ಸೊರಬ: ನಾಡ ಹಬ್ಬ ದಸರಾ ಉತ್ಸವಕ್ಕೆ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಕ್ಷೇತ್ರ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಶ್ರೀ ರೇಣುಕಾಂಬ ದೇವಾಲಯದ ಯೋಗೀಶ್ವರ ಮಠದ ಶ್ರೀ ಸುಖದೈವನಾಥ ಅವರ ನೇತೃತ್ವದಲ್ಲಿ ಶರನ್ನವರಾತ್ರಿ ಮೊದಲನೇ ದಿನದ ಕಲಶ ಸ್ಥಾಪನೆ, ಘಟಸ್ಥಾಪನೆಯೊಂದಿಗೆ ವಿಶೇಷ ಪೂಜೆ ಆರಂಭಗೊಂಡಿದ್ದು, ಅನೇಕ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ದೇವಾಲಯದಲ್ಲಿ ನವಧಾನ್ಯಗಳಿಂದ ಘಟಸ್ಥಾಪನೆ, ಕಲಶ ಸ್ಥಾಪನೆ ನೆರವೇರಿಸಲಾಯಿತು. 9 ದಿನಗಳ ಕಾಲ ದೇವಾಲಯದ ಅರ್ಚಕ ಅರವಿಂದ್ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಜರುಗಲಿವೆ.

ಶ್ರೀ ರೇಣುಕಾಂಬ ದೇವಿಯ ಶರನ್ನವರಾತ್ರಿಯ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್ ಶಿವಪ್ರಸಾದ ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ ಚಾಲನೆ ನೀಡಿದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಲಲಿತಾ ಎಂ, ಕಮಲಾಕ್ಷಿ, ಶಿವಶಂಕರ ಗೌಡ, ದೇವಸ್ಥಾನದ ಸಿಬ್ಬಂದಿ ಉಪಸ್ಥಿತರಿದ್ದರು.