ಕುಮಟಾ: ಓಟಿಗಾಗಿ ಅಲ್ಪಸಂಖ್ಯಾತರನ್ನು ಇನ್ನಿಲ್ಲದಂತೆ ಓಲೈಸುವುದು ಕಾಂಗ್ರೆಸ್‌ನ ಸಿದ್ದಾಂತವಾಗಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತರು ಹಾಗೂ ಇನ್ನುಳಿದ ಹಿಂದುಳಿದ ವರ್ಗದವರಿಗಾಗಿ ಜಾರಿಗೊಳಿಸಿರುವ ಒಬಿಸಿ ಹಾಗೂ ಎಸ್.ಸಿ-ಎಸ್.ಟಿ ಮೀಸಲಾತಿಯಲ್ಲಿ ಮುಸ್ಲಿಂ ಹಾಗು ಕ್ರಿಶ್ಚಿಯನ್‌ ರಿಗೆ ಮೀಸಲಾತಿ ನೀಡುತ್ತೇನೆ ಎಂದಿರುವುದು ಹಾಗೂ ಅಸ್ತಿ ಹಂಚಿಕೆ ಮಾಡುವುದಾಗಿ ಕಾಂಗ್ರೆಸ್ ಹೇಳಿರುವುದನ್ನು ನಮ್ಮ ಪಕ್ಷ ವಿರೋಧಿಸುತ್ತದೆ ಎಂದರು.

ಇದನ್ನೂ ಓದಿ : ಕರ್ನಾಟಕದ ಬೆಸ್ಟ್ ಡಾನ್ಸರ್ ಸ್ಪರ್ಧೆಗೆ ಋತಿಕಾ ಮಹಾಲೆ ಆಯ್ಕೆ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಮೊದಲಿನಿಂದಲೂ ಬಿಜೆಪಿ ಕ್ಷೇತ್ರವಾಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ನನ್ನ ಪರಿಚಯ ಎಲ್ಲರಿಗೂ ಇದ್ದರಿಂದ ಹೊಸದಾಗಿ ಪರಿಚಯ ಮಾಡಿಕೊಳ್ಳಬೇಕಾದದ್ದಿಲ್ಲ. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕೆಂಬ ಜನರ ಬಯಕೆ ನನ್ನ ಗೆಲುವಿಗೆ ಕಾರಣವಾಗಲಿದೆ. ಮೊನ್ನೆ ಪ್ರಧಾನಿ ಮೋದಿ ಅವರು ಈ ಜೆಲ್ಲೆಯಲ್ಲಿ ನನ್ನ ಹಾಗೂ ಪಕ್ಷದ ಪರವಾಗಿ ಪ್ರಚಾರ ನಡೆಸಿದ ಮೇಲೆ ನನ್ನ ಮತ್ತು ನನ್ನ ಪಕ್ಷ ಗೆಲುವಿನ ಮತಗಳ ಅಂತದ ಹೆಚ್ಚುವುದರ ಜೊತೆಗೆ ದಾಖಲೆಯ ಅಂತರದಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ನುಡಿದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ೫೦ ಸೀಟ್ ಕೂಡ ಗೆಲ್ಲದೆ ಅಸಹನೀಯ ಸೋಲು ಅನುಭವಿಸಲಿದೆ. ಇದರಿಂದ ಹತಾಶರಾಗಿರುವ ಕಾಂಗ್ರೆಸ್‌ನವರು ಗ್ಯಾರಂಟಿಯನ್ನು ಘೋಷಿಸಿ ಜನರನ್ನು ಮರಳು ಮಾಡಲು ಹೊರಟಿದ್ದಾರೆ. ಅಲ್ಪಸಂಖ್ಯಾತರ ಒಲೈಕೆ ಮಾಡುವ ಮೂಲಕ ಈ ಸಮುದಾಯದವರು ಸಮಾಜದ ಮುಖ್ಯವಾಹಿನಿಯಲ್ಲಿಲ್ಲ ಎನ್ನುತ್ತ ಅಲ್ಪಸಂಖ್ಯಾತರನ್ನು ಅವಮಾನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪರೇಶ ಮೇಸ್ತ ಸಾವು ನಡೆದ ದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಈ ಜಿಲ್ಲೆಯಲ್ಲೇ ಇದ್ದರು. ಈ ಸಾವಿನಿಂದ ಜನರಲ್ಲಿ ಉಂಟಾದ ಭಾವನೆಯನ್ನು ಹತ್ತಿಕ್ಕಲು ಪೋಲಿಸರನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿದ್ದರು. ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಂಜಲಿ ಲಿಂಬಾಳ್ಕರ ಅವರ ಪತಿ, ಪೊಲೀಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಆ ಸಮಯದಲ್ಲಿ ಕಾಂಗ್ರೆಸ್‌ನ ಕೈಗೊಂಬೆಯಾಗಿದ್ದರು. ಅಮಾಯಕರ ಮೇಲೆ ಕೇಸ್ ಹಾಕಿಸಿ ವಿನಾಕಾರಣ ಕೋರ್ಟ್ ಅಲೆಯುವಂತೆ ಮಾಡಿದರು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

