ಭಟ್ಕಳ: ಇತ್ತೀಚೆಗೆ ನಿಧನರಾದ ಮಣ್ಕುಳಿ ಹನುಮಂತ ಹಾಗೂ ಗೋಪಾಲಕೃಷ್ಣ, ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಗಳ ಮೊಕ್ತೇಸರ, ಧಾರ್ಮಿಕ ಮುಖಂಡ ಮಹಾಬಲೇಶ್ವರ ಶೆಟ್ಟಿ ಅವರಿಗೆ ನುಡಿ ನಮನ ಕಾರ್ಯಕ್ರಮ ಇಲ್ಲಿನ ಮಾರಿಕಾಂಬಾ ಸಭಾಭವನದಲ್ಲಿ ನಡೆಯಿತು.
ಇದನ್ನೂ ಓದಿ : ಅಡಕೆ ಕಳ್ಳತನ : ಭಟ್ಕಳದ ಇಬ್ಬರು ಸಹಿತ ಮೂವರ ಬಂಧನ
ಸಮಾರಂಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ, ರಘುವೀರ ಬಾಳಗಿ, ಮಹಾಬಲೇಶ್ವರ ಶೆಟ್ಟಿಯವರು ಸರ್ವ ಸಮಾಜದಲ್ಲಿಯೂ ಗೌರವಿಸಲ್ಪಡುವ ವ್ಯಕ್ತಿಯಾಗಿದ್ದರು. ಭಟ್ಕಳದ ಮಾರಿಕಾಂಬಾ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳ ನಿರ್ಮಾಣದಲ್ಲಿ ಅವರ ಪಾತ್ರ ಹಿರಿದು ಎಂದು ಹೇಳಿದರು. ತಮ್ಮ ಹಾಗೂ ಮಹಾಬಲೇಶ್ವರ ಶೆಟ್ಟಿ ಅವರ ಒಡನಾಟಗಳನ್ನು ಮೆಲಕು ಹಾಕಿದರು.
ನಿರಂತರ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ವೆಬ್ಸೈಟ್ ಪೇಜ್ ಫಾಲೋವ್ ಮಾಡಿ.
ಭಟ್ಕಳ ಅರ್ಬನ್ ಬ್ಯಾಂಕಿನ ನಿರ್ದೇಶಕ, ನಾಮಧಾರಿ ಸಮಾಜದ ಪ್ರಮುಖ ಶ್ರೀಧರ ನಾಯ್ಕ ಆಸರಕೇರಿ ಮಾತನಾಡಿ, ತಮ್ಮ ಜೀವನದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದ ಮಹಾಬಲೇಶ್ವರ ಶೆಟ್ಟಿಯವರು ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಕಾರ್ಯವನ್ನು ಮಾಡಿ ಸಮಾಜಮುಖಿಯಾಗಿ ಹೊರ ಹೊಮ್ಮಿದ್ದರು. ಅವರ ಧಾರ್ಮಿಕ ಕಾರ್ಯ, ಸಾಮಾಜಿಕ ಕಾರ್ಯ ಹಾಗೂ ಜೀವನದಲ್ಲಿಯ ಶಿಸ್ತು ಶಾಶ್ವತವಾಗಿ ನಮ್ಮೊಂದಿಗೆ ಇರುತ್ತದೆ ಎಂದರು.
ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿ, ಮಹಾಬಲೇಶ್ವರ ಶೆಟ್ಟಿಯವರು ಕೇವಲ ಒಂದು ಸಮಾಜದ ವ್ಯಕ್ತಿಯಾಗಿರಲಿಲ್ಲ. ಅವರು ಎಲ್ಲರ ಆಸ್ತಿಯಾಗಿದ್ದವರು. ದೇವಸ್ಥಾನಗಳ ಜೀರ್ಣೋದ್ಧಾರ, ಅಭಿವೃದ್ಧಿ ಕಾರ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ತಮ್ಮ ಶಿಸ್ತುಬದ್ದ ಜೀವನದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿ ಅಜರಾಮರರಾದ ಅವರನ್ನು ಕೇವಲ ಕುಟುಂಬ, ಸಮಾಜ ಮಾತ್ರವಲ್ಲ ಇಡೀ ತಾಲೂಕಿನ ಜನತೆ ಸದಾ ಕಾಲ ನೆನಪಿಡುವಂತೆ ಮಾಡಿದ್ದಾರೆ. ಅವರ ಅಗಲಿಕೆ ಇಂದು ಕುಟುಂಬಕ್ಕಷ್ಟೇ ಅಲ್ಲ, ಇಡೀ ಸಮಾಜಕ್ಕೆ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಹಾರೈಸಿದರು.
ಮಹಾಬಲೇಶ್ವರ ಶೆಟ್ಟಿ ಅವರ ಪುತ್ರ, ಮಣ್ಕುಳಿ ಹನುಮಂತ ಮತ್ತು ಶ್ರೀ ಲಕ್ಷಿö್ಮÃನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಷ ಎಂ. ಶೆಟ್ಟಿ ಮಾತನಾಡಿ, ತಮ್ಮ ಕುಟುಂಬದಲ್ಲಿ ಅತ್ಯಂತ ಶಿಸ್ತು ಪಾಲನೆಯಲ್ಲಿ ತಂದೆಯವರ ಪಾತ್ರ ಬಹಳ ಮುಖ್ಯವಾಗಿದೆ. ಅಂದಿನ ದಿನಗಳಲ್ಲಿಯೇ ಎಸ್.ಎಸ್.ಸಿ. ಮುಗಿಸಿದ ಅವರು ವಾಣಿಜ್ಯ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದರೂ ಸಹ ಊರಿನಲ್ಲಿಯೇ ಸೇವೆ ಸಲ್ಲಿಸಬೇಕು ಎನ್ನುವ ಹಂಬಲದಿಂದ ಪುರಸಭೆಯನ್ನು ಸೇರಿಕೊಂಡರು. ಸುಧೀರ್ಘ ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನಂತರವೂ ಖಾಸಗಿಯಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಶಂಕರ ಶೆಟ್ಟಿ ಮಾತನಾಡಿ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು.
ಸಮಾರಂಭದಲ್ಲಿ ಹಿರಿಯರಾದ ಮಣ್ಕುಳಿ ಶ್ರೀ ಮಾರುತಿ ಹಾಗೂ ಶ್ರೀ ಲಕ್ಷ್ಮಿನಾರಾಯಣ ಮತ್ತು ಮಣ್ಕುಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ವಿಠಲ ಪ್ರಭು, ಎ.ಎನ್.ಪೈ, ಸುರೇಶ ಆಚಾರ್ಯ, ಗಜಾನನ ಶೆಟ್ಟಿ, ರಾಧಾ ಶೆಟ್ಟಿ ಮಾತನಾಡಿದರು. ಸಮಾಜದ ಪ್ರಮುಖರಾದ ಪ್ರಕಾಶ ಶಿರಾಲಿ ಸ್ವಾಗತಿಸಿದರು. ಮನೋಜ ಶೆಟ್ಟಿ ನಿರೂಪಿಸಿ, ವಂದಿಸಿದರು.