ಭಟ್ಕಳ: ಭಟ್ಕಳದ ಐತಿಹಾಸಿಕ ಶರಾಬ್ಬಿ ನದಿ ಪುರಸಭೆಯ ಒಳಚರಂಡಿ ಸಂಸ್ಕರಣ ಘಟಕದಿಂದಾಗಿ ಕಲುಷಿತಗೊಂಡಿದ್ದು, ಒಂದು ತಿಂಗಳ ಒಳಗೆ ಒಳಚರಂಡಿ ಘಟಕವನ್ನು ಸ್ಥಳಾಂತರಿಸಬೇಕು ಮತ್ತು ಜೀವನದಿಯಾಗಿರುವ ಶರಾಬ್ಬಿ ನದಿಯಲ್ಲಿ ತುಂಬಿರುವ ಹೂಳನ್ನು ತೆಗೆದು ಅದನ್ನು ಸ್ವಚ್ಚಗೊಳಿಸುವಂತೆ ಆಗ್ರಹಿಸಿ ಶನಿವಾರ ಶರಾಬ್ಬಿ ನದಿ ಹೋರಾಟ ಸಮಿತಿ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತು.
ಈ ವಿಡಿಯೋ ನೋಡಿ : ಶರಾಬ್ಬಿ ನದಿ ಹೂಳೆತ್ತಲು ಆಗ್ರಹಿಸಿ ಭಟ್ಕಳದಲ್ಲಿ ಪ್ರತಿಭಟನೆ https://fb.watch/qzcxdgIZAp/?mibextid=Nif5oz
ಜಾಮಿಯಾ ರಸ್ತೆಯ ಬರ್ನಿಮಟ್ಟಿಯಿಂದ ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ನೂರಾರು ಪ್ರತಿಭಟನಾಕಾರರು, ಮೊದಲು ಹಳೆ ಬಸ್ ನಿಲ್ದಾಣದ ಬಳಿ ಇರುವ ಪುರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶರಾಬ್ಬಿ ನದಿಯ ಗತವೈಭವ ಮರಳಿ ತನ್ನಿ, ಶರಾಬ್ಬಿ ನದಿಯನ್ನು ರಕ್ಷಿಸಿ ಎಂಬ ಘೋಷಣೆಗಳನ್ನು ಕೂಗುತ್ತ ಫಲಕಗಳನ್ನು ಪ್ರದರ್ಶಿಸಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಶಮ್ಸುದ್ದೀನ್ ವೃತ್ತದಿಂದ ಮಿನಿ ವಿಧಾನಸೌಧದ ಬಳಿ ಸೇರಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಂಝಿಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಾಗೂ ತಂಝಿಮ್ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಹನೀಫ್ ಶಬಾಬ್ ಗತವೈಭವ ಹೊಂದಿರುವ ಶರಾಬ್ಬಿ ನದಿ ಪುರಸಭೆಯ ಅವೈಜ್ಞಾನಿಕ ನಿರ್ಧಾರದಿಂದಾಗಿ ಇಂದು ಚರಂಡಿಯಾಗಿ ಪರಿವರ್ತನೆಯಾಗಿದೆ. ವರ್ಷಪೂರ್ತಿ ತುಂಬಿ ಹರಿಯುವ ಈ ನದಿ ಇಂದು ಒಣಗಿ ಹೋಗಿದ್ದು ಇದರ ರಕ್ಷಣೆಯ ಹೊಣೆ ಸರ್ಕಾರ ಮತ್ತು ಸಾರ್ವಜನಿಕರದ್ದಾಗಿದೆ ಎಂದರು.
