ಭಟ್ಕಳ: ಭಟ್ಕಳದಲ್ಲಿ ಗುಡುಗು, ಮಿಂಚು ಸಹಿತ ಒಂದು ಗಂಟೆ ಕಾಲ ಭರ್ಜರಿ ಮಳೆ ಸುರಿದಿದೆ. ಕೆಲವು ಮನೆಗಳೊಳಗೆ ನುಗ್ಗಿದ ಮಳೆ ನೀರು ಅಪಾರ ಹಾನಿ ಉಂಟುಮಾಡಿದೆ.
ಇದನ್ನೂ ಓದಿ : ಬಾಯ್ಲರ್ ಸ್ಫೋಟ – ಮಹಿಳೆ ಸಾವು, ಇಬ್ಬರು ಗಂಭೀರ
ಮಂಗಳವಾರ ಮಧ್ಯಾಹ್ನದಿಂದ ತಾಲೂಕಿನಾದ್ಯಂತ ಜಿಟಿಜಿಟಿ ಮಳೆಯಾಗಿ ಕೊಂಚ ಬಿಡುವು ನೀಡಿತ್ತು. ಬಳಿಕ ಸಂಜೆ ವೇಳೆಗೆ ಗುಡುಗು ಮಿಂಚು ಸಹಿತ ಒಂದು ಗಂಟೆ ಕಾಲ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಯಿತು.
ಭಟ್ಕಳ ಶಂಸುದ್ದಿನ್ ಸರ್ಕಲ್ ಸಮೀಪ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂದಿನಂತೆ ನೀರು ನಿಂತಿತ್ತು.
ಅವೈಜ್ಞಾನಿಕ ಒಳ ಚರಂಡಿ ಕಾಮಗಾರಿಯ ಹಿನ್ನೆಲೆಯಲ್ಲಿ ಭಟ್ಕಳ ಹನುಮಾನ್ ನಗರದ ದಿಗಂಬರ್ ಶೇಟ್ ಹಾಗೂ ಮಗ್ದುಂ ಕಾಲೋನಿಯ ಮನೆಗಳೊಳಗೆ ನುಗ್ಗಿದ ಮಳೆ ನೀರು ತೊಂದರೆ ಉಂಟುಮಾಡಿದೆ. ಅಕ್ಕಿ, ಬಟ್ಟೆ ಹಾಗೂ ಇತರ ವಸ್ತುಗಳು ಒದ್ದೆಯಾಗಿ ಹಾನಿ ಉಂಟಾಗಿದೆ. ಚರಂಡಿಯ ಕೆಸರು ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಮನೆಯ ಸ್ವಚ್ಛತೆಗೆ ನಿವಾಸಿಗಳು ಹರಸಾಹಸ ಪಡಬೇಕಾಯಿತು.
ಮನೆಯಲ್ಲಿ ನೀರು ನುಗ್ಗಿದ ವೇಳೆ ಪುಟ್ಟ ಕಂದಮ್ಮನನ್ನು ಕುರ್ಚಿಯ ಮೇಲೆ ಕುಳ್ಳರಿಸಿ ಮನೆಯ ಸಾಮಗ್ರಿಗಳನ್ನು ನೀರಿನಿಂದ ರಕ್ಷಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಎಲ್ಲರ ಮನಕಲುಕುವಂತಿತ್ತು.
ಕಳೆದ ವರ್ಷ ಕೂಡ ಮಳೆಗಾಲದಲ್ಲಿ ಭಟ್ಕಳ ತಾಲೂಕು ನಲುಗಿತ್ತು. ಇಂದು ಕೇವಲ ಒಂದು ಗಂಟೆ ಸುರಿದ ಮೊದಲ ಮಳೆಗೆ ಈ ರೀತಿ ಅವಾಂತರ ನಡೆದಿದೆ. ಮುಂದೆ ಬರುವ ಮಳೆಗೆ ತಾಲೂಕು ಆಡಳಿತ ಹಾಗೂ ಪುರಸಭೆ ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ರಸ್ತೆಯಲ್ಲಿ ಬಿದ್ದ ಮರ :
ತಾಲೂಕಿನ ಯಲ್ವಡಿಕವೂರ ರಸ್ತೆಯಲ್ಲಿ ಮರವೊಂದು ಮುರಿದು ಬಿದ್ದಿದೆ. ಜತೆಗೆ ವಿದ್ಯುತ್ ತಂತಿ ಕೂಡ ತುಂಡಾಗಿ ರಸ್ತೆ ಮೇಲೆ ಬಿದ್ದಿದೆ. ಇದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಎರಡೂ ಬದಿಯಲ್ಲಿ ೨೦ಕ್ಕೂ ಹೆಚ್ಚು ವಾಹನಗಳು ನಿಂತಿದ್ದು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಕತ್ತಲಲ್ಲಿ ಭಟ್ಕಳ :
ಮಳೆ ಆರಂಭವಾಗುತ್ತಿದ್ದಂತೆ ಭಟ್ಕಳದಲ್ಲಿ ವಿದ್ಯುತ್ ಕೈಕೊಟ್ಟಿದೆ. ರಾತ್ರಿ ೧೦.೩೦ ಗಂಟೆಯಾದರೂ ವಿದ್ಯುತ್ ಪೂರೈಕೆ ಪುನಾರಂಭಗೊಂಡಿಲ್ಲ. ರಾತ್ರಿ ೧೧ ಗಂಟೆ ನಂತರ ವಿದ್ಯುತ್ ಪೂರೈಕೆ ಆಗಲಿದೆ ಎಂದುಬಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.