ಕುಮಟಾ: ತಾಲೂಕಿನಾದ್ಯಂತ ಈ ಸಾಲಿನ ಮುಂಗಾರು ಮಳೆ ಸುರಿದಿದೆ. ಇದರಿಂದ ತಮ್ಮ ತಮ್ಮ ಗದ್ದೆಗಳಲ್ಲಿ ಈ ಸಾಲಿನ ಭತ್ತ ಬೆಳೆಯುಲೆಂದು ರೈತರು ಭೂಮಿಯನ್ನು ಹದಗೊಳಿಸುವ ಪೂರ್ವಭಾವಿ ಕಾರ್ಯ ಕೈಗೊಂಡಿದ್ದಾರೆ. ಭತ್ತದ ಅಗೆ ಸಸಿ ತಯಾರು ಮಾಡಲು ಈಗ ಸಿದ್ಧತೆ ನಡೆಸಿದ್ದಾರೆ. ಕೆಲವೆಡೆ ಈ ಪೂರ್ವಭಾವಿ ಕಾರ್ಯವನ್ನು ರೈತರು ಮುಗಿಸಿಕೊಂಡು ಭತ್ತದ ಬೀಜ ಬಿತ್ತನೆಗೆ ಈಗ ಸಿದ್ಧರಾಗುತ್ತಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ತಾಲೂಕಿನಲ್ಲಿ ಭತ್ತದ ಗದ್ದೆ ಇರುವ ರೈತರು ಹೆಚ್ಚಾಗಿ ಜಯಾ ಭತ್ತವನ್ನು ಬಿತ್ತನೆ ಮಾಡುತ್ತಾರೆ. ಕೆಲವು ರೈತರು ಬೇರೆ ತಳಿಯ ಭತ್ತದ ಬಿತ್ತನೆ ನಡೆಸುತ್ತಾರೆ. ಇದರಲ್ಲಿ ಜಯಾ ಭತ್ತವನ್ನು ಬಿತ್ತನೆ ಮಾಡುವ ರೈತರ ಸಂಖ್ಯೆ ಹೆಚ್ಚಿದೆ.

ಇದನ್ನೂ ಓದಿ : ಪರಿಸರ ಮಾಹಿತಿ ಕಾರ್ಯಕ್ರಮ ಸಂಪನ್ನ

ಪ್ರತಿ ವರ್ಷ ಭತ್ತ ಬೆಳೆಯುವ ಹಂಗಾಮು ಚಾಲು ಆದ ಸಂದರ್ಭದಲ್ಲಿ ಕುಮಟಾ ಕೃಷಿ ಇಲಾಖೆ ಹಾಗೂ ಕೂಜಳ್ಳಿ, ಮಿರ್ಜಾನ, ಗೋಕರ್ಣದ ರೈತ ಸಂಪರ್ಕ ಕೇಂದ್ರಗಳಲ್ಲಿ ಜಯಾ ಸೇರಿದಂತೆ ಈ ಭಾಗದಲ್ಲಿ ಬೇಡಿಕೆ ಇರುವ ವಿವಿಧ ತಳಿಗಳ ಭತ್ತದ ಬೀಜಗಳನ್ನು ಸಂಗ್ರಹಿಸಿಡಲಾಗುತ್ತಿತ್ತು. ಈ ಬೀಜಗಳನ್ನು ರಿಯಾಯತಿ ದರದಲ್ಲಿ ರೈತರಿಗೆ ವಿತರಿಸುತ್ತಾ ಬರಲಾಗುತ್ತಿತ್ತು. ಆದರೆ ಈ ಸಲ ಬಹುಸಂಖ್ಯೆಯ ರೈತರಿಂದ ಬೇಡಿಕೆ ಇರುವ “ಜಯಾ” ತಳಿಯ ಭತ್ತದ ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿಲ್ಲ. ಈ ಕೊರತೆ ರೈತರನ್ನು ಈಗ ಕಾಡಲಾರಂಭಿಸಿದೆ.

