ಭಟ್ಕಳ: ಈಗಾಗಲೇ ತಾಲೂಕಿನಾದ್ಯಂತ ೨ನೇ ಹಂತದ ಪ್ರಚಾರ ಕಾರ್ಯಕ್ರಮ ಮುಕ್ತಾಯಗೊಂಡಿದೆ. ನಾಳೆಯಿಂದ(ಮೇ ೫) ೩ನೇ ಹಂತದ ಪ್ರಚಾರ ಕಾರ್ಯಕ್ರಮ ಮಹಾ ಅಭಿಯಾನ ಹಿನ್ನೆಲೆ ಭಟ್ಕಳದಲ್ಲಿ ಬೃಹತ್ ಬೈಕ್ ರ‌್ಯಾಲಿ ನಡೆಸಲಾಗುವುದು ಎಂದು ಬಿಜೆಪಿಯ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಸಂಚಾಲಕ ಗೋವಿಂದ ನಾಯ್ಕ ಹೇಳಿದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅವರು ಮಣ್ಕುಳಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಏಪ್ರಿಲ್ ೧೬ರಂದು ನಾಮಪತ್ರ ಸಲ್ಲಿಸಿದ ಬಳಿಕ ಇಡೀ ಲೋಕಸಭಾ ಕ್ಷೇತ್ರದ ೭೦ ಮಹಾಶಕ್ತಿ ಕೇಂದ್ರಗಳಲ್ಲಿ ಒಂದು ಸುತ್ತಿನ ಮತಯಾಚನೆ ಮಾಡಿದ್ದೇವೆ. ಮನೆಮನೆಗೆ ಹೋಗಿ ಪ್ರಚಾರ ಮುಗಿಸಿ ಕೆಲವು ಭಾಗಗಳಲ್ಲಿ ಎರಡನೇ ಸುತ್ತಿನ ಪ್ರಚಾರ ಕಾರ್ಯಕ್ರಮ ಮುಗಿದಿದೆ. ಭಾರತೀಯ ಜನತಾ ಪಾರ್ಟಿಯ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಅತಿ ಹೆಚ್ಚು ಉತ್ಸುಕತೆಯಿಂದ ಚುನಾವಣೆ ಪ್ರಚಾರ ಕಾರ್ಯ ಮಾಡಿದ್ದಾರೆ ಎಂದರು.
ಇದನ್ನೂ ಓದಿ : ‘ಕೈ’ ಹಿಡಿದ ಇನಾಯತುಲ್ಲಾ ಶಾಬಂದ್ರಿ; ಲಾಭ – ನಷ್ಟದ ಲೆಕ್ಕಾಚಾರ
ನಾಳೆ ಮೂರನೇ ಹಂತದ ಪ್ರಚಾರ ಕಾರ್ಯಕ್ರಮ ಮಹಾ ಅಭಿಯಾನ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿದೆ. ನಮ್ಮ ಲೋಕಸಭಾ ಕ್ಷೇತ್ರದ ೧೯೭ ಬೂತ್ ಗಳಲ್ಲಿ ಮನೆಮನೆಗೆ ಹೋಗಿ ಮಹಾ ಅಭಿಯಾನದ ಮೂಲಕ ಪ್ರಚಾರ ಮಾಡಲಿದ್ದೇವೆ.
ಭಾನುವಾರ ಮಧ್ಯಾಹ್ನ ೩ ಗಂಟೆಗೆ ಭಟ್ಕಳ ನಗರ ಭಾಗದಲ್ಲಿ ಹಮ್ಮಿಕೊಂಡಿದ್ದೇವೆ. ಮಾಜಿ ಸಚಿವ ಕುಮಾರ್ ಬಂಗಾರಪ್ಪ ನೇತೃತ್ವದಲ್ಲಿ ಭಟ್ಕಳದಲ್ಲಿ ಬೃಹತ್ ಬೈಕ್ ರ‌್ಯಾಲಿ ನಡೆಯಲಿದೆ. ನಮ್ಮ ೬ ಶಕ್ತಿ ಕೇಂದ್ರಗಳಲ್ಲಿ ಅಲ್ಲಿಯ ಸ್ಥಳೀಯ ನಾಯಕರ ನೇತೃತ್ವದಲ್ಲಿ ಮಹಾ ಅಭಿಯಾನದ ಅಂಗವಾಗಿ ಮನೆ ಮನೆಗೆ ಹೋಗಿ ಪ್ರಚಾರ ಮಾಡುವ ಕಾರ್ಯಕ್ರಮ ಇದೆ ಎಂದರು.
