ಭಟ್ಕಳ : ಇಲ್ಲಿನ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಭಟ್ಕಳ ಮಾರಿಜಾತ್ರೆ ಜುಲೈ ೩೧ ಮತ್ತು ಆಗಸ್ಟ್ ೧ರಂದು ಜರುಗಲಿದ್ದು, ಜಾತ್ರೆ ಸಿದ್ಧತೆ ಆರಂಭಗೊಂಡಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಚನ್ನಪಟ್ಟಣ ಹನುಮಂತದೇವರ ರಥೋತ್ಸವ ಬಿಟ್ಟರೆ ಆಷಾಢದಲ್ಲಿ ಜರುಗುವ ಈ ಮಾರಿಜಾತ್ರೆಯೇ ಇಲ್ಲಿನ ಬಹುದೊಡ್ಡ ಜಾತ್ರೆಯಾಗಿದೆ. ಈ ಭಟ್ಕಳ ಮಾರಿಜಾತ್ರೆಗೆ ತಾಲೂಕಿನಿಂದಷ್ಟೇ ಅಲ್ಲದೇ, ಹೊರ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿ ದೇವಿಗೆ ಹರಕೆ ಅರ್ಪಿಸಿ ಪುನೀತರಾಗುತ್ತಾರೆ.
ಇದನ್ನೂ ಓದಿ : ಬಾವಿಗೆ ಹಾರಿ ಜೀವ ಬಿಟ್ಟ ಯುವತಿ
ಬರುವ ಆಷಾಢ ಮಾಸ ಹುಣ್ಣಿಮೆಯ ನಂತರದ ಪ್ರಥಮ ಮಂಗಳವಾರದಂದು ಅಂದರೆ ಜುಲೈ ೨೩ರಂದು ಮೂರ್ತಿ ತಯಾರಿಕೆಯ ಮರವನ್ನು ಧಾರ್ಮಿಕ ವಿಧಿವಿಧಾನಗಳಿಂದ ಕಡಿಯಲಾಗುತ್ತದೆ.
ಶ್ರೀದೇವಿಯ ಪೂರ್ವ ಬಿಂಬ ರೂಪವನ್ನು ಮಂಗಳವಾರದಿಂದ ಶುಕ್ರವಾರದವರೆಗೆ ಅಂದರೆ ಜುಲೈ ೨೬ರವರೆಗೆ ಅದೇ ಜಾಗದಲ್ಲಿ ಕೆತ್ತನೆ ಮಾಡಿ, ಶುಕ್ರವಾರದಂದು ಮಾರಿಯ ತವರು ಮನೆ ಎಂದೇ ಕರೆಯುವ ಮಣ್ಕುಳಿಯ ಮಾರಿ ಗದ್ದುಗೆಗೆ ತೆಗೆದುಕೊಂಡು ಬರಲಾಗುತ್ತದೆ. ಅಲ್ಲಿಂದ ಇನ್ನೊಂದು ಮಂಗಳವಾರದವರೆಗೆ ಅಂದರೆ ಜುಲೈ ೩೦ರವರೆಗೆ ದೇಹದ ಅಂಗಾಗಗಳನ್ನು ರಚಿಸಿ ಪೂರ್ಣಗೊಳಿಸಲಾಗುತ್ತದೆ.
ಇದನ್ನೂ ಓದಿ : ಪಟ್ಟಣ ಪಂಚಾಯತ ಕಚೇರಿಗೆ ಲೋಕಾಯುಕ್ತ ಪೊಲೀಸರ ದಾಳಿ
ಪೂರ್ಣಗೊಂಡ ಮೂರ್ತಿಗೆ ಜುಲೈ ೩೦ ಮಂಗಳವಾರ ಸಾಯಂಕಾಲ ಮಾರಿಗೆ ಬಣ್ಣ ಬಳಿದು, ಬಳೆ, ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ದೇವಿಗೆ ತೊಡಿಸಲಾಗುತ್ತದೆ. ಅಂದು ಮಂಗಳವಾರ ರಾತ್ರಿ ಮಾರಿಮನೆ ಮುಖ್ಯಸ್ಥರ ಮನೆಯವರಿಂದ ಹಾಗೂ ಊರಿನವರಿಂದ ಪ್ರಥಮ ಪೂಜೆ ನೆರವೇರಲಿದೆ.
ಜುಲೈ ೩೧ರ ಬುಧವಾರ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಮಾರಿಯನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ಮಾರಿಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಎರಡು ದಿವಸ ನಡೆಯುವ ಈ ಜಾತ್ರೆಯಲ್ಲಿ ಮೊದಲನೇ ದಿವಸ ಪರ ಊರಿನವರು ಸೇವೆ ಸಲ್ಲಿಸಿ ಹಬ್ಬ ಆಚರಿಸಿದರೆ, ಎರಡನೇ ದಿವಸವಾದ ಗುರುವಾರ ಸ್ಥಳೀಯರು ಸೇವೆ ಸಲ್ಲಿಸಿ ಹಬ್ಬ ಆಚರಿಸುವುದು ಪ್ರತೀತಿ.
ಇದನ್ನೂ ಓದಿ : ಪ್ರಯಾಣಿಕನ ಮೇಲೆ ತಂಡದಿಂದ ಹಲ್ಲೆ; ಬಸ್ ತಡೆದು ಕುಟುಂಬಸ್ಥರಿಂದ ಆಕ್ರೋಶ
ಆಗಸ್ಟ್ ೧ರಂದು ಗುರುವಾರ ಸಂಜೆ ಮಾರಿ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಸುಮಾರು ೬ ಕಿ.ಮೀ. ದೂರದ ಜಾಲಿ ಸಮುದ್ರ ತೀರಕ್ಕೆ ಹೊತ್ತೊಯ್ದು ಧಾರ್ಮಿಕ ವಿಧಿವಿಧಾನದನ್ವಯ ಪೂಜೆ ಸಲ್ಲಿಸಿ ಕೊನೆಯಲ್ಲಿ ವಿಗ್ರಹವನ್ನು ಛಿದ್ರಗೊಳಿಸಿ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಮಾರಿ ಜಾತ್ರೆಗೆ ತೆರೆ ಬೀಳಲಿದೆ.