ಭಟ್ಕಳ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಇಂದು ಭಟ್ಕಳದ ತಾಲೂಕಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಸಲುವಾಗಿ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್ ಸಿ ಡಿ ಘಟಕ, ತಾಲೂಕಾ ಆರೋಗ್ಯಾಧಿಕಾರಿ ಕಛೇರಿ ಭಟ್ಕಳ, ತಾಲೂಕಾ ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಮಂಕಾಳ ಎಸ್ ವೈದ್ಯ ಹಾಜರಿದ್ದು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕ್ಯಾನ್ಸರ್ ಕಾಯಿಲೆಯು 25 ಪ್ರತಿಶತ ನಮಗೆ ಅರಿವಿಲ್ಲದೆ ಬರುತ್ತದೆ. ಆದರೆ 75 ಪ್ರತಿಶತ ನಮಗೆ ಗೊತ್ತಿದ್ದೂ ಬರುತ್ತದೆ. ಅಂದರೆ ನಮಗಿರುವ ದುರಾಭ್ಯಾಸಗಳಿಂದ, ತಂಬಾಕು ಮುಂತಾದ ಮಾದಕ ವಸ್ತುಗಳ ಸೇವನೆಯಿಂದ ಬರುತ್ತದೆ. ಈ ಮೂಲಕ ನಮ್ಮನ್ನೇ ನಂಬಿಕೊಂಡಿರುವವರ ಜೀವಗಳು ತೊಂದರೆಗೆ ಸಿಲುಕಿದಂತಾಗುತ್ತದೆ. ತಾಲೂಕಿನಲ್ಲಿ 3 ಪ್ರತಿಶತ ಕ್ಯಾನ್ಸರ್ ಪೀಡಿತರಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಕ್ಯಾನ್ಸರ್ ಆಸ್ಪತ್ರೆ ಮಾಡುವ ಯೋಚನೆಯಿದೆ ಎಂದರು.

ವಿಡಿಯೋ ನೋಡಿ:

ಕ್ಯಾನ್ಸರ್ ಗೆದ್ದು ಬಂದ ಮಹಿಳೆಯೋರ್ವರು ಮಾತನಾಡಿ, ನಾವು ಕುಟುಂಬದಲ್ಲಿ ಮಾಡುವ ಹುಟ್ಟುಹಬ್ಬದಂತ ಆಚರಣೆಗೆ ಬಹಳಷ್ಟು ಹಣವನ್ನು ಹಾಳು ಮಾಡುತ್ತೇವೆ. ಆದರೆ ಅದೇ ಹಣವನ್ನು ಪ್ರತಿ ವರ್ಷವೂ ನಮ್ಮ ದೇಹದ ಆರೋಗ್ಯ ಸ್ಥಿತಿಯನ್ನು ಪರೀಕ್ಷೆಗೊಳಪಡಿಸಲು ವಿನಿಯೋಗಿಸಿದರೆ ನಾವು ಕ್ಯಾನ್ಸರ್ ನಂತಹ ಕಾಯಿಲೆಯನ್ನು ಆದಷ್ಟು ಬೇಗ ಗುರುತಿಸಿ ಅದಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು ಎಂದು ಹೇಳಿದರು.

ಇದನ್ನೂ ಓದಿ : ದೈಹಿಕ ಶಿಕ್ಷಣ ಶೈಕ್ಷಣಿಕ ಕಾರ್ಯಾಗಾರ ಸಂಪನ್ನ

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ, ಜಿಲ್ಲಾ ಸರ್ವೆಕ್ಷಣಾ ಅಧಿಕಾರಿ ಡಾ. ಅರ್ಚನಾ ಮತ್ತಿತರು ಹಾಜರಿದ್ದರು.