ಭಟ್ಕಳ: ನಾಮಧಾರಿ ಸಮಾಜದ ಗುರುಮಠ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಅತಿಥಿಗೃಹ ನಿರ್ಮಾಣ: ಬ್ರಹ್ಮಾನಂದ ಸರಸ್ವತಿ ಶ್ರೀ
ಮೊದಲ ದಿನ ಬುಧವಾರ ನಾಮಧಾರಿ ಸಮಾಜದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಗುರುಮಠ ಶ್ರೀ ನಿಚ್ಚಲಮಕ್ಕಿ ತಿರುಮಲ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಂಗದ ವರ್ಧಂತಿ ಮಹೋತ್ಸವ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಿತು. ವರ್ಧಂತಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ದೇವಸ್ಥಾನದ ಮುಖ್ಯ ಅರ್ಚಕ ವಿನಾಯಕ ಭಟ್ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹೋಮ ಹವನ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಮಹಾಪೂಜೆ ನಂತರ ಪ್ರಸಾದ ವಿತರಣೆ ನಡೆಯಿತು.
ಇದನ್ನೂ ನೋಡಿ: https://fb.watch/qhIALT9OYi/?mibextid=Nif5oz
ಗುರುವಾರದಂದು ಸಂಜೆ ಹರಿ ನಾಮಸ್ಮರಣೆ ಕುಣಿತ ನಡೆಯಿತು. ಈ ಸಂದರ್ಭ ಪದ್ಮಾವತಿ ಅಮ್ಮನವರ ಪಾಲಕಿ ಬರಮಾಡಿಕೊಳ್ಳಲಾಯಿತು.
ಶುಕ್ರವಾರದಂದು ಧರ್ಮಸ್ಥಳದ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಪಾಲಕಿ ಮಹೋತ್ಸವ ನಂತರ ಮಧ್ಯಾಹ್ನ ಬೃಹತ್ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಮುಂಜಾನೆ ಗಣಪತಿ ಪೂಜೆ, ವಿಶ್ವಕ್ಸೇನಾರಾಧನೆ, ಪುಣ್ಯಹವಾಚನ, ಮಹಾ ಸಂಕಲ್ಪ, ಕಳಶಾರಾಧನೆ, ಗಣಹೋಮ ನಡೆಯಿತು.ಈ ಸಂದರ್ಭ ಶ್ರೀ ವೆಂಕಟರಮಣ ದೇವರಿಗೆ ಬಂಗಾರದ ವರದ ಹಸ್ತ ಹಾಗೂ ಅಭಯ ಹಸ್ತಗಳನ್ನು ದೇವಸ್ಥಾನ ಆಡಳಿತ ಕಮಿಟಿಯಿಂದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಅಮೃತ ಹಸ್ತದಿಂದ ಶ್ರೀದೇವರಿಗೆ ಸಮರ್ಪಿಸಲಾಯಿತು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಗುರುಗಳಿಂದ ಆಶೀರ್ವಚನ, ಮಂತ್ರಾಕ್ಷತೆ, ಶ್ರೀ ದೇವರಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ನಡೆದ ಶ್ರೀ ದೇವರ ಪಾಲಕಿ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಿತು.
ಶನಿವಾರ ಬೆಳಿಗ್ಗೆ ಶ್ರೀ ದೇವರಿಗೆ ಓಕಳಿ ಸೇವೆ (ಅವಭ್ರತ ಸ್ನಾನ), ಮಧ್ಯಾಹ್ನ ಫಲಾವಳಿ ವಸ್ತುಗಳ ವಿಲೇವಾರಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ತ್ರಿನೇತ್ರ ಕಲಾತಂಡ ಉಪ್ಲಾಡಿ ಇವರಿಂದ ಸಾಮಾಜಿಕ ನಾಟಕ ‘ಗಗ್ಗರ ದೈವದನಿ’ ಪ್ರದರ್ಶನ ನಡೆಯಿತು.
ವರ್ಧಂತಿ ಮಹೋತ್ಸವ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಅರುಣಕುಮಾರ ನಾಯ್ಕ ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಪ್ರಮುಖರಾದ ಡಿ.ಎಲ್. ನಾಯ್ಕ, ಎಂ. ಕೆ.ನಾಯ್ಕ, ಕೆ.ಆರ್. ನಾಯ್ಕ, ಪ್ರಕಾಶ ನಾಯ್ಕ, ಶ್ರೀಧರ ನಾಯ್ಕ, ಮಹಾಬಲೇಶ್ವರ ನಾಯ್ಕ, ಶಿವರಾಮ ನಾಯ್ಕ, ಆಡಳಿತ ಮಂಡಳಿಯ ಸರ್ವ ಸದಸ್ಯರು, ಭಕ್ತರು ಭಾಗಿಯಾಗಿದ್ದರು.