ಪರೇಶ ಮೇಸ್ತ ಪ್ರಕರಣದಲ್ಲಿ ನನ್ನ ಮೇಲೆ ಏಕೆ ಪೊಲೀಸರು ಕೇಸ್ ಹಾಕಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಲಿಂಬಾಳ್ಕರ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಕಾಗೇರಿ, ಪರೇಶ ಮೇಸ್ತ ಸಾವನ್ನು ಖಂಡಿಸಿ ನಾನು ಶಿರಸಿಯಲ್ಲಿ ಪ್ರತಿಭಟನೆ ನಡೆಸಿದ್ದೆ. ಆದರೆ ಕೇಸ್ ಮಾಡಬೇಡಿ ಎಂದು ನಾನೇನೂ ಪೊಲೀಸರಿಗೆ ಹೇಳಿಲ್ಲ. ನಾನು ನ್ಯಾಯಬದ್ದವಾಗಿ ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರಿಗೆ ಕೇಸ್ ಹಾಕಲು ಸಾಧ್ಯವಾಗಿರಲಿಕ್ಕಿಲ್ಲ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾಗೇರಿ, ನಮ್ಮ ಪಕ್ಷದ ಶಾಸಕರಾಗಿರುವ ಶಿವರಾಮ ಹೆಬ್ಬಾರ ಅವರನ್ನು ಪಕ್ಷದ ಕಾರ್ಯಕ್ಕೆ ಬರುವಂತೆ ಹಲವು ಸಲ ಆಹ್ನಾನಿಸಲಾಗಿದೆ. ಪ್ರಧಾನಿ ಮೋದಿ ಅವರು ಈ ಜಿಲ್ಲೆಗೆ ಬಂದರೂ ಹೆಬ್ಬಾರ ಅವರು ಬರದಿರುವ ವರ್ತನೆಯನ್ನು ನೋಡಿರುವ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆಕ್ರೋಶ ಈಗ ಬನವಾಸಿ ಹಾಗೂ ಇನ್ನಿತರ ಕಡೆ ಬಲವಾಗಿ ವ್ಯಕ್ತವಾಗಿದೆ. ಮತದಾರರನ್ನು ಕೊಂಡುಕೊಳ್ಳಬಹುದು ಎಂದು ಶಿವರಾಮ ಹೆಬ್ಬಾರ ಅಂದುಕೊಂಡಿದ್ದರೆ ಅದು ಅವರು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಅಕ್ರೋಶದಿಂದ ಹೇಳಿದರು.

ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿ, ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತಮ ವ್ಯಕ್ತಿಯಾಗಿದೆ. ಈ ವ್ಯಕ್ತಿ ನಮಗೆ ಅಭ್ಯರ್ಥಿಯಾಗಿ ಸಿಕ್ಕಿರುವುದು ನಮ್ಮ ಸೌಭಾಗ್ಯ. ಈ ಚುನಾವಣೆಯಲ್ಲಿ ಕುಮಟಾ ಕ್ಷೇತ್ರದಲ್ಲಿ ನಮ್ಮ ಪಕ್ಷ ಹಾಗೂ ಬಿಜೆಪಿ ಎರಡೂ ಸೇರಿಕೊಂಡು ಅತಿ ಹೆಚ್ಚಿನ ಮತ ದೊರೆಯುವಂತೆ ಮಾಡುತ್ತೇವೆ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪರೇಶ ಮೇಸ್ತನ ಕೊಲೆಯಾಗಿರುವುದು ಹೊನ್ನಾವರದಲ್ಲಿ, ಕಾಗೇರಿ ಅವರು ಆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ್ದು ಶಿರಸಿಯಲ್ಲಿ ಎಂಬುದನ್ನು ತಿಳಿದುಕೊಳ್ಳದೆ ಕಾಂಗ್ರೆಸ್ ಅಭ್ಯರ್ಥಿ ಬೇಕಾಬಿಟ್ಟಿಯಾಗಿ ಮಾತನಾಡಬಾರದು.
ಪರೇಶ ಮೇಸ್ತನ ಕೊಲೆಯನ್ನು ಪ್ರತಿಭಟಿಸಿ ಕುಮಟಾದಲ್ಲಿ ಐಜಿಪಿ ಹೇಮಂತ ನಿಂಬಾಳ್ಕರ ಅವರ ಸರ್ಕಾರಿ ಕಾರನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದರು ಎಂದ ಮೇಲೆ ಹೇಮಂತ ಲಿಂಬಾಳ್ಕರ್ ಪೊಲೀಸ್ ಅಧಿಕಾರಿಯಾಗಲು ಎಷ್ಟು ದುರ್ಬಲರು ಎಂಬುದು ಸಾಬೀತಾಗುತ್ತದೆ. ನಾನು ಈ ಕ್ಷೇತ್ರದ ಶಾಸಕನಾಗಿದ್ದರೂ ನಮ್ಮ ಪಕ್ಷ ಹಾಗೂ ಜೆಡಿಎಸ್ ಮದ್ಯ ಏನಾದರು ಭಿನ್ನಾಭಿಪ್ರಾಯವಿದ್ದರೆ ನಾನೇ ಖುದ್ದಾಗಿ ಅದನ್ನು ನಿವಾರಿಸುವುದರ ಜೊತೆಗೆ ಜೆಡಿಎಸ್ ಕಾರ್ಯಕರ್ತರ ಕೆಲಸವನ್ನೆಲ್ಲಾ ಮಾಡಿಕೊಡುತ್ತೇನೆ. ಒಟ್ಟಿನಲ್ಲಿ ಈ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದಾಖಲೆಯ ಮತಗಳ ಅಂತರದಿಂದ ಗೆಲ್ಲಬೇಕು ಅಷ್ಟೇ ಎಂದರು.

ಈ ಹಿಂದೆ ತಮ್ಮ ಪತ್ನಿಗೆ ಕಾಂಗ್ರೆಸ್ ಟಿಕೇಟ್ ಕೊಡಿಸಲು ಪೊಲೀಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಯತ್ನಿಸಿದ್ದರು ಎಂಬ ವಿಷಯ ಬಹಿರಂಗಗೊಂಡಿದೆ. ಈಗ ಅವರ ಪತ್ನಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಪತ್ನಿಯನ್ನು ಗೆಲ್ಲಿಸಲು ಇಲ್ಲಿರುವ ಅಧಿಕಾರಿಗಳಿಗೆ ಅವರು ನಾನಾ ರೀತಿಯ ಆಮಿಷ ಒಡ್ಡುತ್ತಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಹಾಗಾಗಿ ಚುನಾವಣಾ ಆಯೋಗ ಹೇಮಂತ ನಿಂಬಾಳ್ಕರ್ ಅವರ ಚಟುವಟಕೆಗಳ ಮೇಲೆ ಗಮನ ನೀಡಬೇಕು.
ವಿಶ್ವೇಶರ ಹೆಗಡೆ ಕಾಗೇರಿ, ಬಿಜೆಪಿ ಅಭ್ಯರ್ಥಿ

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಘಟಕಾಧ್ಯಕ್ಷ ಸಿ.ಜಿ.ಹೆಗಡೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್.ಹೆಗಡೆ, ಬಿಜೆಪಿ ಪ್ರಮುಖರಾದ ವೆಂಕಟೇಶ ನಾಯಕ, ಮಂಡಲ ಅಧ್ಯಕ್ಷ ಜಿ.ಐ.ಹೆಗಡೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಬಿಜೆಪಿ ಜಿಲ್ಲಾ ಮುಖಂಡರಾದ ಡಾ.ಜಿ.ಜಿ.ಹೆಗಡೆ, ಗಜಾನನ ಗುನಗಾ, ಜೆಡಿಎಸ್‌ನ ಕೆ.ಜಿ.ಭಟ್ಟ, ಟಿ.ಟಿ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.