ಭಟ್ಕಳದ ಜೀವನದಿಯಾಗಿರುವ ಶರಾಬ್ಬಿ ನದಿ ಅವಸಾನದ ಅಂಚಿನಲ್ಲಿದೆ. ಒಂದು ಕಾಲದಲ್ಲಿ ಗತವೈಭವನ್ನು ಮೆರೆದ ಈ ನದಿ ಈಗ ಒಳಚರಂಡಿ ನೀರು ಶೇಖರಣಾ ಘಟಕವಾಗಿ ಮಾರ್ಪಟ್ಟಿದೆ. ಈ ಭಾಗದ ಜನರ ಜೀವನಕ್ಕೆ ಕುತ್ತನ್ನು ತಂದೆರಗಿದೆ. ಇದಕ್ಕೆ ಮುಖ್ಯ ಕಾರಣ ಗೌಸಿಯಾ ಸ್ಟ್ರೀಟ್ ನಲ್ಲಿ ನಿರ್ಮಾಣವಾಗಿರುವ ಒಳಚರಂಡಿ ಘಟಕ. ಇದರಿಂದಾಗಿ ಶರಾಬ್ಬಿ ನದಿಗೆ ನಿರಂತರವಾಗಿ ಕಲುಷಿತ ನೀರು ಶೇಖರಣೆಗೊಳ್ಳುತ್ತಿದೆ. ಆದ್ದರಿಂದ ಶರಾಬ್ಬಿ ನದಿಯನ್ನು ಸ್ವಚ್ಚಗೊಳಿಸುವುದರೊಂದಿಗೆ ನದಿ ಕಲುಷಿತಗೊಳ್ಳಲು ಮೂಲ ಕಾರಣವಾಗಿರುವ ಒಳಚರಂಡಿ ಸಂಸ್ಕರಣ ಘಟಕವನ್ನು ಕೂಡಲೇ ಸ್ಥಳಾಂತರಿಸಿ ಈ ಭಾಗದ ಜನರಿಗೆ ನೆಮ್ಮದಿಯ ಬದುಕು ಬದುಕಲು ಅವಕಾಶ ಮಾಡಿಕೊಡಬೇಕೆಂದು ಡಾ. ಶಬಾಬ್ ಆಗ್ರಹಿಸಿದರು.
ತಂಝಿಮ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಶರಾಬ್ಬಿ ಹೊಳೆ ಈಗ ಸಂಪೂರ್ಣವಾಗಿ ಹೂಳು ತುಂಬಿ ಬತ್ತಿಹೋಗಿದ್ದು ಕಸಕಡ್ಡಿ ಕೆಸರು ತುಂಬಿ ಕಲುಷಿತಗೊಂಡಿದೆ. ಇದರಿಂದಾಗಿ ಮಳೆಗಾಲದಲ್ಲಿ ನೆರೆಯ ಸ್ಥಿತಿ ನಿರ್ಮಾಣವಾಗಿ ಹೊಳೆ ದಂಡೆಯ ನಿವಾಸಿಗಳಲ್ಲಿ ಆತಂಕದ ಸ್ಥಿತಿ ಉಂಟಾಗಿದೆ ಎಂದ ಅವರು, ಶರಾಬ್ಬಿ ನದಿಯು ಕಲುಷಿತಗೊಂಡು ಈ ಭಾಗದ ಗೌಸೀಯ ಸ್ಟ್ರೀಟ್, ತಕಿಯಾ ಸ್ಟ್ರೀಟ್, ಡಾರಂಟ, ಚೌಥನಿ, ಫಾರೂಖಿ ಸ್ಟ್ರೀಟ್, ಜಾಮಿಯಾ ಸ್ಟ್ರೀಟ್, ಖಲೀಫಾ ಸ್ಟ್ರೀಟ್, ಬೆಳ್ನಿ, ಮುಂಡಳ್ಳಿ, ಆಸರಕೇರಿ ನಿವಾಸಿಗರಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಕಳೆದ ವರ್ಷ ಇಲ್ಲಿ ಸಾಕಷ್ಟು ಡೆಂಗ್ಯೂ ಪ್ರಕರಣಗಳು ವರದಿಯಾಗಿತ್ತು. ನಾಲ್ಕೈದು ಸಾವುಗಳು ಕೂಡ ಸಂಭವಿಸಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಶರಾಬ್ಬಿ ನದಿಯ ಅವಸಾನ ಯಾರಿಂದಲೂ ಸಹಿಸಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಈ ನದಿಯನ್ನು ಪುನರುಜ್ಜೀವನಗೊಳಿಸಬೇಕು. ಇದಕ್ಕಾಗಿ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕು. ಅಲ್ಲದೆ ಶಮ್ಸುದ್ದೀನ್ ವೃತ್ತದ ಬಳಿಯಿಂದ ಈ ನದಿಗೆ ಒಳಚರಂಡಿ ಪೈಪನ್ನು ಅಳವಡಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಇದನ್ನು ಶರಾಬ್ಬಿ ನದಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಶರಾಬ್ಬಿ ನದಿಯನ್ನು ಕಲುಷಿತಗೊಳಿಸುವ ಯಾವುದೇ ಇಂತಹ ಕಾರ್ಯವನ್ನು ಹೋರಾಟ ಸಮಿತಿ ಸಹಿಸುವುದಿಲ್ಲ ಎಂದು ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.
