ಭಟ್ಕಳ: ಇಡೀ ಊರು ಜಾತ್ರೆ ಸಂಭ್ರಮದಲ್ಲಿ ಇರುವುದನ್ನೇ ದುರುಪಯೋಗ ಪಡಿಸಿಕೊಂಡ ಯುವಕರಿಬ್ಬರು ಬ್ಯಾಂಕಿಗೆ ಕನ್ನ ಹಾಕಿದ ಘಟನೆ ಭಟ್ಕಳದಲ್ಲಿ ನಡೆದಿದೆ. ಹೆಲ್ಮೆಟ್ ಧರಿಸಿ ಬ್ಯಾಂಕ್ ಶೆಟರ್ ಮುರಿದು ಒಳ ನುಗ್ಗಿದ ಕಳ್ಳರು ಸೇಫ್ ಲಾಕರನ್ನೇ ಎಗರಿಸಿಕೊಂಡು ಹೋಗಿದ್ದಾರೆ. ಇಲ್ಲಿನ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವಿನಾಯಕ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ಕಳ್ಳತನ ನಡೆದಿದೆ.

ಇದನ್ನೂ ಓದಿ : ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮ ರಥೋತ್ಸವ ಸಂಪನ್ನ

ಭಟ್ಕಳ ಜಾತ್ರೆ ಹಿನ್ನೆಲೆಯಲ್ಲಿ ಭಟ್ಕಳ ಚನ್ನಪಟ್ಟಣ ಹನುಮಂತ ದೇವಸ್ಥಾನದ ಸುತ್ತ ಮುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇಡೀ ಪೊಲೀಸ್ ಇಲಾಖೆ ಗಮನ ಜಾತ್ರೆ ಕಡೆ ಇದ್ದರೆ, ಈ ಇಬ್ಬರು ಕಳ್ಳರ ಗಮನ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಬಿದ್ದಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಬುಧವಾರ ಬೆಳಗಿನ ಜಾವ ೩.೩೦ಕ್ಕೆ ಬಂದ ಕಳ್ಳರು, ಬ್ಯಾಂಕಿಗೆ ಕನ್ನ ಹಾಕಿದ್ದಾರೆ. ಗುರುತು ಪತ್ತೆಯಾಗದಂತೆ ಓರ್ವ ಹೆಲ್ಮೆಟ್ ಧರಿಸಿದ್ದರೆ ಇನ್ನೋರ್ವ ಮುಖಗವಸ ಧರಿಸಿದ್ದ. ಒಂದನೇ ಮಹಡಿಯಲ್ಲಿರುವ ಬ್ಯಾಂಕ್ ಗೆ ಕಳ್ಳರು ಕಳ್ಳತನಕ್ಕೆ ಬರುವ ಸಣ್ಣ ತುಣುಕು ಮಾತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುಂಜಾನೆ ಕಳ್ಳತವಾಗಿರುವ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಕಳ್ಳರ ಸುಳಿವಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ. ಈ ಕುರಿತು ಭಟ್ಕಳ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದೇ ರೀತಿ ಭಟ್ಕಳ ಗ್ರಾಮೀಣ ಠಾಣೆ ಹಾಗೂ ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಕಳ್ಳತನವಾಗಿರುವ ಮಾಹಿತಿ ಲಭ್ಯವಾಗಿದೆ.