದ ನಾಯ್ಕ  ಮಾತನಾಡಿ, ಸರಕಾರದ ಕೈಗೊಂಬೆಯಾಗಿ ಅಧಿಕಾರಿಗಳು ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಮತ್ತೆ ಮತ್ತೆ ನಮ್ಮ ಹಿಂದು ಕಾರ್ಯಕರ್ತರ ಹೋರಾಟ ಶಮನ ಮಾಡಲು ಯತ್ನಿಸಿದರೆ ಸಂಘಟನಾತ್ಮಕವಾಗಿ ನಮ್ಮ ಪ್ರತ್ಯುತ್ತರ ನೀಡಲಿದ್ದೇವೆ ಎಂದರು.

ಇದನ್ನೂ ಓದಿ : ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಏ.೧೭ರಂದು

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ,
ಗ್ಯಾರೆಂಟಿ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ಮತ್ತು ದುರಾಡಳಿತ ನಡೆಸುತ್ತಿದೆ.
ಸ್ವಾಭಿಮಾನ ಭಾರತದ ನಿರ್ಮಾಣದ ಜೊತೆಗೆ ಆಂತರಿಕ ಭದ್ರತೆ, ಅಭಿವೃದ್ಧಿ ಮಂತ್ರವನ್ನು ಮೋದಿ ಜನರ ಮುಂದೆ ಇಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರ, ಅಭಿವೃದ್ಧಿ ಮತ್ತು ಮುಖಂಡರ ಬಗ್ಗೆ ಇಲ್ಲಸಲ್ಲದ ಬೇಸರ ವ್ಯಕ್ತಪಡಿಸುವದನ್ನು ಮರೆತು ಪಕ್ಷಕ್ಕೆ ಪೂರಕವಾಗಿ ಪ್ರಚಾರ ಮಾಡಬೇಕಿದೆ ಎಂದರು.

ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗ್ಡೆ ಕಾಗೇರಿ ಮಾತನಾಡಿ, ಭಟ್ಕಳ ನನ್ನ ಕಾರ್ಯಕ್ಷೇತ್ರ ಮತ್ತು ಪ್ರೇರಣಾಕ್ಷೇತ್ರ ಆಗಿತ್ತು. ಭಟ್ಕಳ ಜಿಜ್ಞಾಸೆಯ ಕೇಂದ್ರ ಆಗಿದೆ. ಸಮಸ್ಯೆಗಳ ಪರಿಹಾರಕ್ಕೆ ನಾನು ಬದ್ದನಾಗಿದ್ದೇನೆ. ಅನಂತಕುಮಾರ ಹೆಗಡೆ ಅವರ ಹೋರಾಟದ ಅವಧಿಯಲ್ಲಿ ಗೋಲಿಬಾರ್ ಆದ ವೇಳೆ ಪ್ರತಿ ಮನೆಗೆ ತೆರಳಿದ್ದೇವೆ. ಇಲ್ಲಿಯ ಜನಜೀವನದ ಬಗ್ಗೆ ಸ್ಪಷ್ಟ ಗಮನ‌ ಇದೆ. ಜವಾಬ್ದಾರಿ ಸ್ಥಾನವನ್ನು ಮಾಡಿದ ಅನುಭವದೊಂದಿಗೆ ಕೆಲಸ ಮಾಡಲಿದ್ದೇನೆ. ಭಟ್ಕಳದಲ್ಲಿ ಅಥವಾ ಜಿಲ್ಲೆಯಲ್ಲಿ ನಡೀಬಾರದ್ದು ನಡೆಯುತ್ತಿದೆ. ನಿಮ್ಮೊಂದಿಗೆ ಇದ್ದು ಅದನ್ನು ನೆಡೆಯದೆ ಇರುವ ಹಾಗೆ ಮಾಡುತ್ತೇನೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ಎರಡು ಸಿದ್ದಾಂತಗಳ ನಡುವೆ ನಡೆಯುತ್ತಿರುವ ಚುನಾವಣೆ ಇದಾಗಿದೆ. 10 ವರ್ಷ ಯಶಸ್ವಿಯಾಗಿ ದೇಶವನ್ನು ಆಳಿದ ಪ್ರಧಾನಿ ಮೋದಿ ಅವರನ್ನು ಗೆಲ್ಲಿಸಬೇಕಾದ ಕರ್ತವ್ಯ ನಮ್ಮದಾಗಿದೆ ಎಂದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಹಿಂದುಳಿದ ವರ್ಗ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ, ಪ್ರಧಾನ ಕಾರ್ಯದರ್ಶಿ  ಗುರುಪ್ರಸಾದ ಹೆಗಡೆ  ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು, ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರ ಬೂತ್‌ ಪ್ರಮುಖರು, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.