ಇದನ್ನೂ ಓದಿ : ಲೋಕಸಭೆ ಚುನಾವಣೆ : ಬಿಜೆಪಿಯ ಮೊದಲ ಪಟ್ಟಿಯಲ್ಲಿಲ್ಲ ರಾಜ್ಯದ ಅಭ್ಯರ್ಥಿಗಳು
ಶರಾಬ್ಬಿ ನದಿ ಹೋರಾಟ ಸಮಿತಿಯ ಸಂಚಾಲಕ ಮುಸ್ತಫಾ ಅಸ್ಕರಿ ಪ್ರತಿಭಟನಾ ಮೆರವಣೆಗೆಯ ನೇತೃತ್ವ ವಹಿಸಿದ್ದರು.
ಸಮಿತಿಯ ಪದಾಧಿಕಾರಿಗಳಾದ ಮೌಲ್ವಿ ಅಂಜುಮ್ ಗಂಗಾವಳಿ ನದ್ವಿ, ಮೌಲ್ವಿ ಇರ್ಷಾದ್ ನಾಯ್ತೆ ನದ್ವಿ, ಶಮೂನ್ ಹಾಜಿ ಫಖಿಹ್, ಮುಬಷರ್ ಹುಸೇನ್ ಹಲ್ಲಾರೆ, ಅಶ್ಫಾಕ್ ಕೆ.ಎಂ, ಮೌಲ್ವಿ ಜವಾದ್ ರುಕ್ನುದ್ದೀನ್, ಜುಬೈರ್, ಅಬ್ದುಲ್ ಸಮಿ ಮೆಡಿಕಲ್, ಫಯಾಜ್ ಮುಲ್ಲಾ, ಇಮ್ತಿಯಾಜ್ ಉದ್ಯಾವರ, ಅಸ್ಲಂ ವಲ್ಕಿ, ಮೊಹಮ್ಮದ್ ಗೌಸ್, ನಜೀರ್ ಖಾಸಿಮ್ಜಿ, ಮೊಹತೆಶಮ್ ಜಾನ್ ಅಬ್ದುಲ್ ರಹಮಾನ್, ನಯೀಮ್ ಮೊಟಿಯಾ, ಜಿಲಾನಿ ಶಾಬಂದ್ರಿ, ಅಡ್ವೊಕೇಟ್ ಇಮ್ರಾನ್ ಲಂಕಾ, ಸಿಟಿ ಮೆಡಿಕಲ್ ಇಕ್ಬಾಲ್, ಮೊಹಮ್ಮದ್ ಹುಸೇನ್ ಮುಅಲಿಮ್, ಸಾಜಿದ್ ಮಿಸ್ಬಾ, ಮೊಹತೆಶಮ್ ಹಾಶಿಮ್, ಅಮೀರ್ ಹಮ್ಜಾ, ಸವೂದ್ ಲಂಕಾ, ಹಾರೂನ್ ಸೈಯದ್, ಅಬ್ದುಲ್ ರಶೀದ್ ಐದ್ರುಸಾ, ಜಮೀರ್, ಇರ್ಷಾದ್ ಸಾದಾ, ರಯಿಸ್ ರುಕ್ನುದ್ದೀನ್, ಅಬ್ದುಲ್ ಬಾಸಿತ್ ಗೊಲ್ಟೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ : ಮಾರ್ಚ್ ೫ ರಂದು ಬೆಳಗಾವಿಗೆ ಜೆ.ಪಿ ನಡ್ಡಾ ಆಗಮನ