ಇದನ್ನೂ ಓದಿ : ಜೂನ್‌ ೧೮ರಂದು ರಾಜ್ಯದ ವಿವಿಧ ಜಿಲ್ಲೆಗಳ ಅಡಿಕೆ ಧಾರಣೆ

ಜಯಾ ತಳಿಯ ಭತ್ತದ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿಲ್ಲದ ವಿಷಯ ತಿಳಿದ ಕಾಂಗ್ರೆಸ್ ಮುಖಂಡ ಭಾಸ್ಕರ ಪಟಗಾರ, ರೈತರಾದ ನರಸಿಂಹ ಭಟ್ಟ, ಮೋಹನ ಗೌಡ, ಬಲೀಂದ್ರ ಗೌಡ ಅವರೊಂದಿಗೆ ಪಟ್ಟಣದಲ್ಲಿರವ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿದ್ದರು. ಅಲ್ಲಿದ್ದ ಕೃಷಿ ಅಧಿಕಾರಿ ಚಂದ್ರಕಲಾ ಬರ್ಗಿ ಅವರನ್ನು ಭತ್ತದ ಬೀಜದ ಕೊರತೆಯ ಕುರಿತು ಪ್ರಶ್ನಿಸಿದರು. ಆದಷ್ಟು ಬೇಗ ತಾಲೂಕಿನ ರೈತರಿಗೆ ಜಯಾ ಭತ್ತದ ಬೀಜಗಳನ್ನು ಪೂರೈಸುವಲ್ಲಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಇದನ್ನೂ ಓದಿ : ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ; ಓರ್ವ ವಶಕ್ಕೆ

ಕಳೆದ ಸಾಲಿನಲ್ಲಿ ಜಯ ಭತ್ತದ ಬೀಜದ ಬೇಡಿಕೆಯನ್ನು ಗಮನಿಸಿ ಈ ಸಾಲಿಗಾಗಿ ೭೦೦ ಕ್ವಿಂಟಲ್ ಜಯಾ ಭತ್ತದ ಬೀಜಕ್ಕಾಗಿ ನಾವು ಇಂಡೆಂಟ್ ನೀಡಿದ್ದೇವು. ಆದರೆ ಪೂರೈಕೆಯಾಗಿದ್ದು ೩೩೭ ಕ್ವಿಂಟಲ್. ಪೂರೈಕೆಯಾದ ೩೩೭ ಕ್ವಿಂಟಲ್ ಭತ್ತದ ಬೀಜಗಳನ್ನು ಈಗಾಗಲೆ ನಾಲ್ಕು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಪೂರೈಸಿದ್ದೇವೆ. ಹೈಬ್ರೀಡ್ ತಳಿಯಾದ ಪಿ.ಎ.ಸಿ-೮೩೫ ಭತ್ತದ ಬೀಜ ೩೦.೬ ಕ್ವಿಂಟಲ್ ಪೂರೈಕೆಯಾಗಿತ್ತು. ಅದರಲ್ಲಿ ೨೩ ಕ್ವಿಂಟಲ್ ಈಗಾಗಲೆ ಮಾರಾಟವಾಗಿದೆ. ಕೆಂಪು ಅಕ್ಕಿಯಾಗುವ ಸಹ್ಯಾದ್ರಿ ಮೇಘಾ ೬.೭೦ ಕ್ವಿಂಟಲ್ ಹಾಗೂ ಸಹ್ಯಾದ್ರಿ ಮೋಕ್ಷ ೫ ಕ್ವಿಂಟಲ್‌ನಲ್ಲಿ ೧ ಕ್ವಿಂಟಲ್ ಖರ್ಚಾಗಿದೆ. ನಮ್ಮ ತಾಲೂಕಷ್ಟೆ ಅಲ್ಲ ಎಲ್ಲಡೆ ಜಯಾ ಭತ್ತದ ಬೀಜ ಕೊರತೆ ಉಂಟಾಗಿದೆ. ತಾಲೂಕಿನ ರೈತರಿಗೆ ಬಿತ್ತನೆಗಾಗಿ ಜಯಾ ಭತ್ತದ ಬೀಜ ಅವಶ್ಯವಿರುವುದನ್ನು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಚಂದ್ರಕಲಾ ಬರ್ಗಿ, ಕೃಷಿ ಅಧಿಕಾರಿ, ಕುಮಟಾ.

ಇದನ್ನೂ ಓದಿ : ಸಾಕು ನಾಯಿಗೆ ವಿಧಿವತ್ತಾಗಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