ಭಟ್ಕಳ: ಬಿಜೆಪಿ ಸರಕಾರದ ಅವಧಿಯಲ್ಲಿ ಯಾವುದಾದರೂ ಹೇಳಿಕೊಳ್ಳುವ ಒಂದು ಅಭಿವೃದ್ಧಿ ಕಾರ್ಯ ಆಗಿದ್ದಿದ್ದರೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತೋರಿಸಲಿ ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಗುದ್ದಲಿ ಪೂಜೆ ಮಾಡುತ್ತಿರುವ ಮಂಕಾಳ ವೈದ್ಯ : ಕಾಗೇರಿ ಲೇವಡಿ

ಭಟ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆಯವರು ತಂದ ಅನುದಾನದ ಗುದ್ದಲಿಪೂಜೆ ಮಾಡುವ ಜಾಯಮಾನ ನನ್ನದಲ್ಲ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ನನ್ನ ಅವಧಿಯಲ್ಲಿ ಸರಕಾರದಿಂದ ಏನು ಅನುದಾನ ತಂದಿದ್ದೇನೋ ಅದರ ಸಮರ್ಪಕ ಅನುಷ್ಠಾನ ಆಗುವಂತೆ ನೋಡಿಕೊಂಡಿದ್ದೇನೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದಂತೆ ನಾನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆ ಶಾಸಕರು ತಂದ ಅನುದಾನದ ಗುದ್ದಲಿಪೂಜೆ ನೆರವೇರಿಸುವ ಕೆಲಸ ಮಾಡಿಲ್ಲ. ಅದರ ಅಗತ್ಯವೂ ನನಗಿಲ್ಲ ಎಂದರು.
ಭಟ್ಕಳದಲ್ಲಿ ಮಿನಿ ವಿಧಾನಸೌಧ, ಬಸ್ ನಿಲ್ದಾಣ, ಸಾರಿಗೆ ಡಿಪೋ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳು ಮಂಜೂರಿಯಾಗಿರುವುದು ನಾನು ಶಾಸಕನಿದ್ದ ಅವಧಿಯಲ್ಲಿ. ಆದರೆ ಇದರ ಉದ್ಘಾಟನೆ ಮಾಡಿರುವುದು ಯಾರು? ಎಂದು ಪ್ರಶ್ನಿಸಿದರು.
ನನಗೂ ಮಾತನಾಡಲು ಬರುತ್ತದೆ. ನಾನು ಇಷ್ಟು ದಿನ ಸುಮ್ಮನೆ ಇದ್ದೆ. ಅವರು ನನ್ನ ವಿರುದ್ಧ ಮಾತನಾಡಲು ಪ್ರಾರಂಭಿಸಿದರೆ ನಾನೂ ಮಾತನಾಡಲು ಹಿಂಜರಿಯುವುದಿಲ್ಲ. ಏನು ಮಾತನಾಡಬೇಕು ಎಂದು ನನಗೆ ಗೊತ್ತಿದೆ ಎಂದು ಮಂಕಾಳ ವೈದ್ಯ ಹೇಳಿದರು.


ನಾನು ಬೇರೆಯವರು ತಂದ ಅನುದಾನದ ಗುದ್ದಲಿ ಪೂಜೆ ನಡೆಸಿಲ್ಲ. ನಾನು ತಂದ ಅನುದಾನದ ಗುದ್ದಲಿ ಪೂಜೆ ನಡೆಸಿ ಅಭಿವೃದ್ಧಿ ಕಾರ್ಯ ಮಾಡಿಸಿದ್ದೇನೆ. ನಾನು ಎಷ್ಟು ಅನುದಾನ ತಂದಿದ್ದೇನೆ. ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆಂದು ಜನತೆಗೆ ಗೊತ್ತಿದೆ. ಹಾಗೆ ನೋಡಿದರೆ ನಾನು ಹಿಂದೆ ಶಾಸಕನಾಗಿದ್ದ ಸಂದರ್ಭದಲ್ಲಿ ತಂದ ಅನುದಾನ ಗುದ್ದಲಿ ಪೂಜೆ ನಡೆಸಿದವರು ಯಾರು? ಹಿಂದಿನ ಶಾಸಕರ ಅವಧಿಯಲ್ಲಿ ಹೇಳಿಕೊಳ್ಳುವ ಒಂದಾದರೂ ದೊಡ್ಡ ಮೊತ್ತದ ಅನುದಾನ ಬಂದಿದೆಯೇ ಎನ್ನುವುದು ಸ್ಪಷ್ಟಪಡಿಸಲಿ ಎಂದರು.


ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರು, ಗೂಂಡಾ ಕಾಯ್ದೆ ನಾನು ಹಾಕಿಸಿಲ್ಲ. ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲೇ ಕೇಸುಗಳು ಬಿದ್ದಿವೆ. ಅವರ ಸರಕಾರದ ಅವಧಿಯಲ್ಲೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದಾಗ ಸ್ಪೀಕರ್ ಆಗಿದ್ದ ಕಾಗೇರಿ ಅವರು ಏನು ಮಾಡಿದರು? ಅಂದು ಗಡಿಪಾರು ಆದೇಶವನ್ನು ವಾಪಾಸ್ ಪಡೆಯಬಹುದಿತ್ತಲ್ಲ ಎಂದು ಪ್ರಶ್ನಿಸಿದರು. ಅವರು ನನ್ನ ಮೇಲೆ ಮತ್ತು ನಮ್ಮ ಸರಕಾರದ ಮೇಲೆ ವೃಥಾ ಆರೋಪ ಮಾಡುವುದು ಸರಿಯಲ್ಲ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.