ಭಟ್ಕಳ: ಇಲ್ಲಿನ ಜಮಾತೆ ಇಸ್ಲಾಮಿ ಹಿಂದ್ ಹಾಗೂ ಸದ್ಭಾವನಾ ಮಂಚ್ ವತಿಯಿಂದ ಹೊಟೇಲ್ ರಾಯಲ್ ಓಕ್ ನಲ್ಲಿ ಸದ್ಭಾವನಾ ಸೌಹಾರ್ದ ಸಮಾರಂಭ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಜಮಾತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ, ಸದ್ಭಾವನಾ ಮಂಚ್ ರಾಷ್ಟ್ರೀಯ ಸಂಚಾಲಕ ಡಾ.ಮುಹಮ್ಮದ್ ಸಲೀಮ್ ಇಂಜಿನಿಯರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ವೈವಿಧ್ಯತೆ ಇದೆ. ಇಲ್ಲಿನ ಅಹಾರ ಪದ್ಧತಿ, ಉಡುಗೆ-ತೊಡುಗೆ, ಭಾಷೆ, ಸಂಸ್ಕೃತಿ, ಧರ್ಮ, ಆಚಾರ-ವಿಚಾರ ಎಲ್ಲವೂ ವಿಭಿನ್ನವಾಗಿವೆ. ಈ ವೈವಿಧ್ಯತೆ ನಮ್ಮ ದೌರ್ಬಲ್ಯವಾಗದೆ ನಮ್ಮ ಶಕ್ತಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ : ಡಾ.ಟಿ.ಟಿ.ಹೆಗಡೆಯವರ ಜನ್ಮದಿನೋತ್ಸವ ಆಚರಣೆ

ನಾವು ಒಬ್ಬರು ಇನ್ನೊಬ್ಬರನ್ನು ಆದರಿಸಿ ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ನಮಗೆ ಗೌರವ, ಸನ್ಮಾನ, ಸುರಕ್ಷೆ ದೊರೆಯಬೇಕು ಎಂದು ನಾವು ಬಯಸುವುದಾದರೆ ಬೇರೆಯವರಿಗೂ ಗೌರವಿಸಿ ಆದರಿಸುವುದನ್ನು ಕಲಿತುಕೊಳ್ಳಬೇಕು. ಸಮಾಜದ ಪರಸ್ಪರರಲ್ಲಿನ ಅಂತರ ಕಡಿಮೆಯಾಗುತ್ತಿದೆ. ಅಪನಂಬಿಕೆ ಮೂಡುತ್ತಿದೆ. ಇದಕ್ಕೆ ಕಾರಣ ಧರ್ಮ ಎಂದು ಹೇಳಲಾಗುತ್ತಿದೆ. ಧರ್ಮದಿಂದಾಗಿಯೇ ಮನುಷ್ಯ ಮನುಷ್ಯರ ನಡುವೆ ದ್ವೇಷ ಹಗೆತನ ಹುಟ್ಟಿಕೊಳ್ಳುತ್ತಿದೆ ಎಂಬ ಭ್ರಮೆಯನ್ನು ಹುಟ್ಟು ಹಾಕುತ್ತಿದ್ದಾರೆ. ಆದರೆ ಇದು ಸರಿಯಲ್ಲ. ವಾಸ್ತವಿಕವಾಗಿ ಧರ್ಮದಿಂದ ಮನುಷ್ಯ ದೂರ ಆಗುತ್ತಿರುವುದೇ ಇದಕ್ಕೆಲ್ಲ ಕಾರಣವಾಗಿದೆ. ನಾವು ಧರ್ಮವನ್ನು ಗೌರವಿಸಬೇಕು, ಧರ್ಮವನ್ನು ಪಾಲಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ : ಕೌಶಿಕ್ ಶೆಟ್ಟಿ ಸಿ.ಎ. ಪರಿಕ್ಷೆಯಲ್ಲಿ ಉತ್ತೀರ್ಣ

ಧರ್ಮದ ಮೇಲೆ ನೆಲೆ ನಿಲ್ಲುವವರು ಯಾವತ್ತೂ ಹಿಂಸೆಯನ್ನು ಮಾಡುವುದಿಲ್ಲ. ಅದನ್ನು ಪ್ರಚೋದಿಸುವುದಿಲ್ಲ. ರಾಜಕೀಯ ಸ್ವಾರ್ಥಸಾಧನೆಗಾಗಿ ಧರ್ಮ ದುರ್ಬಳಕೆಯಾಗುತ್ತಿದೆ ಎಂದು ಅವರು ವಿಷಾದಿಸಿದರು.