ಭಟ್ಕಳ ನಗರದಲ್ಲಿ ನಾಳೆ ಸಂತೆ ಮಾರ್ಕೆಟ್ ಇರುವುದರಿಂದ ಮಹಾ ಅಭಿಯಾನ ಕಾರ್ಯಕ್ರಮವನ್ನು ಸಂತೆ ಮಾರ್ಕೆಟ್ ನಲ್ಲಿ ನಡೆಸಲಿದ್ದೇವೆ. ಹಳ್ಳಿಯಿಂದ ಬಂದ ಜನರಿಗೆ ಬಿಜೆಪಿ ಸಾಧನೆ ಬಗ್ಗೆ, ಮೋದಿ ಅವರ ಕಾರ್ಯಕ್ರಮದ ಬಗ್ಗೆ ತಿಳಿಸಿ ಹೇಳುತ್ತೇವೆ. ಬಿಜೆಪಿಗೆ ಹಾಗೂ ನರೇಂದ್ರ ಮೋದಿಯವರಿಗೆ ಮತ ನೀಡುವಂತೆ ಮತಯಾಚಿಸುತ್ತೇವೆ ಎಂದರು.
ಕಿತ್ತೂರು ಹಾಗೂ ಖಾನಾಪುರ ಒಳಗೊಂಡು ೭೦ ಮಹಾಶಕ್ತಿ ಕೇಂದ್ರಗಳಲ್ಲಿ ಸುತ್ತಾಡಿದ್ದೇನೆ. ಎಲ್ಲಾ ಕ್ಷೇತ್ರದಲ್ಲೂ ಮತದಾರರ ಒಲವು ಬಿಜೆಪಿಗೆ ಹಾಗೂ ನರೇಂದ್ರ ಮೋದಿ ಅವರ ಕಡೆ ಇದೆ. ನಮ್ಮ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅತ್ಯಂತ ಹೆಚ್ಚು ಮತ ಕೊಟ್ಟು ಗೆಲ್ಲಿಸುವ ಕೆಲಸ ಮಾಡುತ್ತೇವೆ. ಹತ್ತು ವರ್ಷದ ನರೇಂದ್ರ ಮೋದಿಯವರ ಸರ್ಕಾರದ ಸಾಧನೆಗಳನ್ನು ಕಂಡು ಜನರು ನರೇಂದ್ರ ಮೋದಿಯವರಿಗೆ ಮತ್ತೊಮ್ಮೆ ಬೆಂಬಲಿಸುವ ಎಲ್ಲಾ ಲಕ್ಷಣಗಳು ಇವೆ. ಏಪ್ರಿಲ್ ೨೮ರಂದು ಶಿರಸಿಯಲ್ಲಿ ನಡೆದ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಜನ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಸೇರಿದ್ದರು. ಅದನ್ನು ನೋಡಿದರೆ ನಮ್ಮ ಬಿಜೆಪಿ ಅತ್ಯಂತ ಹೆಚ್ಚು ಮತಗಳಿಂದ ಆಯ್ಕೆಯಾಗುತ್ತದೆ ಎಂದರು.
ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದಗಳು ಹೇಳುತ್ತೇನೆ. ಏಕೆಂದರೆ ತಮ್ಮ ಎಲ್ಲಾ ವೈಯಕ್ತಿಕ ಕೆಲಸಗಳನ್ನು ಬಿಟ್ಟು, ಮದುವೆ-ಮುಂಜಿಯಂತಹ ಕಾರ್ಯಕ್ರಮಗಳನ್ನು ಬಿಟ್ಟು ತಮ್ಮ ಅಮೂಲ್ಯವಾದ ಸಮಯ ಪ್ರಚಾರಕ್ಕೆ ಮೀಸಲಿಟ್ಟಿದ್ದಾರೆ. ಬಿಜೆಪಿಯ ಗೆಲುವಿಗಾಗಿ ಮನೆಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ತಮಗೆ ಕೊಟ್ಟ ಕಾರ್ಯವನ್ನು ಅತಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ನಾಳೆ ದಿನ ಮನೆ ಮನೆಗೆ ಪ್ರಚಾರಕ್ಕೆ ಹೋದಾಗ ನರೇಂದ್ರ ಮೋದಿಯವರ ಸಾಧನೆಗಳನ್ನು ಹೇಳುತ್ತೇವೆ. ಭಾರತೀಯ ಜನತಾ ಪಾರ್ಟಿಗೆ ಮತ ನೀಡುವಂತೆ ಮತಯಾಚಿಸುತೇವೆ ಎಂದರು.