ಇದನ್ನೂ ಓದಿ : ಎರಡು ಬೈಕುಗಳ ನಡುವೆ ಡಿಕ್ಕಿ, ಇಬ್ಬರಿಗೆ ಗಾಯ

ಸದ್ಭಾವನಾ ಮಂಚ್ ನ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದ ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಹಾಗೂ ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಸದ್ಭಾವನಾ ಮಂಚ್ ಎಂಬುದು ದೇಶದ ಉದ್ದಗಲಕ್ಕೂ ಸೌಹಾರ್ದ, ಸಾಮರಸ್ಯವನ್ನು ಬಲಪಡಿಸುವುದಕ್ಕಾಗಿ ಮತ್ತು ಒಂದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕಾಗಿ ಕಾರ್ಯಾಚರಿಸುತ್ತಿರುವಂತಹ ವೇದಿಕೆಯಾಗಿದೆ. ನಮ್ಮ ಪ್ರದೇಶ, ಮೊಹಲ್ಲಾಗಳಲ್ಲಿ ಸಾಮರಸ್ಯವನ್ನು ಕಾಯ್ದುಕೊಳ್ಳುವುದು, ಅಶಾಂತಿ ಉಂಟಾಗದಂತೆ ನಮ್ಮಲ್ಲಿನ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಕ್ರೀಯವಾಗಿದೆ. ನೆಮ್ಮದಿ, ಸಂತೃಪ್ತಿ, ಭ್ರಮೆಗಳಿಂದ ಮುಕ್ತವಾದ ಸಮಾಜ ನಿರ್ಮಾಣ ಇದರ ಗುರಿಯಾಗಿದೆ. ನಮ್ಮ ದೊಡ್ಡ ದುರಂತ ಎಂದರೆ ಇಂದು ನಮ್ಮ ಸಮಾಜದಲ್ಲಿ ಮೌಲ್ಯಗಳು ನಶಿಸಿ ಹೋಗುತ್ತಿವೆ. ಅಧರ್ಮಿಗಳು, ಅಪರಾಧಿಗಳನ್ನು ಸಮಾಜದ ನಾಯಕ (ಲೀಡರ್) ಎಂದು ಗುರುತಿಸುತ್ತಿದೆ. ಯಾರು ಹೆಚ್ಚು ದ್ವೇಷವನ್ನು ಹರಡುತ್ತಾರೋ ಅವರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಇಂದು ಸುಳ್ಳು ವಿಜ್ರಂಭಿಸುತ್ತಿದೆ. ಸುಳ್ಳುಗಳ ಮೂಲಕ ಭ್ರಮೆಯನ್ನು ಹುಟ್ಟುಹಾಕಲಾಗುತ್ತಿದೆ. ಇಂತಹ ದಯನೀಯ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಸದ್ಭಾವನಾ ಮಂಚ್ ಮೂಲಕ ನಮ್ಮ ಸಮಾಜದಲ್ಲಿ ಮೌಲ್ಯಗಳನ್ನು ಬೆಳೆಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.

ಇದನ್ನೂ ಓದಿ : ಸಿ.ಎ. ಪರೀಕ್ಷೆಯಲ್ಲಿ ಕಲ್ಪನಾ ಮಾಸ್ತಿ ಮೊಗೇರ ಉತ್ತೀರ್ಣ

ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಸದ್ಭಾವನಾ ಮಂಚ್ ಭಟ್ಕಳದ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ ಮಾತನಾಡಿದರು. ಜಮಾತೆ ಇಸ್ಲಾಮಿ ಭಟ್ಕಳ ಶಾಖೆಯ ಕಾರ್ಯದರ್ಶಿ ಅಬ್ದುಲ್ ರವೂಫ್ ಸವಣೂರು ಸ್ವಾಗತಿಸಿದರು. ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಅರ್ಪಿಸಿದರು. ಜಮಾತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್, ಉಪಸಂಚಾಲಕ ಅಮೀನ್ ಆಹ್ಸನ್, ಉ.ಕ. ಜಿಲ್ಲಾ ಸಂಚಾಲಕ ಅಬ್ದುಲ್ ಮನ್ನಾನ್ ಶಿರಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.